ಚಿತ್ರದುರ್ಗ: ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಹಿಂದಿ, ಉರ್ದು ಮತ್ತು ಸಂಸ್ಕೃತ ವಿಷಯಗಳ ಪರೀಕ್ಷೆ ವೇಳೆ ಅಕ್ರಮ ನಡೆದಿದ್ದು, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಎಬಿವಿಪಿಯಿಂದ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಆ. 16ರಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆದಿದ್ದು, ಪರೀಕ್ಷೆ ನಡೆಯುವಾಗಲೇ ತರಗತಿಗಳನ್ನು ನಡೆಸಲಾಗಿದೆ. ಇದು ಗೌಪ್ಯತೆ ಮತ್ತು ಪರೀಕ್ಷೆ ನಿಯಮ ಉಲ್ಲಂಘನೆಯಾಗಿದೆ.
ಕಾಲೇಜಿನ ಪ್ರಾಚಾರ್ಯರು ಪರೀಕ್ಷೆ ಸಮಯದಲ್ಲಿ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ನಡೆಸಿರುವುದರಿಂದ, ವಿದ್ಯಾರ್ಥಿಗಳ ಯೂನಿಫಾರಂ ಹಾಕಿಕೊಂಡು ಬಂದಿರುವುದರಿಂದ ಪರೀಕ್ಷಾ ವಿದ್ಯಾರ್ಥಿಗಳು ಹಾಗೂ ತರಗತಿ ವಿದ್ಯಾರ್ಥಿಗಳು ಯಾರೆಂಬುದು ಗೊತ್ತಾಗಿಲ್ಲ. ಉದ್ದೇಶಪೂರ್ವಕವಾಗಿ ಒಳಸಂಚು ಮಾಡಿ ಪರೀಕ್ಷೆಯಲ್ಲಿ ಅಕ್ರಮವಾಗಿ ಬೇರೆ ವಿದ್ಯಾರ್ಥಿಗಳಿಂದ ಪರೀಕ್ಷೆ ಬರೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಸದರಿ ಕಾಲೇಜಿನಲ್ಲಿ ಅದೇ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುವ ವಿದ್ಯಾರ್ಥಿ ಪರೀಕ್ಷೆ ಬರೆದಿರುತ್ತಾರೆ.
ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಯಾವುದೇ ಕ್ರಮ ಜರುಗಿಸಿಲ್ಲ. ಆದ್ದರಿಂದ ತಕ್ಷಣ ಪ್ರಾಚಾರ್ಯರನ್ನು ಅಮಾನತು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಇದೇ ಕಾಲೇಜಿನ ಪ್ರಾಚಾರ್ಯರು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ನಡೆಯುವಾಗ ಕಾಲೇಜಿನ ವಿದ್ಯಾರ್ಥಿಗಳಿಗೆ ತ್ರಿವರ್ಣ ಧ್ವಜಗಳನ್ನು ನೀಡಿಲ್ಲ. ಈ ಮೂಲಕ ರಾಷ್ಟ್ರಭಕ್ತಿಗೆ ಧಕ್ಕೆ ತಂದಿದ್ದಾರೆ. ಕಾಲೇಜಿನಲ್ಲಿ ಆ. 15ರಂದು ಯಾವುದೇ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಲ್ಲ.
ವಿದ್ಯಾರ್ಥಿಗಳಿಗೆ ನೀಡಬೇಕಾಗಿದ್ದ ಧ್ವಜಗಳು ಎಲ್ಲಿ ಹೋದವು ಎನ್ನುವ ತನಿಖೆಯೂ ಆಗಬೇಕು. ಈ ಕಾಲೇಜಿನಲ್ಲಿ ತುರ್ತಾಗಿ ಟಿಸಿ ಪಡೆಯಲು 1 ಸಾವಿರ ರೂ. ನೀಡಬೇಕಿದೆ. ಅಂಕಪಟ್ಟಿಗೆ ಪ್ರತ್ಯೇಕವಾಗಿ 200 ರೂ. ಕೊಡಬೇಕು. ಕಾಲೇಜಿನಿಂದ ಕಾಲೇಜಿಗೆ ವರ್ಗಾವಣೆ ಪಡೆಯುವಾಗ ದಾಖಲೆಗಳನ್ನು ನೀಡಲು ಹಣ ಪಡೆಯುತ್ತಿದ್ದಾರೆ. ಕಾಲೇಜು ಅಭಿವೃದ್ಧಿ ಶುಲ್ಕವನ್ನು 800 ರೂ.ಗಳಿಗೆ ಹೆಚ್ಚಿಸಿದ್ದಾರೆ. ಸರ್ಕಾರೇತರ ಕಾಲೇಜು ಅಕೌಂಟ್‌ನಲ್ಲಿ ಮುಂಗಡವಾಗಿ 3 ಲಕ್ಷ ರೂ.ಗಳನ್ನು ಡ್ರಾ ಮಾಡಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಉಪನ್ಯಾಸಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಎಬಿವಿಪಿ ಕಾರ್ಯಕರ್ತರಾದ ಆದರ್ಶ್,
ಸುದರ್ಶನ ನಾಯಕ, ಪ್ರಜ್ವಲ್, ಲಕ್ಷ್ಮೀ, ಗೋಪಿ ಇತರರು ಇದ್ದರು.