Advertisement

ವಿದೇಶ ಉದ್ಯೋಗ ಅಪಾಯ: ಮುನ್ನೆಚ್ಚರಿಕೆಯೇ ಉಪಾಯ

12:51 AM Apr 02, 2024 | Team Udayavani |

ಉದ್ಯೋಗದ ಆಮಿಷಕ್ಕೆ ಸಿಕ್ಕಿ ಕಾಂಬೋಡಿಯಾಗೆ ತೆರಳಿರುವ ಸುಮಾರು 5 ಸಾವಿರದಷ್ಟು ಭಾರತೀಯರು ಈಗ “ಸೈಬರ್‌ ಗುಲಾಮ’ರಾಗಿ ಆ ದೇಶದಲ್ಲಿ ಅತಂತ್ರರಾಗಿದ್ದಾರೆ. ಅಲ್ಲಿಂದ ಪಾರಾಗಲಾಗದೆ ಒದ್ದಾಡುತ್ತಿದ್ದಾರೆ. ಈ ಭಾರತೀ ಯರನ್ನು ಆನ್‌ಲೈನ್‌ನಲ್ಲಿ ಭಾರತೀಯರನ್ನೇ ವಂಚಿಸುವ ಕೆಲಸಕ್ಕೆ ನಿಯೋ ಜಿಸಿರುವುದು ಇನ್ನೂ ಕಳವಳಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಉದ್ಯೋಗಗಳ ಆಮಿಷಕ್ಕೀಡಾಗಿ ತೆರಳುವ ಭಾರತೀಯರು ನಾನಾ ಸಂಕಷ್ಟಗಳಿಗೆ ಗುರಿಯಾಗುತ್ತಿರುವ ಬಗ್ಗೆ ಮೇಲಿಂದ ಮೇಲೆ ವರದಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಕಾಂಬೋಡಿಯಾದಲ್ಲಿ ಅತಂತ್ರರಾಗಿರುವ ಭಾರತೀಯರ ಬಗ್ಗೆ ಮಾಹಿತಿ ಯಿದೆ. ಈಗಾಗಲೇ 250 ಭಾರತೀಯರನ್ನು ಪಾರು ಮಾಡಿದ್ದೇವೆ. ಕಳೆದ ಮೂರು ತಿಂಗಳಲ್ಲಿ 75 ಭಾರತೀಯರು ದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದ್ದು, ಆಶಾದಾಯಕವಾಗಿದೆ. ಹಾಗಿದ್ದೂ, ಅತಂತ್ರರಾಗಿರುವ ಎಲ್ಲ ಭಾರತೀ ಯರನ್ನು ವಾಪಸ್‌ ತವರಿಗೆ ಕರೆ ತರುವುದು ಸರಕಾರದ ಪ್ರಥಮ ಆದ್ಯತೆ ಯಾಗಬೇಕು. ಕೆಲವು ದಿನಗಳ ಹಿಂದೆಯಷ್ಟೇ ಕರ್ನಾಟಕದವರು ಸೇರಿದಂತೆ ಭಾರತದ ಯುವಕರು ರಷ್ಯಾದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದರು. ಪಂಜಾಬ್‌, ಹರಿಯಾಣ, ದಿಲ್ಲಿ, ಮಹಾರಾಷ್ಟ್ರದಲ್ಲಿ ಕಾರ್ಯಾಚರಿಸುತ್ತಿದ್ದ ಏಜೆಂಟ್‌ ಕಂಪೆನಿಗಳ ಮೂಲಕ 180 ಭಾರತೀಯರು ರಷ್ಯಾಗೆ ಹೋಗಿ, ಅಪಾಯಕ್ಕೆ ಸಿಲುಕಿ ಕೊಂಡಿದ್ದರು. ಈ ವೇಳೆ, ಹೈದ್ರಾಬಾದ್‌ನ ವ್ಯಕ್ತಿಯೊಬ್ಬರು ಮೃತಪಟ್ಟ ಬಳಿಕ ಈ ಪ್ರಕರಣದ ಗಂಭೀರತೆಯು ಎಲ್ಲರಿಗೂ ಮನದಟ್ಟಾಗಿತ್ತು.

ಭಾರತದಲ್ಲಿನ ಉದ್ಯೋಗ ಸೃಷ್ಟಿಯ ಕೊರತೆ ಪರಿಣಾಮ ಬಹಳಷ್ಟು ಯುವಕರು ವಿದೇಶಗಳಲ್ಲಿನ ಉದ್ಯೋಗದಾಸೆಗೆ ಬಲಿಯಾಗುತ್ತಿದ್ದಾರೆ. ಇದೇ ಅವಕಾಶವನ್ನು ಬಳಸಿಕೊಳ್ಳುವ ಕೆಲವು ವಂಚಕ ಕಂಪೆನಿಗಳು ಮನಸೋ ಇಚ್ಛೆ ಹಣವನ್ನು ಪೀಕಿಸಿಕೊಂಡು, ವಿದೇಶಗಳಲ್ಲಿ ಅವರನ್ನು ಅತಂತ್ರರನ್ನಾಗಿಸುತ್ತಿವೆ. ವಿದೇಶಿ ಉದ್ಯೋಗ ನಂಬಿ ಸಾಕಷ್ಟು ಜನರು ಹಣವನ್ನು ಕಳೆದುಕೊಳ್ಳುತ್ತಿರುವ ಪ್ರಕರಣಗಳಂತೂ ಕರ್ನಾಟಕವೂ ಸೇರಿದಂತೆ ದೇಶ ವಿವಿಧ ರಾಜ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿವೆ. ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವವರು ತೊಂದರೆಗೆ ಸಿಲುಕದಿರಲಿ ಎಂದೇ ಭಾರತೀಯ ವಿದೇಶಾಂಗ ಸಚಿವಾಲಯವು ಸಾಕಷ್ಟು ನಿಯಮಗಳನ್ನು ರೂಪಿಸಿದೆ. ಇದಕ್ಕಾಗಿ ನೇಮಕಾತಿ ಸಂಸ್ಥೆಗಳಿಗೆ ಮಾನ್ಯತೆ ಯನ್ನೂ ಕಲ್ಪಿಸುತ್ತದೆ. ಆದರೆ ಈ ಬಗೆಗಿನ ಜ್ಞಾನದ ಕೊರತೆಯಿಂದಾಗಿ ಸಾಕಷ್ಟು ಜನರು ನಕಲಿ ಏಜೆಂಟರಿಗೆ ಬಲಿ ಬಿದ್ದು, ಹಣವನ್ನೂ ಕಳೆದುಕೊಳ್ಳುವುದು ಮಾತ್ರ ವಲ್ಲದೇ, ತಮ್ಮ ಜೀವಕ್ಕೂ ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ.

ಸಾಕಷ್ಟು ನಿಯಮಗಳು ಮತ್ತು ಕ್ರಮಗಳ ಹೊರತಾಗಿಯೂ ವಿದೇಶಿ ನೌಕರಿಯ ವಂಚನೆಯನ್ನು ತಡೆಯಲಾಗುತ್ತಿಲ್ಲ. ಅಂದರೆ ಈಗಿರುವ ಕಾನೂ ನಾತ್ಮಕ ಕ್ರಮಗಳು ಸಾಕಾಗುತ್ತಿಲ್ಲ. ಸರಕಾರಗಳು ಈ ನಿಟ್ಟಿನಲ್ಲಿ ಯೋಚಿಸಿ, ಪರಿಪೂರ್ಣವಾದ ವ್ಯವಸ್ಥೆಯನ್ನು ರೂಪಿಸಬೇಕು ಮತ್ತು ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಬೇಕು. ಸರಕಾರಿ ಅಧಿಕಾರಿಗಳ ಶಾಮೀಲು ಇಲ್ಲದೇ ಈ ವಂಚನೆಗಳು ನಡೆಯಲು ಸಾಧ್ಯವಿಲ್ಲ. ಹಾಗಾಗಿ, ಇಂಥ ಪ್ರಕರಣಗಳಲ್ಲಿನ ತಪ್ಪಿತಸ್ಥ ಸರಕಾರಿ ಸಿಬಂದಿಯನ್ನು ಕಠಿನ ಶಿಕ್ಷೆಗೆ ಗುರಿಯಾಗಿಸಬೇಕು.

ಎಲ್ಲಕ್ಕಿಂತ ಹೆಚ್ಚಾಗಿ, ಉದ್ಯೋಗಾಕಾಂಕ್ಷಿಗಳು ಹೆಚ್ಚು ಮುನ್ನೆಚ್ಚರಿಕೆಯನ್ನು ವಹಿಸಬೇಕು. ತಾವು ನಂಬಿರುವ ಏಜೆಂಟ್‌ ಕಂಪೆನಿಗಳು ನಕಲಿಯೋ, ಅಸಲಿಯೋ ಅಥವಾ ಹೋಗುತ್ತಿರುವ ದೇಶವು ವಿದೇಶಿಗರಿಗೆ ಪೂರಕವಾಗಿ ದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ವಿದೇಶಾಂಗ ಸಚಿವಾಲಯದಲ್ಲಿ ನೋಂದಾಯಿತ ಏಜೆಂಟ್‌ ಕಂಪೆನಿಗಳ ಮೂಲಕವೇ ವ್ಯವಹರಿಸಬೇಕು. ಇಲ್ಲದಿದ್ದರೆ, ನಮ್ಮದಲ್ಲದ ದೇಶದಲ್ಲಿ ಅತಂತ್ರರಾಗಿ, ಬದುಕನ್ನು ವಿನಾಶಕ್ಕೆ ನಾವೇ ದೂಡುತ್ತೇವೆ. ಈ ಬಗ್ಗೆ ಎಚ್ಚರ ವಹಿಸುವುದು ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next