ಬಾಗಲಕೋಟೆ: ಛಲವಾದಿ ಮಹಾಸಭಾದ ಹೆಸರು ಹೇಳಿಕೊಂಡು ಕಾಂಗ್ರೆಸ್ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿ ಎಂದು ವಿಕೃತ ಮನಸ್ಸಿನ ಕೆಲ ವ್ಯಕ್ತಿಗಳು ಹೇಳಿದ್ದು, ಇದಕ್ಕೆ ಸಮಾಜ ಬಾಂಧವರು ತಲೆ ಕೆಡಿಸಿಕೊಳ್ಳಬಾರದು. ಇಂತಹ ಹೇಳಿಕೆಗೆ ನಮ್ಮ ಮಹಾಸಭಾ ಬೆಂಬಲ ಕೊಡುವುದಿಲ್ಲ ಎಂದು ಛಲವಾದಿ ಮಹಾಸಭಾದ ಮುಖಂಡ ಎಂ.ಎಚ್. ಚಲವಾದಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಲವಾದಿ ಮಹಾಸಭಾ ಸಂಘಟನೆಯು ಯಾವುದೇ ವ್ಯಕ್ತಿಯ, ಪಕ್ಷಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಛಲವಾದಿ ಮಹಾಸಭಾ ಹೆಸರಿಗೆ ಮಸಿ ಬಳೆಯುವ ಕಿಡಿಗೇಡಿಗಳು ಈ ರೀತಿ ಯತ್ನ ಮಾಡುತ್ತಿದ್ದಾರೆ ಎಂದರು.
ಈಗಾಗಲೇ ವಿವಿಧ ದಲಿತ ಪರ ಚಿಂತಕರು, ಛಲವಾದಿ ಮಹಾಸಭಾ ಸಂಘಟನೆ ಪದಾ ಧಿಕಾರಿಗಳು ಸಿಎಂ ಸಿದ್ದರಾಮಯ್ಯ, ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲವಾಗಿ ನಿಂತಿದ್ದೇವೆ. ದೇಶದ ಇತಿಹಾಸದಲ್ಲಿ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯವರಿಗೆ ವಿವಿಧ ಇಲಾಖೆಗಳಿಂದ ಅನೇಕ ಸೌಲಭ್ಯಗಳನ್ನು ನೀಡಿ ಸಮಾಜದ ಅಭಿವೃದ್ಧಿ ಮಾಡಿದ್ದಾರೆ. ಕ್ಷೀರಭಾಗ್ಯ, ಅನ್ನಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಎಲ್ಲ ಜಾತಿ ವರ್ಗಕ್ಕೂ ನೀಡಿದೆ. ಆದ್ದರಿಂದ ಛಲವಾದಿ ಮಹಾಸಭಾ ಸಂಘಟನೆ ಹೇಗೆ ವಿರೋಧ ವ್ಯಕ್ತಪಡಿಸಲು ಸಾಧ್ಯ ಎಂದರು.
ಸಿಎಂ ಸಿದ್ದರಾಮಯ್ಯ ದಲಿತರ, ಹಿಂದುಳಿದ ವರ್ಗಗಳ ಶಕ್ತಿಯಾಗಿ ಅನೇಕ ಯೋಜನೆ ನೀಡಿದ್ದಾರೆ. ಅಲ್ಲದೇ ಸರಕಾರಿ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲೂ ಶೇ.18 ರಷ್ಟು ಮೀಸಲಾತಿ ನೀಡಿದ್ದಾರೆ. ಛಲವಾದಿ ಸಮಾಜದ ಅಭಿವೃದ್ಧಿಗೆ ಸಿದ್ದರಾಮಯ್ಯ ಅನೇಕ ಕಾರ್ಯ ಮಾಡಿದ್ದಾರೆ. ಅವರ ಗೆಲುವಿಗೆ ಶ್ರಮಿಸಲಿದ್ದೇವೆ ಎಂದು ತಿಳಿಸಿದರು. ನಗರಸಭೆ ಸದಸ್ಯ ತಿಪ್ಪಣ್ಣ ನೀಲನಾಯಕ ಮಾತನಾಡಿ, ಮೇ 8ರಂದು ಬಾದಾಮಿ ನಗರದಲ್ಲಿ ಎಂ.ಎಚ್.ಛಲವಾದಿ ನೇತೃತ್ವದಲ್ಲಿ ಛಲವಾದಿ ಮಹಾಸಭಾ ಸಂಘಟನೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಛಲವಾದಿ ಸಮಾಜದ ಬಾಂಧವರು ಭಾಗವಹಿಸಬೇಕು ಎಂದು ಮನವಿ ಮಾಡಿದರು. ಛಲವಾದಿ ಮಹಾಸಭಾ ಸಂಘಟನೆ ಮುಖಂಡ ಬಸವರಾಜ ಛಲವಾದಿ, ಎನ್.ಬಿ. ಗಸ್ತಿ, ಗ್ಯಾನಪ್ಪ ಛಲವಾದಿ ಮುಂತಾದವರು ಉಪಸ್ಥಿತರಿದ್ದರು.