Advertisement

ಜಾಧವ್‌ ಪ್ರಕರಣ: ಸಂಸತ್ತಿನಲ್ಲಿ ಪಾಕ್‌ ಜನ್ಮ ಜಾಲಾಡಿದ ಸುಶ್ಮಾ

12:01 PM Dec 28, 2017 | Team Udayavani |

ಹೊಸದಿಲ್ಲಿ : ಕುಲಭೂಷಣ್‌ ಜಾಧವ್‌ ಅವರನ್ನು ಇಸ್ಲಾಮಾಬಾದ್‌ನಲ್ಲಿ  ಭೇಟಿಯಾಗುವ ಸಂದರ್ಭದಲ್ಲಿ ಜಾಧವ್‌ ಅವರ ತಾಯಿ ಮತ್ತು ಪತ್ನಿಯನ್ನು ಅವಮಾನಕಾರಿಯಾಗಿ ನಡೆಸಿಕೊಂಡ ಪಾಕ್‌ ಕೃತ್ಯಕ್ಕೆ ರಾಜ್ಯಸಭೆಯಲ್ಲಿಂದು ತೀವ್ರ ಪ್ರತಿಕ್ರಿಯೆ ನೀಡಿದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌, “ಪಾಕಿಸ್ಥಾನ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆಯಲ್ಲದೆ ಅದರ ಈ ಪರಿಯ ಕೃತ್ಯವು ಎಣೆಯಿಲ್ಲದ ಅಸಂಬದ್ಧ ಕೃತ್ಯವಾಗಿದೆ’ ಎಂದು ಖಂಡಿಸುವ ಮೂಲಕ ಸಂಸತ್ತಿನಲ್ಲಿ ಪಾಕ್‌ ಜನ್ಮ ಜಾಲಾಡಿದರು.

Advertisement

ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯಗಳ ಆರೋಪದ ಮೇಲೆ ಬಂಧಿತರಾಗಿ ಪಾಕ್‌ ಮಿಲಿಟರಿ ಕೋರ್ಟ್‌ ನಿಂದ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ 47ರ ಹರೆಯದ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ಇಸ್ಲಾಮಾಬಾದ್‌ನಲ್ಲಿ  ಬಿಗಿ ಭದ್ರತೆಯಲ್ಲಿ ಭೇಟಿಯಾಗುವುದಕ್ಕೆ ಪಾಕ್‌ ಸರಕಾರ ಅವಕಾಶ ನೀಡಿತ್ತು. ಆದರೆ ಜಾಧವ್‌ ಮತ್ತು ಅವರ ತಾಯಿ, ಪತ್ನಿಯ ನಡುವೆ ಗಾಜಿನ ಪರದೆಯನ್ನು ಭದ್ರತೆಯ ನೆಪದಲ್ಲಿ ಅಣಿಗೊಳಿಸುವ ಮೂಲಕ ಭಾವನಾತ್ಮಕ ಸಮ್ಮಿಲನಕ್ಕೆ ಅವಕಾಶ ನೀಡದಿರುವ ಅಮಾನುಷತೆಯನ್ನು ತೋರಿತ್ತು. 

ತಾನು ಈ ಭೇಟಿಯ ಅವಕಾಶವನ್ನು ಮಾನವೀಯ ನೆಲೆಯಲ್ಲಿ ಒದಗಿಸಿದ್ದೇನೆ ಎಂದು ಕೊಚ್ಚಿಕೊಂಡ ಪಾಕ್‌, ಭದ್ರತೆಯ ನೆಪವೊಡ್ಡಿ ಜಾಧವ್‌ ತಾಯಿ ಮತ್ತು ಪತ್ನಿಯ ಉಡುಪು ತೊಡುಪುಗಳನ್ನು ಬದಲಿಸಿ, ಅವರ ಬಳೆ, ಮಂಗಳ ಸೂತ್ರ ಮತ್ತು ಬಿಂದಿ ಮಾತ್ರವಲ್ಲದೆ ಕೊನೆಗೆ ಬೂಟನ್ನು ಕೂಡ ತೆಗೆಸುವ ಮೂಲಕ ಅಮಾನವೀಯತೆಯನ್ನೇ ಪ್ರದರ್ಶಿಸಿತ್ತು. 

ಈ ಭೇಟಿಗೆ ಸಂಬಂಧಿಸಿದಂತೆ ಮೊದಲೇ ಒಪ್ಪಿಕೊಳ್ಳಲಾಗಿದ್ದ ಶರತ್ತುಗಳನ್ನು ಪಾಕಿಸ್ಥಾನ ಸಾರಾಸಗಟು ಉಲ್ಲಂಘನೆ ಮಾಡಿದೆ ಎಂದು ಖಂಡಿಸಿದ ಸುಶ್ಮಾ ಸ್ವರಾಜ್‌, ಜಾಧವ್‌ ಅವರ ಪತ್ನಿಯ ಶೂ ನಲ್ಲಿ ಇಲೆಕ್ಟ್ರಾನಿಕ್‌ ಬೇಹು ಉಪಕರಣ ಇತ್ತೆಂದು ಪಾಕಿಸ್ಥಾನ ಹೇಳಿರುವುದು ಕೇವಲ ಸುಳ್ಳಿನ ಕಂತೆಯಾಗಿದೆ. ಮೊದಲು ಕ್ಯಾಮೆರಾ ಇತ್ತೆಂದು ಹೇಳಿತ್ತು; ಅನಂತರ ಅದೊಂದು ರೆಕಾರ್ಡರ್‌ ಆಗಿತ್ತು ಎಂದು ಪಾಕ್‌ ಹೇಳಿತು; ಪಾಕ್‌ ಹೇಳಿಕೆಯಲ್ಲೇ ಈ ರೀತಿಯ ವ್ಯತ್ಯಾಸಗಳಿರುವುದು ಅದರ ಸುಳ್ಳಿನ ಸರಮಾಲೆಯನ್ನು ಅನಾವರಣಗೊಳಿಸಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next