ಬೆಳಗಾವಿ: ರಾಜ್ಯದಲ್ಲಿ ಹಿಂದೂ ಯುವಕರ ಹತ್ಯೆ ಆಗುತ್ತಿದ್ದು, ಪ್ರಕರಣ ಹಿಂದೆ ಇರುವ ಪಿಎಫ್‌ಐ, ಸಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇ ಧಿಸುವಂತೆ ಆಗ್ರಹಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಕೃಷ್ಣದೇವರಾಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಬಿವಿಪಿ ಕಾರ್ಯಕರ್ತರು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರವೀಣ ನೆಟ್ಟಾರು ಹತ್ಯೆ ಮಾಡಿರುವ ಮತಾಂಧ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಹಿಂದೂ ಸಂಘಟನೆಗಳ ಹಾಗೂ ಒಂದು ಸಿದ್ಧಾಂತ ಪರವಾಗಿ ಇರುವವರನ್ನು ಕೊಲೆ ನಡೆಯುತ್ತಿದ್ದರೂ ಸರ್ಕಾರ ಸುಮ್ಮನೇ ಕುಳಿತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಪದೇ ಪದೇ ಇಂತಹ ಕೊಲೆಗಳು ನಡೆಯುತ್ತಿರುವುದರಿಂದ ರಾಜ್ಯ ಗೃಹ ಇಲಾಖೆಯನ್ನು ಜನರು ಪ್ರಶ್ನಿಸುವಂತೆ ಆಗಿದೆ. ಕೆಲವೇ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆ ಮಾಡಲಾಗಿದೆ. ಈ ಕೊಲೆ ಮಾಸುವ ಮುನ್ನವೇ ಈಗ ಬೆಳ್ಳಾರೆಯಲ್ಲಿ ಪ್ರವೀಣನ ಹತ್ಯೆ ಆಗಿದೆ. ಇದಕ್ಕೆ ರಾಜ್ಯ ಸರ್ಕಾರದ ಗೃಹ ಇಲಾಖೆಯ ವೈಫಲ್ಯ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಈ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾನೂನು ರೂಪಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಹೇಯ ಕೃತ್ಯ ಎಸಗುವವರಿಗೆ ಭಯ ಹುಟ್ಟಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.
ಒಂದು ಸಿದ್ಧಾಂತದ ಪರವಾಗಿ ರಾಷ್ಟ್ರೀಯತೆ ವಿಚಾರಧಾರೆ ಇಟ್ಟುಕೊಡು ಕೆಲಸ ಮಾಡುವ ಕಾರ್ಯಕರ್ತರ ಹತ್ಯೆ ಮಾಡುತ್ತಿರುವವರ ಹಿಂದೆ ಪಿಎಫ್‌ಐ, ಸಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳ ಬೆಂಬಲ ಇರುವುದು ಎಲ್ಲ ಪ್ರಕರಣಗಳಲ್ಲಿ ಕಂಡು ಬರುತ್ತಿದೆ. ಸರ್ಕಾರ ಕೂಡಲೇ ಈ ಸಂಘಟನೆಗಳನ್ನು ನಿಷೇ ಧಿಸುವಂತೆ ಆಗ್ರಹಿಸಿದರು. ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ರೋಹಿತ್ ಉಮನಾದಿಮಠ, ವಿಭಾಗ ಸಂಘಟನಾ ಕಾರ್ಯದರ್ಶಿ ಗಂಗಾಧರ ಹಂಜಗಿ, ಶಿವಾನಂದ ಬಿಜ್ಜರಗಿ, ಕಿರಣ ದುಕಾನದಾರ, ಸಮ್ಮೇದ್ ಖವಟಕೊಪ್ಪ, ರೋಹಿತ್ ಆಲಕುಂಟೆ, ಸಂದೀಪ ದಂಡಗಲ್, ಸಂಧ್ಯಾ ಹಳ್ಳಿಕೇರಿ, ಆರತಿ ಸೇರಿದಂತೆ ಇತರರು ಇದ್ದರು.