Advertisement

ಉಳ್ಳಾಲ ಸೇತುವೆ: ಅನಾಹುತ ತಪ್ಪಿಸಲು 500 ಮೀ. ವ್ಯಾಪ್ತಿಗೆ ಸಿ.ಸಿ. ಕೆಮರಾ

11:33 PM Feb 03, 2021 | Team Udayavani |

ಮಹಾನಗರ,: ರಾಷ್ಟ್ರೀಯ ಹೆದ್ದಾರಿ 66ರ ಉಳ್ಳಾಲ ಸೇತುವೆಯ ರಕ್ಷಣ ಬೇಲಿ ನಿರ್ಮಾಣ ಕಾಮಗಾರಿ ಪೂರ್ತಿಗೊಂಡಿದ್ದು, ಈ ಸೇತುವೆಯಲ್ಲಿ ನಡೆಯುತ್ತಿರುವ ಅನಾಹುತಗಳ ಪರಿವೀಕ್ಷಣೆಗೆ 500 ಮೀ. ರೇಂಜಿನ ಸಿ.ಸಿ. ಕೆಮರಾ ಅಳವಡಿಸುವ ಪ್ರಕ್ರಿಯೆ ಇದೀಗ ಪ್ರಾರಂಭಗೊಂಡಿದೆ.

Advertisement

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ವತಿಯಿಂದ 63 ಲಕ್ಷ ರೂ. ವೆಚ್ಚದಲ್ಲಿ (ರಕ್ಷಣ ಬೇಲಿಗೆ 58 ಲಕ್ಷ ರೂ. ಮತ್ತು ಸಿ.ಸಿ. ಕೆಮರಾಕ್ಕೆ 5 ಲಕ್ಷ ರೂ.) ಈ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ರಕ್ಷಣಾ ಬೇಲಿ ನಿರ್ಮಾಣ ಕಾಮಗಾರಿ ಪೂರ್ತಿಗೊಂಡು ಎರಡು ತಿಂಗಳುಗಳು ಕಳೆದಿವೆ. ಇದೀಗ ಎರಡೂ ಸೇತುವೆಗಳ ಎರಡೂ ದಿಕ್ಕುಗಳಲ್ಲಿ ಸಿಸಿ ಕೆಮರಾ ಅಳವಡಿಸಲು ಕಂಬಗಳನ್ನು ಹಾಕಲಾಗಿದೆ.

ವಾರದೊಳಗೆ ಕೇಬಲ್‌ ಸಂಪರ್ಕ
ಒಂದು ವಾರದೊಳಗೆ ಕೇಬಲ್‌ ಸಂಪರ್ಕ ಕಲ್ಪಿಸಿ, ಸಿ.ಸಿ. ಕೆಮರಾ ಅಳವಡಿಸುವ ಪ್ರಕ್ರಿಯೆ ಪೂರ್ಣಗೊಳಿಸುವ ಉದ್ದೇಶವನ್ನು ಮೂಡಾ ಹೊಂದಿದೆ. ರಾಜ್ಯ ವಿಧಾನ ಮಂಡಲದ ಅಧಿವೇಶನ ಮುಗಿದ ಬಳಿಕ ಶಾಸಕರು ಮತ್ತು ಸಚಿವರ ಲಭ್ಯತೆಯನ್ನು ನೋಡಿಕೊಂಡು ಇದರ ಉದ್ಘಾಟನೆಗೆ ಸಿದ್ಧತೆಗಳು ನಡೆದಿವೆ. ಉದ್ಘಾಟನೆಗೊಳ್ಳುವ ಒಂದು ದಿನ ಮುಂಚಿತವಾಗಿ ಸಿ.ಸಿ. ಕೆಮರಾ ವ್ಯವಸ್ಥೆಯ ಕೇಬಲ್‌ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಮೂಡಾ ಅಧಿಕಾರಿಗಳು “ಸುದಿನ’ಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ತುಮಕೂರು ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಅರಣ್ಯ ನಾಶ   

ಉಳ್ಳಾಲ ಸೇತುವೆ 800 ಮೀ. ಉದ್ದವಿದ್ದು, ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಹೋಗುವ ಹಾಗೂ ತೊಕ್ಕೊಟ್ಟಿನಿಂದ ಮಂಗಳೂರು ಕಡೆಗೆ ಬರುವ ಸೇತುವೆ ಸಹಿತ ಎರಡೂ ಸೇತುವೆಗಳಿಗೆ ಎರಡೂ ಬದಿ ರಕ್ಷಣಾ ಬೇಲಿಯನ್ನು ನಿರ್ಮಿಸಲಾಗಿದೆ. ಎರಡೂ ಸೇತುಗಳ ಎರಡೂ ತುದಿಗಳಲ್ಲಿ ಸಿ.ಸಿ. ಕೆಮರಾ (ಒಟ್ಟು 4 ಸಿ.ಸಿ. ಕೆಮರಾ) ಅಳವಡಿಸಲಾಗಿದೆ. ಸಿ.ಸಿ. ಕೆಮರಾಗಳು 500 ಮೀಟರ್‌ ದೂರದವರೆಗಿನ ಚಿತ್ರಣವನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿವೆ.

Advertisement

ಮುಂದಿನ ದಿನಗಳಲ್ಲಿ ಈ ಸೇತುವೆಯಲ್ಲಿ ಅಥವಾ ಸೇತುವೆಯ ಎರಡೂ ದಿಕ್ಕುಗಳಲ್ಲಿ ಸಂಭವಿಸುವ ಯಾವುದೇ ಅನಾಹುತಗಳನ್ನು ಈ ಸಿ.ಸಿ. ಕೆಮರಾಗಳು ಸೆರೆ ಹಿಡಿಯಲಿವೆ. ಯಾವನೇ ವ್ಯಕ್ತಿ ಸೇತುವೆ ಮೇಲಿನಿಂದ ಕೆಳಗಿರುವ ನೇತ್ರಾವತಿ ನದಿಗೆ ಹಾರಿದರೆ ಅಥವಾ ಹಾರಲು ಯತ್ನಿಸಿದ್ದರೆ ಈ ಸಿ.ಸಿ. ಕೆಮರಾದ ದೃಶ್ಯಾವಳಿ ನೋಡಿ ತಿಳಿಯಬಹುದಾಗಿದೆ.
ಇದುವರೆಗೆ ಸೇತುವೆಯ ಮೇಲೆ ಅಥವಾ ಸೇತುವೆಯ ಅಕ್ಕ ಪಕ್ಕದಲ್ಲಿ ಅನಾಥ ವಾಹನಗಳು ಕಂಡು ಬಂದಾಗ ವಾಹನ ಸವಾರ ಎಲ್ಲಿ ಹೋಗಿದ್ದಾರೆ ಎನ್ನುವ ಸಂಶಯ ಹುಟ್ಟಿಕೊಳ್ಳುತ್ತಿದ್ದವು. ಇದರಿಂದ ಪೊಲೀಸರು ಕೆಲವೊಮ್ಮೆ ಅನಾವಶ್ಯಕವಾಗಿ ನದಿಯಲ್ಲಿ ಹುಡುಕಾಟ ನಡೆಸುವ ಪ್ರಮೇಯವಿತ್ತು.

Advertisement

Udayavani is now on Telegram. Click here to join our channel and stay updated with the latest news.

Next