Advertisement

ರಾಹುಲ್‌, ಮೋದಿ, ರೆಡ್ಡಿ  ಬಗ್ಗೆ ಜನರಿಗಿದೆ ಕುತೂಹಲ!

03:21 PM May 05, 2018 | Team Udayavani |

ಸುಳ್ಯ: ಜನಾರ್ದನ ರೆಡ್ಡಿ ಇದ್ದರೇನೆ ಫೈಟ್‌ ಅಂತ ಕೆಲವರು ಬಳ್ಳಾರಿ ಬ್ರದರ್ಸ್‌ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರೆ, ನಮ್ಮ ಕ್ಷೇತ್ರಕ್ಕೂ ಮಾಯಾವತಿ, ರಾಹುಲ್‌, ದೇವೇಗೌಡ, ಯೋಗಿ ಬರ್ತಾರಾ ಎಂದು ಇನ್ನು ಕೆಲವರು ಕಣ್ಣರಳಿಸುತ್ತಾರೆ. ಸುಳ್ಯ ಕ್ಷೇತ್ರದ ಬೆಳ್ಳಾರೆ ವ್ಯಾಪ್ತಿಯಲ್ಲಿ ಎಲೆಕ್ಷನ್‌ ಹವಾದ ಝಲಕ್‌ ಹೀಗೆ ಆರಂಭಗೊಳ್ಳುತ್ತದೆ.

Advertisement

ಈ ಬಾರಿ ಬಹುಮತ ಯಾವ ಪಕ್ಷಕ್ಕೆ ಬರಬಹುದು ಎಂದು ಮಾತಿಗೆಳೆದರೆ, ಹೇಳಕ್ಕೆ ಆಗಲ್ಲ ಅನ್ನುವ ವರ್ಗವೇ ಇಲ್ಲಿ ಅಧಿಕವಿದೆ. ಬಹುತೇಕರು ಸಮ್ಮಿಶ್ರ ಸರಕಾರ ಬರುವ ಸಾಧ್ಯತಯೇ ಹೆಚ್ಚು ಅನ್ನುತ್ತಾರೆ. ಒಳ್ಳೆಯವರೇ ಬರಲಿ ಎಂಬ ಆಶಯವೂ ಕೇಳಿ ಬಂತು.

ರಾಹುಲ್‌ ಬಂದಾಗಲೂ ಲಕ್ಷ ಜನ, ಮೋದಿ ಬಂದಾಗಲೂ ಲಕ್ಷ ಜನ, ದೇವೇಗೌಡರು ಬಂದರೂ ಲಕ್ಷ ಜನ ಸೇರುತ್ತಾರೆ. ಹಾಗಾಗಿ ಜನ ಸೇರಿದ ಆಧಾರದಲ್ಲಿ ಇಂತಹ ಪಕ್ಷ ಗೆಲ್ಲುತ್ತೆ ಅನ್ನುವುದಕ್ಕೆ ಆಗುವುದಿಲ್ಲ. ಏನಿದ್ದರೂ ಮತದಾರನ ತೀರ್ಮಾನ ಬೇರೆಯೇ ಇರುತ್ತದೆ ಅಂದರು ತರಕಾರಿ ಮಾರಾಟಕ್ಕೆಂದು ಪೇಟೆಗೆ ಬಂದಿದ್ದ ಯೂಸುಫ್‌, ಬಾಬು.

‘ಯಾರು ಗೆದ್ದರೂ ನಮಗೇನೂ ಪ್ರಯೋಜನ ಇಲ್ಲ ಸಾರ್‌. ಅವರು ಸ್ವಂತಕ್ಕೆ ಬೇಕಾದ್ದನ್ನು ಮಾಡಿಕೊಳ್ಳುತ್ತಾರೆ’ ಎಂದು ಬೆಳ್ಳಾರೆ ಬಸ್‌ ನಿಲ್ದಾಣದಲ್ಲಿ ಸುಳ್ಯ ಬಸ್ಸಿಗೆ ಕಾಯುತ್ತಿದ್ದ ಹತ್ತಾರು ಜನರು ರಾಜಕೀಯ ಉಸಾಬರಿಯೇ ಬೇಡ ಎಂಬ ಹಾಗೆ ನಿರ್ದಿಷ್ಟವಾಗಿ ಪ್ರತಿಕ್ರಿಯಿಸದೆ ಮುಖ ತಿರುಗಿಸಿದರು.

‘ಈ ಬಾರಿ ವೋಟು ಹಾಕಲ್ವೇ’ ಎಂದು ಪ್ರಶ್ನಿಸಿದರೆ, ‘ಹಾಕ್ತೀವಿ ಆದರೆ ಯಾರಿಗೆ ಅಂತ ಹೇಳಲೇ ಬೇಕಾ?’ ಎಂದು ಪ್ರಯಾಣಿಕ ಸುಖೇಶ್‌ ಮರು ಪ್ರಶ್ನೆ ಎಸೆದು ಅಚ್ಚರಿ ಮೂಡಿಸಿದರು. ‘ರಾಷ್ಟ್ರ, ರಾಜ್ಯ ನಾಯಕರು ಇಲ್ಲಿಗೆ ಪ್ರಚಾರಕ್ಕೆ ಬಂದು ಅಬ್ಬರಿಸಬಹುದು. ಅವರನ್ನು ಕಂಡು ಮತ ಕೊಡೋಕೆ ಆಗಲ್ಲ. ನಮ್ಮ ಕ್ಷೇತ್ರದ ಅಭ್ಯರ್ಥಿ ಆ್ಯಕ್ಟಿವ್‌ ಆಗಿದ್ದರೇನೇ ನಮಗೆ ಲಾಭ ಆಗುತ್ತೆ’ ಎಂಬ ಅಭಿಪ್ರಾಯ ಇಲ್ಲಿನವರದು.

Advertisement

ಯಾವ ನಾಯಕರ ಮಾತನ್ನು ನಂಬಬೇಕು ಅನ್ನುವುದೇ ಗೊಂದಲ ಇದೆ. ದಿನಕ್ಕೆ ಹತ್ತಾರು ಹೇಳಿಕೆ ಕೊಡುತ್ತಾರೆ. ಆದರೂ ಬೇರೆ ಜಿಲ್ಲೆಗೆ ಹೋಲಿಸಿದರೆ ದ.ಕ, ಉಡುಪಿ ಜಿಲ್ಲೆಯ ರಾಜಕಾರಣಿಗಳು ಪರವಾಗಿಲ್ಲ ಎಂದು ಕೆಲವರು ಶಹಭಾಸ್‌ಗಿರಿ ಕೊಟ್ಟರು.

ಎರಡು ಕುತೂಹಲ
ಇಲ್ಲಿನ ಜನರಿಗೆ ಎರಡು ಕುತೂಹಲ ಇದೆ: ಒಂದನೆಯದು ಸಹಜವಾಗಿ ತಮ್ಮ ಕ್ಷೇತ್ರವಾದ ಸುಳ್ಯದಲ್ಲಿ ಯಾರು ಗೆಲ್ಲುತ್ತಾರೆ ಅನ್ನುವುದು. ಇನ್ನೊಂದು, ಪಕ್ಕದ ಕ್ಷೇತ್ರ ಪುತ್ತೂರಿನಲ್ಲಿ ಗೆಲ್ಲುವವರು ಯಾರು ಅನ್ನುವುದು.

ಕಟ್ಟುನಿಟ್ಟು ನೀತಿ ಸಂಹಿತೆಯ ಬಗ್ಗೆ ಅನೇಕರು ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಪಕ್ಷಗಳು ಕೋಟಿ ಹಣ ಸುರಿದರೂ, ಏನೂ ಆಗುವುದಿಲ್ಲ. ಆದರೆ ನಾವು ಶುಭ ಕಾರ್ಯಕ್ರಮಕ್ಕೆ ಹಣ ಕೊಂಡು ಹೋಗಲು, ಕಾರ್ಯಕ್ರಮ ನಡೆಸಲು ಹಲವಾರು ನಿಬಂಧನೆಗಳನ್ನು ಹೇರಿರುವ ಕ್ರಮದ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು.

ಚುನಾವಣೆ ಸಂದರ್ಭದಲ್ಲಿ ಆಯೋಗ ನಮ್ಮನ್ನು ನಿಯಂತ್ರಣದಲ್ಲಿ ಇಟ್ಟರೆ, ಮತ ಎಣಿಕೆ ಅನಂತರ ಜನಪ್ರತಿನಿಧಿಗಳು ನಮ್ಮ ಮೇಲೆ ನಿಯಂತ್ರಣ ಹೇರುತ್ತಾರೆ. ಇಲ್ಲಿ ಹದೆಗೆಟ್ಟ ಚುನಾವಣಾ ವ್ಯವಸ್ಥೆ ಸುಧಾರಣೆಗೆ ನೀತಿಸಂಹಿತೆ ನ್ಯಾಯ ಒದಗಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಪ್ರವೀಣ್‌.

ಮೊನ್ನೆ ಯಾರೋ ಬಂದು ರಸ್ತೆ ಬದಿ ಗುಂಡಿ ಅಗೆದರು. ಯಾಕೆಂದು ಪ್ರಶ್ನಿಸಿದರೆ ವಿದ್ಯುತ್‌ ಲೈನ್‌ ಹಾಕಲು ಎಂಬ ಉತ್ತರ ಬಂತು. ಮತ ಕೇಳಲು ಬಂದಿರುವ ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರಿಗೆ ವಿಷಯ ತಿಳಿಸಿದ್ದೆವು. ಆದರೆ ಹೊಂಡ ಇನ್ನೂ ಮುಚ್ಚಿಲ್ಲ. ನಮಗೀಗ ಚುನಾವಣೆಗಿಂತಲೂ ಈ ಸಮಸ್ಯೆಯದ್ದೇ ತಲೆನೋವು… ಹೀಗೆ ರಾಜ್ಯ- ರಾಷ್ಟ್ರದ ಸುದ್ದಿಯ ಜತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆಯೂ ಕೆಲವರು ಅಳಲು ತೋಡಿಕೊಂಡರು.

ಉಡುಪಿಯಲ್ಲಿ ದೇವೇಗೌಡ ಅವರನ್ನು ಮೋದಿ ಹೊಗಳಿದ್ದರು. ಅತಂತ್ರ ವಿಧಾನಸಭೆ ಬಂದರೆ ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರಕಾರ ಬರಬಹುದು ಅಂದುಕೊಂಡೆವು. ಆದರೆ ಅದೇ ಮೋದಿ ಗುರುವಾರ ಜೆಡಿಎಸ್‌ ವಿರುದ್ಧ ಗುಡುಗಿದ್ದಾರೆ. ಹೀಗಾಗಿ ಮೋದಿ ನಡೆ ಬಗ್ಗೆಯೇ ನಮಗೆ ಅಂದಾಜಿಸಲಾಗುತ್ತಿಲ್ಲ.
-ಶ್ರೀಧರ ಬೆಳ್ಳಾರೆ,
ಮೊದಲ ಮತ ಚಲಾವಣೆಗೆ
ರೆಡಿಯಾಗಿರುವ ಮತದಾರ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next