Advertisement

ಮೋದಿ ಗದ್ದುಗೆ ಭದ್ರ : 276 ಕ್ಷೇತ್ರಗಳಲ್ಲಿ ಗೆಲ್ಲಲಿದೆ NDA

04:55 AM Oct 05, 2018 | Team Udayavani |

ಲೋಕಸಭೆ ಚುನಾವಣೆಗೆ ಇನ್ನು ಏಳು ತಿಂಗಳಷ್ಟೇ ಬಾಕಿ ಇದೆ. ಈ ವೇಳೆ ಸಿ ವೋಟರ್‌ ಸಂಸ್ಥೆ ದೇಶದ ಮನಸ್ಥಿತಿ ಹೇಗಿದೆ ಎಂಬ ಸಮೀಕ್ಷೆಯನ್ನು ನಡೆಸಿದ್ದು, 276 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಎನ್‌ಡಿಎ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದಿದೆ. ಬಿಜೆಪಿ ಕೇವಲ 248 ಕ್ಷೇತ್ರಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ, ಇನ್ನೊಂದೆಡೆ 2014ರ ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲಿನಿಂದ ಚೇತರಿಸಿಕೊಂಡಿರುವ ಯುಪಿಎ ಮುಂದಿನ ಲೋಕಸಭೆ ಚುನಾವಣೆಯಲ್ಲಿ 112 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಇತರ ಪಕ್ಷಗಳು 155 ಸ್ಥಾನಗಳನ್ನು ಆಕ್ರಮಿಸಲಿವೆ. ಎನ್‌ಡಿಎ 2014 ರಲ್ಲಿ 336 ಕ್ಷೇತ್ರಗಳಲ್ಲಿ ಗೆದ್ದು ಜಯಭೇರಿ ಬಾರಿಸಿತ್ತು. ಆದರೆ ಸಮೀಕ್ಷೆಯ ಪ್ರಕಾರ, ಈ ಬಾರಿ ಬಹುಮತಕ್ಕಿಂತ ಕೇವಲ 4 ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.

Advertisement

ಕರ್ನಾಟಕದಲ್ಲಿ ಬಿಜೆಪಿಗೆ ಖುಷಿ
ಕರ್ನಾಟಕದಲ್ಲಿ ಬಿಜೆಪಿ 2014ರ ಚುನಾವಣೆಗಿಂತ ಒಂದು ಹೆಚ್ಚು ಸ್ಥಾನದಲ್ಲಿ ಗೆಲ್ಲಲಿದೆ. 18 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಅಲ್ಲದೆ, ಮತ ಹಂಚಿಕೆ ಕೂಡ ಶೇ.43 ರಿಂದ ಶೇ.46ಕ್ಕೆ ಏರಿಕೆಯಾಗಲಿದೆ. ಕಾಂಗ್ರೆಸ್‌ ಹಿಂದಿಗಿಂತ 2 ಕಡಿಮೆ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದೆ. ಅಂದರೆ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದು, ಜೆಡಿಎಸ್‌ ಹೆಚ್ಚುವರಿ ಒಂದು ಕ್ಷೇತ್ರದಲ್ಲಿ ಗೆಲ್ಲಲಿದೆ. ಅಂದರೆ 3 ಕಡೆ ಜೆಡಿಎಸ್‌ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ನ ಮತ ಹಂಚಿಕೆ ಶೇ. 40 ರಿಂದ ಶೇ. 37.1 ಕ್ಕೆ ಕುಸಿದರೆ, ಜೆಡಿಎಸ್‌ನ ಮತ ಹಂಚಿಕೆ ಶೇ. 11 ರಿಂದ ಶೇ.13.4ಕ್ಕೆ ಏರಲಿದೆ.
ಎನ್‌ಡಿಎ – 18, ಯುಪಿಎ – 7, ಜೆಡಿಎಸ್‌ – 3


ಮಹಾರಾಷ್ಟ್ರದಲ್ಲಿ ಬಿಜೆಪಿ

ಎಲ್ಲ ಪ್ರಮುಖ ಪಕ್ಷಗಳೂ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಒಂದು ವೇಳೆ ಶಿವಸೇನೆ ಹಾಗೂ ಬಿಜೆಪಿ ಒಟ್ಟಾಗಿ ಕಣಕ್ಕಿಳಿದರೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿಗೆ ಹೊಡೆತ ಬೀಳಲಿದೆ. ಎಲ್ಲ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿದರೆ, ಬಿಜೆಪಿ 22, ಕಾಂಗ್ರೆಸ್‌ 11, ಎನ್‌ಸಿಪಿ 8 ಹಾಗೂ ಶಿವಸೇನೆ 7ರಲ್ಲಿ ಗೆಲ್ಲಲಿದೆ. ಎನ್‌ಡಿಎಗೆ ಶಿವಸೇನೆ ಕೈಕೊಟ್ಟು, ಕಾಂಗ್ರೆಸ್‌ ಜೊತೆಗೆ ಎನ್‌ಸಿಪಿ ಸೇರಿ ಸ್ಪರ್ಧಿಸಿದರೆ ಯುಪಿಎಗೆ 30 ಹಾಗೂ ಎನ್‌ಡಿಎ 16 ಮತ್ತು ಶಿವಸೇನೆ 2 ಕ್ಷೇತ್ರಗಳಲ್ಲಿ ಗೆಲ್ಲಲಿದೆ.

ಉ.ಪ್ರದೇಶದಲ್ಲಿ ಬಿಜೆಪಿಗೆ ಸಂಕಷ್ಟ
ಸಿವೋಟರ್‌ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಕಷ್ಟ ಎದುರಿಸಲಿದೆ. ಒಂದು ವೇಳೆ ಕಾಂಗ್ರೆಸ್‌ ಹಾಗೂ ಸಮಾಜವಾದಿ ಪಕ್ಷದ ಸಖ್ಯ ತೊರೆದು ಮಾಯಾವತಿ ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಎನ್‌ಡಿಎ 70 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. 2014ರ ಲೋಕಸಭೆಗೆ ಹೋಲಿಸಿದರೆ ಕೇವಲ ಒಂದು ಸ್ಥಾನವನ್ನು ಮಾತ್ರ ಕಳೆದುಕೊಳ್ಳಲಿದೆ. ಒಂದು ವೇಳೆ ಬಿಎಸ್ಪಿ ಹಾಗೂ ಎಸ್‌ಪಿ ಜೊತೆಯಾದರೆ ಎನ್‌ಡಿಎ ಕೇವಲ 36 ಹಾಗೂ ಎಸ್‌ಪಿ-ಬಿಎಸ್‌ಪಿ 42 ಕ್ಷೇತ್ರಗಳಲ್ಲಿ ಗೆಲ್ಲಲಿವೆ. ಕಾಂಗ್ರೆಸ್‌ಗೆ ಕೇವಲ 2 ಸ್ಥಾನ ಸಿಗಲಿದೆ. ಎಸ್ಪಿ, ಬಿಎಸ್ಪಿ ಹಾಗೂ ಕಾಂಗ್ರೆಸ್‌ ಸೇರಿದರೆ 56 ಕ್ಷೇತ್ರಗಳಲ್ಲಿ ಗೆಲ್ಲಲಿದ್ದು, ಎನ್‌ಡಿಎ ಕೇವಲ 24ಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next