ಅಬುಧಾಬಿ: ಇಲ್ಲಿನ ಬಿಗ್ ಟಿಕೆಟ್ ಡ್ರಾದಲ್ಲಿ ಇನ್ನೊಬ್ಬ ಭಾರತೀಯ ಯುವಕ ಜಾಕ್ ಪಾಟ್ ಬಾರಿಸಿದ್ದಾರೆ. ಕೇರಳ ಮೂಲದ 28 ವರ್ಷ ಪ್ರಾಯದ ಶ್ರೀನು ಶ್ರೀಧರನ್ ನಾಯರ್ ಎಂಬ ಯುವಕನಿಗೆ 15 ಮಿಲಿಯನ್ ಯು.ಎ.ಇ. ಧಿರಮ್ ಮೌಲ್ಯದ ಮೊತ್ತ ಜಾಕ್ ಪಾಟ್ ಹೊಡೆದಿದ್ದು ಭಾರತೀಯ ರೂಪಾಯಿಗಳ ಲೆಕ್ಕಾಚಾರದಲ್ಲಿ ಈ ಜಾಕ್ ಪಾಟ್ ನ ಮೌಲ್ಯ ಹತ್ತಿರ ಹತ್ತಿರ 29 ಕೋಟಿ ರೂಪಾಯಿಗಳಾಗುತ್ತವೆ.
ನವಂಬರ್ 03ರ ಶನಿವಾರದಂದು ನಡೆದ ಬಿಗ್ ಟಿಕೆಟ್ ಡ್ರಾದಲ್ಲಿ ಶ್ರೀನು ಶ್ರೀಧರನ್ ನಾಯರ್ ಮತ್ತು ಆತನ ಕಂಪೆನಿಯ 21 ಜನ ಸಹೋದ್ಯೋಗಿಗಳು ಖರೀದಿಸಿದ ಟಿಕೆಟ್ ಗೆ ಈ ಜಾಕ್ ಪಾಟ್ ಹೊಡೆದಿದೆ.
ಈ ಟಿಕೆಟ್ ನ ಬೆಲೆ 500 ಧಿರಮ್ ಗಳಾಗಿತ್ತು ಅಂದರೆ 9,631 ರೂಪಾಯಿಗಳಾಗಿತ್ತು. ಶ್ರೀಧರನ್ ಅವರು ಈ ಟಿಕೆಟಿಗಾಗಿ ತಮ್ಮ ಪಾಲು 25 ಧಿರಮ್ (481 ರೂಪಾಯಿ) ನೀಡಿದ್ದರು. ಇದೀಗ ಶ್ರೀಧರನ್ ಅವರ ಪಾಲಿಗೆ ಬಹುಮಾನ ಮೊತ್ತವಾಗಿ 7.5 ಲಕ್ಷ ಧಿರಮ್ ಮೊತ್ತ ಸಿಗಲಿದ್ದು ಅದು ಭಾರತೀಯ ರೂಪಾಯಿ ಮೌಲ್ಯದಲ್ಲಿ 1.42 ಕೋಟಿ ರೂಪಾಯಿಗಳಾಗಿರಲಿದೆ.
ಈ ಮೂಲಕ ತಿಂಗಳಿಗೆ 1500 ಧಿರಮ್ ಗೆ ಅಂದರೆ ಸುಮಾರು 29 ಸಾವಿರ ರೂಪಾಯಿಗೆ ಇಲ್ಲಿನ ಕಂಪೆನಿಯಲ್ಲಿ ಕೆಲಸಮಾಡುತ್ತಿದ್ದ ಈ ಯುವಕನ ಬದುಕು ರಾತ್ರಿ ಬೆಳಗಾಗುವುದರೊಳಗೆ ಬದಲಾದಂತಾಗಿದೆ.
‘ನನಗೆ ಏನು ಹೇಳಬೇಕೆಂದೇ ತೋಚುತ್ತಿಲ್ಲ. ನಾನು ಎಷ್ಟು ಹಣವನ್ನು ಗೆದ್ದಿದ್ದೇನೆಂದು ಸರೀಯಾಗಿ ನನಗೆ ಗೊತ್ತಿಲ್ಲ. ಲಾಟರಿ ಟಿಕೆಟಿನ ಮೊತ್ತಕ್ಕೆ ನನ್ನ ಪಾಲು 25 ಧಿರಮ್ ನೀಡಿದ್ದೇನೆ ಹಾಗಾಗಿ ಎಲ್ಲವೂ ಇನ್ನು ಗೊತ್ತಾಗಬೇಕಷ್ಟೇ’ ಎಂದು ಶ್ರೀನು ಶ್ರೀಧರನ್ ನಾಯರ್ ತಮಗೆ ಕರೆಮಾಡಿದ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ತನಗೆ ಸಿಕ್ಕ ಬಹುಮಾನ ಮೊತ್ತದಲ್ಲಿ ಕೇರಳದ ಅಲೆಪ್ಪಿಯಲ್ಲಿ ತಾನು ಕಟ್ಟಿಸುತ್ತಿದ್ದ ಮನೆಯನ್ನು ಪೂರ್ಣಗೊಳಿಸುವ ಇರಾದೆಯನ್ನು ಶ್ರೀನು ಶ್ರೀಧರನ್ ನಾಯರ್ ಹೊಂದಿದ್ದಾರೆ ಮತ್ತು ಸ್ವಲ್ಪ ಹಣವನ್ನು ಭವಿಷ್ಯಕ್ಕಾಗಿ ಉಳಿತಾಯ ಮಾಡುವ ಯೋಚನೆಯೂ ನಾಯರ್ ಗಿದೆ.
ಆದಿತ್ಯವಾರದಂದು ಡ್ರಾ ವಿಚಾರವನ್ನು ತಿಳಿಸಲು ಸಂಘಟಕರು ಶ್ರೀಧರನ್ ಅವರಿಗೆ ನಿರಂತರವಾಗಿ ಕರೆ ಮಾಡಿದ್ದಾರೆ. ಆದರೆ ಶ್ರೀಧರನ್ ಅವರ ಮೊಬೈಲ್ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ಕೊನೆಗೂ ಸೋಮವಾರದಂದು ಕರೆಗೆ ಸಿಕ್ಕ ಶ್ರೀಧರನ್ ಅವರಿಗೆ ಡ್ರಾ ಸಂಘಟಕರು ಅವರು ಕೋಟಿ ಗೆದ್ದಿರುವ ವಿಚಾರವನ್ನು ಹೇಳಿದ್ದಾರೆ.
ಕಳೆದ ತಿಂಗಳು ಇನ್ನೊಬ್ಬ ಭಾರತೀಯ ಯುವಕ ಈ ಬಿಗ್ ಟಿಕೆಟ್ ಡ್ರಾ ಮೂಲಕ ಕೋಟ್ಯಾಧಿಪತಿಯಾಗಿದ್ದರು.