Advertisement

ಕಾಡುವ ಕನಸುಗಳಿಗೆ ಅಮೂರ್ತ ರೂಪ

09:02 AM Dec 01, 2019 | Lakshmi GovindaRaj |

ಕನ್ನಡದ ಜನಪ್ರಿಯ ಕೃತಿ, ಡಾ. ಕೆ ಶಿವರಾಮ ಕಾರಂತರ “ಮೂಕಜ್ಜಿಯ ಕನಸುಗಳು’ ಪ್ರಕಟಣೆಗೊಂಡು ಐವತ್ತು ವರ್ಷಗಳು ಗತಿಸಿದೆ. ಇದೇ ಸಂದರ್ಭದಲ್ಲಿ ಕಾರಂತರ “ಮೂಕಜ್ಜಿಯ ಕನಸುಗಳು’ ಕಾದಂಬರಿ ಚಿತ್ರರೂಪದಲ್ಲಿ ಈ ವಾರ ತೆರೆಮೇಲೆ ಬಂದಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಓದಿಗೆ ಸಿಕ್ಕರೂ, ತರ್ಕಕ್ಕೆ ನಿಲುಕದ ಅನೇಕ ಕೌತಕ, ವಿಸ್ಮಯಗಳನ್ನು ಇಂದಿಗೂ ತನ್ನೊಳಗೆ ಅಡಗಿಸಿಟ್ಟುಕೊಂಡಿರುವ “ಮೂಕಜ್ಜಿ’, ತೆರೆಮೇಲೆ ಎಷ್ಟರ ಮಟ್ಟಿಗೆ ನೋಡುಗರಿಗೆ ತೆರೆದುಕೊಳ್ಳುತ್ತಾಳೆ ಎಂದು ಕಾಡುವ ಕುತೂಹಲ ಚಿತ್ರರೂಪವನ್ನು ನೋಡುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.

Advertisement

ಹಾಗಾಗಿ ಇಲ್ಲಿ “ಮೂಕಜ್ಜಿಯ ಕನಸುಗಳು’ ಚಿತ್ರದ ಕಥಾವಸ್ತು, ಆಶಯಗಳಿಗಿಂತ ಅದನ್ನು ಚಿತ್ರರೂಪದಲ್ಲಿ ನಿರೂಪಿಸಿರುವ ಬಗೆ ಮತ್ತು ದಾಟಿಯೇ ಹೆಚ್ಚು ಚರ್ಚಿತವಾಗುವ ಸಂಗತಿ. ಸಾಮಾನ್ಯವಾಗಿ ಯಾವುದೇ ಕಾದಂಬರಿ ಪುಸ್ತಕ ರೂಪದಿಂದ ನಾಟಕ ಅಥವಾ ಚಿತ್ರರೂಪವಾಗಿ ರೂಪಾಂತರಗೊಂಡು ತೆರೆಗೆ ಬರುವಾಗ, ಅನೇಕ ಸಂದರ್ಭಗಳಲ್ಲಿ ಅದರದ್ದೇ ಆದ ಇತಿ-ಮಿತಿ, ಚೌಕಟ್ಟುಗಳನ್ನು ದಾಟಿ ಬರಬೇಕಾಗುತ್ತದೆ. ಕೆಲವೊಮ್ಮೆ ಕಾದಂಬರಿಯಲ್ಲಿ ಓದುಗರನ್ನು ಚಿಂತೆಗೆ-ಚಿಂತನೆಗೆ ಹಚ್ಚಿಸಿದ, ಯೋಚನೆ-ವಿವೇಚನೆಯ ಆಳಕ್ಕಿಳಿದ, ಅನುಭವಕ್ಕೆ ದಕ್ಕುವ-ದಕ್ಕದಿರುವ ಅದೆಷ್ಟೋ ಸಂಗತಿಗಳು ದೃಶ್ಯರೂಪದಲ್ಲಿ ಆಪ್ತವಾಗಲೂಬಹುದು, ಅಥವಾ ಅರ್ಥವಾಗದೆಯೂ ಹೋಗಬಹುದು.

ಈ ಎಲ್ಲ ಸೂಕ್ಷ್ಮಸಂವೇದನೆಗಳನ್ನು ಮತ್ತು ಸವಾಲುಗಳ ಹೊಣೆಗಾರಿಕೆಯನ್ನು ನಿರ್ದೇಶಕರು ಅರ್ಥ ಮಾಡಿಕೊಂಡಾಗಲೇ ಕೃತಿಯ ರೂಪಾಂತರ ಸಾರ್ಥಕವಾಗುತ್ತದೆ. ಅಂಥ ಸವಾಲನ್ನು ಅರಿತುಕೊಂಡು ನಿರ್ದೇಶಕ ಪಿ. ಶೇಷಾದ್ರಿ ಕಾರಂತರ “ಮೂಕಜ್ಜಿಯ ಕನಸುಗಳು’ ಕೃತಿಯನ್ನು ತೆರೆಗೆ ತರುವ ಸಾಹಸ ಮಾಡಿದ್ದಾರೆ. ಇಡೀ ಚಿತ್ರದಲ್ಲಿ ಕಾರಂತರ ಕೃತಿಯ ಆಶಯದಂತೆ “ಮೂಕಜ್ಜಿ’ಯನ್ನು ಥಿಯೇಟರ್‌ವರೆಗೆ ತರುವ ನಿರ್ದೇಶಕರ ಪರಿಶ್ರಮ ಚಿತ್ರದಲ್ಲಿ ಕಾಣುತ್ತದೆ. ಇನ್ನು ಚಿತ್ರದ ಪಾತ್ರಗಳು ಕೂಡ ಪರಿಣಾಮಕಾರಿಯಾಗಿ “ಮೂಕಜ್ಜಿಯ ಕನಸುಗಳಿಗೆ ಬಣ್ಣ ತುಂಬುತ್ತವೆ.

“ಮೂಕಜ್ಜಿ’ಯಾಗಿ ಬಿ. ಜಯಶ್ರೀ ಅಭಿನಯ, “ಸುಬ್ರಾಯ’ ಆಗಿ ಅರವಿಂದ್‌ ಕುಪ್ಲಿಕರ್‌ ಅಭಿನಯ ನೋಡುಗರಿಗೆ ಆಪ್ತವಾಗುತ್ತದೆ. “ಸೀತಾ’ ಆಗಿ ನಂದಿನಿ ವಿಠಲ್‌, “ನಾಗಿ’ ಪಾತ್ರದಲ್ಲಿ ಪ್ರಗತಿ ಪ್ರಭು, “ತಿಪ್ಪಜ್ಜಿ’ ಆಗಿ ರಾಮೇಶ್ವರಿ ವರ್ಮ, “ರಾಮಣ್ಣ’ನಾಗಿ ಪ್ರಭುದೇವ ಅಭಿನಯ ನಿಧಾನವಾಗಿ ನೋಡುಗರನ್ನು ಆವರಿಸುತ್ತದೆ. ಹಿರಿಯ ಛಾಯಾಗ್ರಹಕ ಜಿ.ಎಸ್‌ ಭಾಸ್ಕರ್‌ ಶಕ್ತಿಮೀರಿ ಮೂಕಜ್ಜಿಯನ್ನು ತಮ್ಮ ಛಾಯಾಗ್ರಹಣದಲ್ಲಿ ಕಟ್ಟಿಕೊಟ್ಟಿದ್ದಾರೆ. ಬಿ.ಎಸ್‌ ಕೆಂಪರಾಜು ಮೂಕಜ್ಜಿಯನ್ನು ತಮ್ಮ ಸಂಕಲನದಲ್ಲಿ ಇನ್ನಷ್ಟು ಚೆಂದಗಾಣಿಸಿದ್ದಾರೆ. ಪ್ರವೀಣ್‌ ಗೋಡ್ಖಿಂಡಿ ಹಿನ್ನೆಲೆ ಸಂಗೀತ ಮೂಕಜ್ಜಿಯ ಮನದಾಳದ ಮಾತಿಗೆ ತಾಳವಾಗುತ್ತದೆ.

ಇಲ್ಲಿಯವರೆಗೆ ಕಾದಂಬರಿ ರೂಪದಲ್ಲಿ ಅಸಂಖ್ಯಾತ ಓದುಗರನ್ನು ಗೊತ್ತಿಲ್ಲದಂತೆ ಕಾಡಿದ “ಮೂಕಜ್ಜಿ’ ಈಗ ಚಿತ್ರರೂಪದಲ್ಲೂ ಒಂದಷ್ಟು ನೋಡುಗರ ಮನಸ್ಸಿನಲ್ಲಿ ಉಳಿಯುತ್ತಾಳೆ. ಒಟ್ಟಾರೆ ಮಾಮೂಲಿ ಕಮರ್ಷಿಯಲ್‌ ಸಿನಿಮಾಗಳಿಗಿಂತ ಹೊರತಾದ ಕೃತಿಯನ್ನು ಚಿತ್ರರೂಪದಲ್ಲಿ ಆಸ್ವಾಧಿಸಬೇಕು ಎನ್ನುವವರಿಗೆ, ಪಿ. ಶೇಷಾದ್ರಿ ತಮ್ಮದೆ ಆದ ಶೈಲಿಯಲ್ಲಿ “ಮೂಕಜ್ಜಿಯ ಕನಸುಗಳು’ ಕಟ್ಟಿಕೊಟ್ಟಿದ್ದಾರೆ. ಅವಸರದ ಹಂಗಿನೊಳಗೆ ಸಿಲುಕಿಕೊಳ್ಳದಿದ್ದರೆ, ನಮ್ಮೊಳಗೆ ಸದಾ ಕಾಡುವ “ಮೂಕಜ್ಜಿ’ಯನ್ನು ಒಮ್ಮೆ ಕಣ್ತುಂಬಿಕೊಳ್ಳಬಹುದು.

Advertisement

ಚಿತ್ರ: ಮೂಕಜ್ಜಿಯ ಕನಸುಗಳು
ನಿರ್ಮಾಣ: ನವ್ಯ ಚಿತ್ರ ಕ್ರಿಯೇಶನ್ಸ್‌
ನಿರ್ದೇಶನ: ಪಿ. ಶೇಷಾದ್ರಿ
ತಾರಾಗಣ: ಬಿ. ಜಯಶ್ರೀ, ಅರವಿಂದ ಕುಪ್ಲಿಕರ್‌, ನಂದಿನಿ ವಿಠಲ್‌, ರಾಮೇಶ್ವರಿ ವರ್ಮ, ಪ್ರಗತಿ ಪ್ರಭು, ಪ್ರಭುದೇವ ಮತ್ತಿತರರು

* ಜಿ.ಎಸ್‌.ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next