ದಾವಣಗೆರೆ: ರಾಜ್ಯದ ಕೆಲ ವಿಶ್ವವಿದ್ಯಾಲಯಗಳ ಕುಲಪತಿ, ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದಿದೆನ್ನಲಾದ ಭ್ರಷ್ಟಾಚಾರದ ತನಿಖೆಗೆ ಒತ್ತಾಯಿಸಿ ಗುರುವಾರ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಶಿಕ್ಷಣ ಮಾರಾಟ ವಸ್ತು ಅಲ್ಲ. ಸರ್ವರಿಗೂ ದೊರೆಯುವಂತಾಗಬೇಕು ಎಂಬ ಶ್ರೇಷ್ಠ ಸಂಸ್ಕೃತಿ ಮತ್ತು ಶಿಕ್ಷಣದ ಮೂಲ ಉದ್ದೇಶ ಎತ್ತಿ ಹಿಡಿಯಲು ಪ್ರಾರಂಭವಾಗಿರುವ ವಿಶ್ವವಿದ್ಯಾಲಯಗಳ ಪೈಕಿ ಈಗ ಕೆಲ ವಿಶ್ವವಿದ್ಯಾಲಯಗಳಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯೆ ಆಗದೆ ಶೈಕ್ಷಣಿಕ ವಾತಾವರಣವನ್ನು ಹಾಳು ಮಾಡುತ್ತಿರುವುದು ಶೋಚನೀಯ ಸಂಗತಿ.
ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ 1,700 ಬೋಧಕ, 4,202 ಬೋಧಕೇತರ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ. 412 ಸರ್ಕಾರಿ ಪದವಿ ಕಾಲೇಜುಗಳ ಪೈಕಿ 372 ಕಾಲೇಜುಗಳಲ್ಲಿ ಗ್ರೇಡ್-1 ಪ್ರಾಶುಂಪಾಲರ ಹುದ್ದೆ ಮಂಜೂರಾಗಿವೆ. ಇಡೀ ರಾಜ್ಯದಲ್ಲಿ 6 ಹುದ್ದೆ ನೇಮಕವಾಗಿವೆ. 366 ಹುದ್ದೆ ಖಾಲಿ ಇರುವುದು ಸರ್ಕಾರ ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆ ಎಂಥದ್ದು ಎಂಬುದರ ಕೈಗನ್ನಡಿ ಎಂದು ಕಾರ್ಯಕರ್ತರು ದೂರಿದರು.
ನೇಮಕಾತಿ ನಡೆಯದೇ ಇರುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಕೆಲ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದ ಕೇಂದ್ರಗಳಾಗದೇ ಭ್ರಷ್ಟಾಚಾರದ ಕೇಂದ್ರಗಳಾಗಿವೆಯೇನೋ ಎನ್ನುವ ವಾತಾವರಣ ಕಂಡು ಬರುತ್ತಿದೆ. ಕಟ್ಟಡ ಕಾಮಗಾರಿ, ಪ್ರಯೋಗಾಲಯ ಅಭಿವೃದ್ಧಿ, ಉಪಕರಣಗಳ ಖರೀದಿ, ಅಂಕಪಟ್ಟಿ ವ್ಯವಹಾರ, ಸಿಬ್ಬಂದಿ ನೇಮಕಾತಿ ಅವ್ಯವಹಾರ ನಡೆಯುತ್ತಿದೆ. 17 ವಿಶ್ವವಿದ್ಯಾಲಯದಲ್ಲಿ 500 ಕೋಟಿಗೂ ಅಧಿಕ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಸರ್ಕಾರ ತನಿಖೆಗೆ ಒಳಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.