ಕಾರ್ಕಳ: ಇಲ್ಲಿನ ಕಾರೋಲ್‌ಗುಡ್ಡೆ -ಜೋಡುಕಟ್ಟೆ ರಸ್ತೆ ಸಂಚಾರಕ್ಕೆ ತೀರಾ ಅಯೋಗ್ಯವಾಗಿದ್ದು ಸ್ಥಳೀಯರು, ಸಾರ್ವಜನಿಕರು, ವಾಹನ ಸವಾರರು, ದಿನೇ ದಿನೇ ಹಿಡಿಶಾಪ ಹಾಕುವ ರಸ್ತೆಯಾಗಿ ಮಾರ್ಪಟ್ಟಿದೆ.ಮಿಯ್ನಾರು ಗ್ರಾಮದ ಕಾರೋಲ್‌ಗುಡ್ಡೆ ರಸ್ತೆಯು ಅತ್ಯಂತ ನಿಭಿಡತೆಯಿಂದ ಕೂಡಿದ್ದು ಇಲ್ಲಿನ 2 ಕಿ.ಮೀ. ವ್ಯಾಪ್ತಿಯಲ್ಲಿ ಸುಮಾರು 200ರಷ್ಟು ಮನೆಗಳಿವೆ.ಆದರೆ ಆ ಮನೆಗಳೆಲ್ಲವನ್ನು ಸಂಧಿ ಸಲು ಇರಬೇಕಾದ ರಸ್ತೆ ಮಾತ್ರ ಹಾಳು ಬಿದ್ದು ಹೋಗಿದೆ.
ಸಂಚಾರಕ್ಕೆ ತೊಡಕು
ರಸ್ತೆಯಲ್ಲಿ ಬಹುತೇಕ ವಾಹನಗಳು ಸಂಚರಿಸುತ್ತಿದ್ದು ಅಲ್ಲಲ್ಲಿ ಹೊಂಡಗುಂಡಿಗಳು ಹುಟ್ಟಿಕೊಂಡ ಪರಿಣಾಮ ವಾಹನ ಸಂಚಾರ ದಿಕ್ಕು ತಪ್ಪಿದಂತಾಗಿದೆ. ದಿನೇ ದಿನೇ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಪರದಾಡುವುದು ಮಾಮೂಲಿ ಎಂಬಂ ತಾಗಿದೆ. ಮಳೆಗಾಲದಲ್ಲಿಯೂ ಈ ರಸ್ತೆ ಕಂಬಳದ ಗದ್ದೆಯಂತೆ ಭಾಸವಾಗುತ್ತದೆ.ಹಾಗಾಗಿ ರಸ್ತೆಯಿಂದ ಅಪಾಯ ಸಂಭವಿಸುವುದು ಕೂಡ ಕಟ್ಟಿಟ್ಟ ಬುತ್ತಿ ಎಂಬಂತಾಗಿದೆ.
ಈ ರಸ್ತೆ ಸಂಚಾರಕ್ಕೆ ಇಷ್ಟೊಂದು ದುಸ್ತರವಾಗಿದ್ದರೂ ಸ್ಥಳೀಯ ಜನ ಪ್ರತಿನಿಧಿಗಳಿಗೆ ಇಲ್ಲಿನ ವಾಹನ ಸವಾರರ ಗೋಳು, ಪಾದಚಾರಿಗಳ ಪಾಡು ಕಣ್ಣಿಗೆ ಕಾಣಿಸುತ್ತಿಲ್ಲ. ಈ ರಸ್ತೆಯಿಂದ ಸಾಕಷ್ಟು ಉಪಟಳಗಳನ್ನು ಅನುಭವಿಸಿದ್ದೇವೆ. ನಮ್ಮ ಗೋಳನ್ನು ಕೇಳುವವರೇ ಇಲ್ಲ. ಆದಷ್ಟು ಬೇಗ ಈ ರಸ್ತೆಯ ಅವ್ಯವಸ್ಥೆಗಳಿಗೆ ಮುಕ್ತಿ ನೀಡಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯ.