ಬಂಗಾರಪೇಟೆ: ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೂಲಿಕಾರ್ಮಿಕರಿಗೆ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಗ್ರಾಪಂನಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್‌ಕಾರ್ಡ್ ಹೊಂದಿರುವವರಿಗೆ ಕೆಲಸ ನೀಡದೆ, ಜೆಸಿಬಿ ಯಂತ್ರ ಬಳಸಿ ಸರ್ಕಾರ ಅನುದಾನ ದುರುಪಯೋಗ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಸೂಲಿಕುಂಟೆ ರಮೇಶ್ ಆರೋಪಿಸಿದರು.
ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಪ್ರತಿಭಟಿಸಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಯಂತ್ರೋಪಕರಣ ಬಳಸಿ ಕಾಮಗಾರಿ ನಡೆಸುವ ಮೂಲಕ ಜನರನ್ನು ಕೆಲಸದಿಂದ ದೂರವಿಟ್ಟು ಅಕ್ರಮವೆಸಗಲಾಗುತ್ತಿದೆ. ಈ ಬಗ್ಗೆ ಅನೇಕ ಬಾರಿ ದೂರು ನೀಡಿದ್ದರೂ ಸಂಬಂಧಪಟ್ಟವರು ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿದರು.
ಕೆಆರ್‌ಐಡಿಎಲ್ ಸಂಸ್ಥೆಯು ಸರ್ಕಾರಿ ಕೆಲಸಗಳನ್ನು ಗುತ್ತಿಗೆವಹಿಸಿಕೊಂಡು ಮೀಸಲಾತಿ ಅನುದಾನವನ್ನು ಗುಳಂ ಮಾಡುತ್ತಿದೆ. ಕೆಜಿಎಫ್ ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ರೂ. ಅವ್ಯವಹಾರ ನಡೆಸಿದೆ. ನೂತನವಾಗಿ ಹಾಸ್ಟೆಲ್ ಕಟ್ಟಡಗಳು ನಿರ್ಮಾಣವಾಗಿದ್ದು, ಅವುಗಳ ದುರಸ್ತಿ ಹೆಸರಿನಲ್ಲಿ ಹಣ ದುರ್ಬಳಕೆ ಮಾಡಲಾಗಿದೆ ಎಂದು ಆರೋಪಿಸಿದರು.
ಇಒ ಎನ್.ವೆಂಕಟೇಶಪ್ಪ, ನರೇಗಾ ಸಹಾಯಕ ನಿರ್ದೇಶಕ ಬಿ.ಎಂ. ಮಂಜುನಾಥ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಸೂಕ್ತ ಕ್ರಮದ ಭರವಸೆ ನೀಡಿದರು. ದಸಂಸ ಜಿಲ್ಲಾ ಸಂಚಾಲಕ ಕೆ.ಪಳನಿ, ಮುನಿಯಪ್ಪ, ತಾಲೂಕು ಸಂಚಾಲಕ ದೇಶಿಹಳ್ಳಿ ಶ್ರೀನಿವಾಸ್, ಮುಖಂಡರಾದ ಚೆನ್ನಕೃಷ್ಣ, ಶ್ರೀನಿವಾಸ್, ನವೀನ್, ಸಾಕಪ್ಪ, ಗೋವಿಂದಪ್ಪ, ಸೂಲಿಕುಂಟೆ ರವೀಂದ್ರ, ಸುಗಂದ ಹಾಜರಿದ್ದರು.