ಮೈಸೂರು: ಪರಸ್ಪರ ನಂಬಿಕೆಯಿಂದಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿ ಮಾಡಿಕೊಂಡಿರುವಾಗ ನಾವು ಒಟ್ಟಾಗಿ ಕೆಲಸ ಮಾಡಲ್ಲ, ಅಲ್ಲಿ ಹಾಗಾಗುತ್ತೆ, ಇಲ್ಲಿ ಹೀಗಾಗುತ್ತೆ ಎಂದು ಊಹೆ ಮಾಡಿಕೊಳ್ಳುವುದು ತಪ್ಪು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜೆಡಿಎಸ್ ನಾಯಕರ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ಅವರು ಟಿ.ಕೆ.ಲೇಔಟ್‌ನ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯದಲ್ಲಿ ಕಾಂಗ್ರೆಸ್ಸಿಗರು ನಿಖಿಲ್ ಕೈ ಹಿಡಿದರೆ ಮೈಸೂರಿನಲ್ಲಿ ನಾವು ಕಾಂಗ್ರೆಸ್ ಕೈಹಿಡಿಯುತ್ತೇವೆ, ಮಂಡ್ಯದಲ್ಲಿ ನೀವು ಕೈಕೊಟ್ಟರೆ,
ಮೈಸೂರಲ್ಲಿ ನಾವು ಕೈ ಕೊಡಬೇಕಾಗುತ್ತದೆ ಎಂಬ ಸಚಿವ ಸಾ.ರಾ.ಮಹೇಶ್ ಹೇಳಿಕೆ ಬಗ್ಗೆ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ನನ್ನ ಪ್ರಕಾರ ಸಾ.ರಾ.ಮಹೇಶ್ ಹೇಳಿಕೆ ತಪ್ಪು. ನಾವು ಪರಸ್ಪರ ನಂಬಿಕೆಯಿಂದ ಮೈತ್ರಿ ಮಾಡಿಕೊಂಡಿದ್ದೇವೆ. ಎಲ್ಲದಕ್ಕೂ ನಂಬಿಕೆ ಇರಬೇಕು. ಈ ರೀತಿಯ ಹೇಳಿಕೆಗಳಿಂದ ನಂಬಿಕೆ ಹಾಳಾಗುತ್ತೆ, ಯಾಕೆ ಅದನ್ನೆಲ್ಲಾ ಊಹೆ ಮಾಡಿಕೊಳ್ಳಬೇಕು ಎಂದರು.
ನಂಬಿಕೆ ಬಗ್ಗೆ ಎಚ್.ಡಿ.ದೇವೇಗೌಡರು, ಕುಮಾರಸ್ವಾಮಿ ಎಲ್ಲಿಯಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದ ಅವರು, ಅವರು ಮಾತನಾಡಿದ್ದರೆ ಹೇಳಿ? ಬೇರೆಯವರ ಮಾತಿಗೆಲ್ಲ ನಾನು ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದರು.
ನಾವಿನ್ನೂ ಪ್ರಚಾರವನ್ನೆ ಶುರು ಮಾಡಿಲ್ಲ. ಕೂಸು ಹುಟ್ಟೋಕು ಮುಂಚೆ ಕುಲಾವಿ ಬಗ್ಗೆ ಯಾಕೆ ಮಾತು ಎಂದು ಸಾ.ರಾ.ಮಹೇಶ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ದೇವೇಗೌಡರು, ಕುಮಾರಸ್ವಾಮಿ ಜೊತೆಗೆ ಸಭೆ ನಡೆಸಿ ಪ್ರಚಾರದ ರೂಪುರೇಷೆ ಸಿದ್ಧಪಡಿಸುತ್ತೇವೆ ಎಂದರು.
ಎಚ್.ಡಿ.ದೇವೇಗೌಡರು ಮುಂದಿನ ಪ್ರಧಾನಿ ಅಭ್ಯರ್ಥಿ ಎಂಬ ಜೆಡಿಎಸ್ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ದೇವೇಗೌಡರೇ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅಂತ ಹೇಳಿದ್ದಾರೆ.ಹೀಗಾಗಿ ನಾನು ದೇವೇಗೌಡರ ಮಾತನ್ನು ನಂಬುತ್ತೇನೆ. ಬೇರೆ ಯಾರೋ ಹೇಳಿದ್ದನ್ನ ನಾನು ನಂಬೋಲ್ಲ. ನಮ್ಮ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ ಎಂದು ಸ್ಪಷ್ಟಪಡಿಸಿದರು.