Advertisement

ಸ್ಥಳ ಪರಿಶೀಲನೆ ನಡೆಸದೇ ನಿರಪೇಕ್ಷ ಪತ್ರ ನೀಡಲಾಗುತ್ತಿದೆ: ಆರೋಪ

02:40 AM Jul 14, 2017 | |

ಉಪ್ಪಿನಂಗಡಿ : ಪಟ್ಟಣದಲ್ಲಿ  ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿದ್ದು, ಸ್ವತ್ಛತೆ ಇಲ್ಲದಿರುವುದೇ ಇದಕ್ಕೆ ಕಾರಣ. ಕೆಲವು ಉದ್ಯಮಗಳಿಗೆ ಆರೋಗ್ಯ ಇಲಾಖೆಯ ನಿರಪೇಕ್ಷ  ಪತ್ರದ ಅಗತ್ಯವಿದ್ದು, ಆದರೆ ತಾಲೂಕು ಆರೋಗ್ಯ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸದೇ ಹಣ ತೆಗೆದುಕೊಂಡು ಕೂತಲ್ಲಿಯೇ ನಿರಪೇಕ್ಷ ಪತ್ರ ನೀಡುತ್ತಿದ್ದಾರೆ ಎಂಬ ಆರೋಪ ಉಪ್ಪಿನಂಗಡಿ ಗ್ರಾಮ ಸಭೆಯಲ್ಲಿ ಕೇಳಿಬಂತು.

Advertisement

ಆರೋಪ
ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್‌ ಕೆ. ಅವರ ಅಧ್ಯಕ್ಷತೆಯಲ್ಲಿ  ಗುರುವಾರ ಇಲ್ಲಿನ ಪಂಚಾಯತ್‌ ಕಚೇರಿಯಲ್ಲಿ   ನಡೆದ ಗ್ರಾ.ಪಂ.ನ ಗ್ರಾಮಸಭೆಯಲ್ಲಿ   ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು, ಕೆಲವು ಹೊಟೇಲ್‌, ಜ್ಯೂಸ್‌ ಸೆಂಟರ್‌, ಕೋಳಿ ಅಂಗಡಿಗಳಲ್ಲಿ  ಸ್ವತ್ಛತೆ ಕಾಪಾಡುತ್ತಿಲ್ಲ. ಆದರೆ ತಾಲೂಕು ಆರೋಗ್ಯ ನಿರೀಕ್ಷ ಕರು ಇವುಗಳಿಗೆ ಎನ್‌ಓಸಿ ನೀಡುವಾಗ ಯಾವುದೇ ಸ್ಥಳ ಪರಿಶೀಲನೆ ನಡೆಸದೇ ಬಂದವರಿಗೆ ಕೂತಲ್ಲಿಯೇ ಹಣ ತೆಗೆದುಕೊಂಡು ಎನ್‌ಓಸಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಇನ್ನು ಮುಂದೆ ಆರೋಗ್ಯ ನಿರೀಕ್ಷಕರು ಸ್ಥಳಪರಿಶೀಲನೆ ನಡೆಸದೇ ಎನ್‌ಓಸಿ ನೀಡದಂತೆ ಅವರಿಗೆ ಹಾಗೂ ಜಿಲ್ಲಾ ಆರೋಗ್ಯಾಧಿ ಕಾರಿಗೆ ಪತ್ರ ಬರೆಯಲು ನಿರ್ಣಯಿಸಲಾಯಿತು.

ಮದ್ಯದಂಗಡಿಗೆ ಆಕ್ಷೇಪ
ಕೆಂಪಿಮಜಲುವಿನಲ್ಲಿ  ಪಶು ಚಿಕಿತ್ಸಾಲದ ಬಳಿಯಲ್ಲಿ  ಖಾಸಗಿ ವ್ಯಕ್ತಿಯೋರ್ವರ ಮನೆಯಲ್ಲಿ  ಮದ್ಯದ ಅಂಗಡಿ ತೆರೆಯುವ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ. ಮದ್ಯದ  ಅಂಗಡಿ ನಡೆಸುವವರು ನಿರಪೇಕ್ಷ  ಪತ್ರ ಹಾಗೂ ಪರವಾನಿಗೆಗಾಗಿ ಈಗಾಗಲೇ ಗ್ರಾ.ಪಂ.ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯಿದೆ. ಇದೀಗ ಮದ್ಯದ ಅಂಗಡಿ ಮಾಡಲು ಹೊರಟಿರುವ ಪರಿಸರ ಜನ ವಸತಿ ಪ್ರದೇಶವಾಗಿದೆ. ಅಲ್ಲದೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳೂ ಇದೇ ದಾರಿಯಾಗಿ ಕಾಲೇಜಿಗೆ ಹೋಗುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಪರವಾನಿಗೆ ಕೊಡಬಾರದು. ಈ ಬಗ್ಗೆ ಆಕ್ಷೇಪ ವಿರುವುದರಿಂದ ಅಬಕಾರಿ ಮತ್ತು ಪೊಲೀಸ್‌ ಇಲಾಖೆಗೂ ಪರವಾನಿಗೆ ನೀಡದಂತೆ ಸೂಚಿಸಿ, ಪತ್ರ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.

ಅರಣ್ಯ ಇಲಾಖೆ “ರಸ್ತೆ ಬದಿ ನೆಡುತೋಪು’ ಎಂಬ ಹೆಸರಿನಲ್ಲಿ  ಕೇವಲ ಕಾಟಾಚಾರಕ್ಕೆ  ಗಿಡಗಳನ್ನು ನೆಡುತ್ತಿದೆ. ಕಳೆದ ವರ್ಷ ಉಪ್ಪಿನಂಗಡಿ- ಮರ್ಧಾಳ ರಸ್ತೆಯಲ್ಲಿ ಸುಮಾರು ಎರಡು ಸಾವಿರದಷ್ಟು  ಗಿಡಗಳನ್ನು ನೆಡಲಾಗಿತ್ತು. ಆದರೆ ಈ ವರ್ಷ ರಸ್ತೆ ವಿಸ್ತರಣೆಗೊಂಡಿದ್ದು, ಇದಕ್ಕಾಗಿ ಸಾವಿರಾರು ಗಿಡಗಳ ಮಾರಣಹೋಮವಾಗಿದೆ. ಒಂದು ಗಿಡ ನೆಡಲು ಕನಿಷ್ಠವೆಂದರೂ ಸುಮಾರು 200 ರೂ. ನಷ್ಟು  ಖರ್ಚು ಮಾಡಲಾಗಿದೆ. ಆದರೆ ಅದೆಲ್ಲ  ಈಗ ವ್ಯರ್ಥವಾಗಿದೆ. ಸಾರ್ವಜನಿಕರ ಹಣವನ್ನು  ಈ ರೀತಿ ಪೋಲು ಮಾಡುವುದು ಎಷ್ಟು ಸರಿಯಲ್ಲ ಎಂದು ಲಕ್ಷ್ಮಣ ಗೌಡ ನೆಡಿcಲ್‌ ಅವರು ಹೇಳಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ಸುರೇಶ್‌ ಅತ್ರಮಜಲು, ಹೆದ್ದಾರಿ ಕಾಮಗಾರಿ ಸಂದರ್ಭ ಸಾವಿರಾರು ಮರಗಳ ಮಾರಣ ಹೋಮವಾಗುತ್ತಿದೆ. ಉಪ್ಪಿನಂಗಡಿಯ ಪಂಚಾಯತ್‌ ಜಾಗದಲ್ಲಿ  ಐದು ಸಾವಿರ ಸಸಿಗಳನ್ನು ನೆಡಲು ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು. 

Advertisement

ಸರಕಾರ ಮೂರು ವರ್ಷದ ಗ್ಯಾರಂಟಿ ಕೊಟ್ಟು ವಿತರಿಸಿದ ಎಲ್‌ಇಡಿ ಬಲ್‌ ಗಳು ಈಗ ಹಾಳಾದರೆ, ಅದರ ಬದಲಾವಣೆ ಸಾಧ್ಯವಾಗುತ್ತಿಲ್ಲ. ಇದು ಸರಕಾರವೇ ಜನರಿಗೆ ಮೋಸ ಮಾಡಿದಂತಾಗಿದೆ ಎಂದು ಗ್ರಾಮಸ್ಥರು ದೂರಿದಾಗ, ಉತ್ತರಿಸಿದ ಉಪ್ಪಿನಂಗಡಿ ಮೆಸ್ಕಾಂ ಜೆ.ಇ. ಸುಂದರ, ಅದು ಟೆಂಡರ್‌ ಪಡೆದ ಸಂಸ್ಥೆಯಿಂದ ತೊಂದರೆಯಾಗಿದ್ದು, ಈಗ ಮತ್ತೂಬ್ಬರಿಗೆ ಟೆಂಡರ್‌ ನೀಡಲಾಗಿದೆ. ಆದ್ದರಿಂದ ಸದ್ಯದಲ್ಲೇ ಈ ಸಮಸ್ಯೆ ಬಗೆ ಹರಿಯಲಿದೆ ಎಂದರು.

ಗ್ರಾ.ಪಂ. ಸಭೆಯಲ್ಲಿ ಪಂಚಾಯತ್‌ ಉಪಾಧ್ಯಕ್ಷರು ಸಹಿತ ಬಹುತೇಕ ಸದಸ್ಯರ ಗೈರು ಹಾಜರಿ ಕಂಡು ಬಂತು.
ಗ್ರಾ.ಪಂ. ಸದಸ್ಯರಾದ ಸುರೇಶ್‌ ಅತ್ರಮಜಲು, ಮುಹಮ್ಮದ್‌ ತೌಸೀಫ್‌, ರಮೇಶ್‌, ಚಂದ್ರಾವತಿ, ಯು.ಕೆ. ಇಬ್ರಾಹಿಂ, ಜಮೀಳಾ, ಉಮೇಶ್‌ ಗೌಡ ಉಪಸ್ಥಿತರಿದ್ದರು. ನೋಡಲ್‌ ಅಧಿಕಾರಿಯಾಗಿ ಉಪ್ಪಿನಂಗಡಿ ಪಶು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ರಾಮ್‌ಪ್ರಕಾಶ್‌ ಸಭೆ ಮುನ್ನಡೆಸಿದರು. ವಿವಿಧ ಇಲಾಖೆಯ ಅ ಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಮುಹಮ್ಮದ್‌ ಇಕ್ಬಾಲ್‌ ಕೆಂಪಿ, ಅಬ್ದುಲ್‌ ಅಝೀಝ್, ಸಿದ್ದೀಕ್‌ ಕೆಂಪಿ, ಕೆ. ಆದಂ, ರಾಜೇಶ್‌ ಕಜೆಕ್ಕಾರ್‌, ಮುಹಮ್ಮದ್‌ ಕೆಂಪಿ, ದೀಪಕ್‌ ಪೈ, ವೆಂಕಪ್ಪ ಪೂಜಾರಿ ಉಪಸ್ಥಿತರಿದ್ದರು. ಗ್ರಾ.ಪಂ. ಪಿ.ಡಿ.ಒ. ಅಬ್ದುಲ್‌ ಅಸಾಫ್‌ ವರದಿ ವಾಚಿಸಿದರು. ಕಾರ್ಯದರ್ಶಿ ರೋಹಿತ್‌ ಸ್ವಾಗತಿಸಿ, ವಂದಿಸಿದರು.

ತರಾಟೆ
ಹೆದ್ದಾರಿ ಬದಿಯ  ಮರಗಳನ್ನು  ಕಡಿಯಲಾಗಿದ್ದು, ಉತ್ತಮ ಜಾತಿಯ ಮರಗಳನ್ನು ತತ್‌ಕ್ಷಣವೇ ಅಲ್ಲಿಂದ ಸಾಗಿಸಲಾಗಿದೆ. ಆದರೆ, ಇನ್ನಿತರ ಬೃಹತ್‌ ಮರಗಳನ್ನು ಹೆದ್ದಾರಿ ಬದಿಯೇ ಬಿಡಲಾಗಿದೆ. ಇವುಗಳು ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಅಪಾಯಕಾರಿಯಾಗಿ ಪರಿಣಮಿಸಲಿವೆ ಎಂದು ಗ್ರಾಮಸ್ಥರು ಉಪ ಅರಣ್ಯಾ ಧಿಕಾರಿ ಸಂದೀಪ್‌ ಸಿ.ಕೆ. ಅವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಈ ಬಗ್ಗೆ ಮರ ಕಡಿಯಲು ಗುತ್ತಿಗೆ ವಹಿಸಿಕೊಂಡವರಿಗೆ ತತ್‌ಕ್ಷಣ ಮರ ತೆರವಿಗೆ ಸೂಚಿಸಲು ನಿರ್ಣಯ ಕೈಗೊಳ್ಳಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next