Advertisement

ಮೂರು ಪರ್ಯಾಯಕ್ಕೂ ಕೊಪ್ಪಳಕ್ಕೆ ಭೇಟಿ

02:44 PM Dec 30, 2019 | Team Udayavani |

ಕೊಪ್ಪಳ: ಉಡುಪಿ ಅಷ್ಠಮಠದಲ್ಲೊಂದಾದ ಪೇಜಾವರ ಮಠದ ಪೀಠಾಧಿ ಪತಿ ಶ್ರೀ ವಿಶ್ವೇಶತೀರ್ಥ ಪಾದರು ಜಿಲ್ಲೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

Advertisement

ಇಲ್ಲಿನ ಉಪನಯನ, ಪೂಜೆ ಧಾರ್ಮಿಕ ಕಾರ್ಯಕ್ಕಾಗಿ ಹಲವು ಬಾರಿ ಭೇಟಿ ನೀಡಿದ್ದ ಶ್ರೀಗಳು, ಭಕ್ತ ಸಮೂಹಕ್ಕೆ ಪ್ರವಚನ ನೀಡಿ ಜನರ ಹೃದಯ ಮಂದಿರದಲ್ಲಿ ನೆಲೆಸಿದ್ದರು.

ಕೊಪ್ಪಳಕ್ಕೆ ಬಂದಾಗಲೆಲ್ಲ ರಾಘವೇಂದ್ರ ಮಠದಲ್ಲೇ ಹೆಚ್ಚು ವಾಸ್ತವ್ಯ ಮಾಡುತ್ತಿದ್ದ ಶ್ರೀಗಳು, ಬೆಳಗ್ಗೆ 4:30ಕ್ಕೆ ಎದ್ದು, ನಿತ್ಯ ಕಾರ್ಯ ಪೂರ್ಣಗೊಳಿಸಿ ಕೆಲಕಾಲ ಯೋಗ ಮಾಡಿ ನಿತ್ಯದ ಪೂಜೆ ಪೂರ್ಣಗೊಂಡ ಬಳಿಕ ಶಿಷ್ಯರಿಗೆ 1 ಗಂಟೆ ಪ್ರವಚನ ನೀಡುತ್ತಿದ್ದರು. 6:30ರ ಬಳಿಕ ಪತ್ರಿಕೆ ಓದಿದ ನಂತರ ಸಾರ್ವಜನಿಕರ ಭೇಟಿಗೆ ಅವಕಾಶ ದೊರೆಯುತ್ತಿತ್ತು. ಬೆಳಗ್ಗೆ ಉಪಹಾರ ಸೇವಿಸುತ್ತಿರಲಿಲ್ಲ. ಮಧ್ಯಾಹ್ನ ಸ್ವಲ್ಪ ಊಟ, ಸಂಜೆ ಸ್ವಲ್ಪ ಉಪಹಾರ ಬಿಟ್ಟರೆ ಮತ್ತೆ ಮರುದಿನವೇ ಊಟ ಮಾಡುತ್ತಿದ್ದರು. ಶ್ರೀಗಳ ನಿತ್ಯಾಚರಣೆಗೆ ಕೊಪ್ಪಳದ ಭಕ್ತರು ಮೂಕವಿಸ್ಮಿತರಾಗಿದ್ದರು.

ಮೂರು ಪರ್ಯಾಯಕ್ಕೂ ಕೊಪ್ಪಳಕ್ಕೆ ಭೇಟಿ: ಪೇಜಾವರ ಶ್ರೀಗಳಿಗೆ ಐತಿಹಾಸಿಕ 5 ಪರ್ಯಾಯ ನಡೆದಿದ್ದು, 3 ಬಾರಿ ಪರ್ಯಾಯಕ್ಕೂ ಕೊಪ್ಪಳಕ್ಕೆ ಭೇಟಿ ನೀಡಿದ್ದರು. ರಾಘವೇಂದ್ರ ಮಠದಲ್ಲೇ ಪೂಜೆ ಕೈಗೊಳ್ಳುತ್ತಿದ್ದರು. ಇಲ್ಲಿನ ಭಕ್ತವೃಂದ ಶ್ರೀಗಳನ್ನು ಪಾದಪೂಜೆಗೆ ಆಹ್ವಾನಿಸಿಸುತ್ತಿದ್ದರು.

ನವವೃಂದಾವನದಲ್ಲಿ ಜಪ-ತಪ ಪೂಜೆ: ಗಂಗಾವತಿಗೆ ಬಂದಾಗಲೊಮ್ಮೆ ನವ ವೃಂದಾವನಕ್ಕೆ ಭೇಟಿ ನೀಡುತ್ತಿದ್ದರು. ಅಲ್ಲೇ ನಿತ್ಯ ಕಾರ್ಯ ಪೂರೈಸಿ ಜಪ-ತಪ ಕೈಗೊಂಡು ಬಳಿಕ ಪೂಜೆ ಪೂರ್ಣಗೊಳಿಸಿ ಪ್ರವಚನ ನೀಡುತ್ತಿದ್ದರು. ಅವರು ಪುರ ಪ್ರವೇಶವಿದ್ದರೆ ಭಕ್ತ ಸಮೂಹ ಅದ್ಧೂರಿಯಿಂದ ಮೆರವಣಿಗೆ ನಡೆಸುತ್ತಿತ್ತು. ಬಳಿಕ ಶ್ರೀಗಳ ಸಾನಿಧ್ಯದಲ್ಲಿ ಮಠದಲ್ಲೇ ಧಾರ್ಮಿಕ ಕಾರ್ಯ, ಸಾಮೂಹಿಕ ಉಪನಯನ ನೆರವೇರಿಸಿ ವಟುಗಳಿಗೆ ಬೋಧನೆ ಮಾಡುತ್ತಿದ್ದರು.

Advertisement

ಗಂಗಾವತಿಯಲ್ಲಿ ವಿದ್ಯಾಪೀಠ: ಹಿಂದೊಮ್ಮೆ ಶ್ರೀಗಳು ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳಿಗೆ ಸಂಸ್ಕೃತ, ವೇದೋಧ್ಯಯನ ಕಲಿಕೆಗೆ ವಿದ್ಯಾಪೀಠ ಸ್ಥಾಪನೆಗೆವಿವಿಧೆಡೆ ಸ್ಥಳ ಪರಿಶೀಲಿಸಿದ್ದರು. ರಾಯಚೂರಿನಲ್ಲಿ ವಿದ್ಯಾಪೀಠ ಸ್ಥಾಪನೆಗೆ ಮನಸ್ಸು ಮಾಡಿದ್ದರು.

ಆದರೆ ಗಂಗಾವತಿಯ ನಾರಾಯಣ ಶ್ರೇಷ್ಠಿ ಎನ್ನುವ ಭಕ್ತರು ಗಂಗಾವತಿಯಲ್ಲೇ ಸತ್ಯನಾರಾಯಣಸ್ವಾಮಿ ದೇವಸ್ಥಾನ ನಿರ್ಮಿಸಿ ಪಕ್ಕದಲ್ಲೇ ಜಾಗ ಮೀಸಲಿಟ್ಟು ವಿಜಯಧ್ವಜ ವಿದ್ಯಾಪೀಠ ನಿರ್ಮಿಸಿ ಶ್ರೀಗಳಿಗೆ ಅರ್ಪಿಸಿದ್ದರು. 1998ರಿಂದ ಶ್ರೀಗಳು ವಿದ್ಯಾಪೀಠದಲ್ಲಿ ಮಕ್ಕಳಿಗೆ ಸಂಸ್ಕೃತ, ವೇದಗಳ ಅಧ್ಯಯನಕ್ಕೆ ಚಾಲನೆ ನೀಡಿದ್ದರು. ಪ್ರಸ್ತುತ 8 ಅಧ್ಯಾಪಕರು ವಿದ್ಯಾಪೀಠದಲ್ಲಿ ಮಕ್ಕಳಿಗೆ ನಿತ್ಯ ವೇದೋಪನ್ಯಾಸ ನೀಡುತ್ತಿದ್ದಾರೆ. ಪೇಜಾವರ ಶ್ರೀಗಳೇ ಮಕ್ಕಳಿಗೆ ಪರೀಕ್ಷೆ ಕೈಗೊಂಡಿರುವುದು ಇಲ್ಲಿನ ವಿಶೇಷ.

ಹಂಪಿಯಲ್ಲಿ ಸನ್ಯಾಸತ್ವ ದೀಕ್ಷೆ: ತುಂಗಭದ್ರಾ ತಟದಲ್ಲಿರುವ ವಿಶ್ವವಿಖ್ಯಾತ ಹಂಪಿಯ ಯಂತ್ರೋದ್ಧಾರ ಮುಖ್ಯ ಪ್ರಾಣದೇವರ ಸನ್ನಿಧಾನದಲ್ಲಿ ಪೇಜಾವರ ಶ್ರೀಗಳಿಗೆ 8ನೇ ವಯಸ್ಸಿನಲ್ಲೇ ಸನ್ಯಾಸತ್ವ ದಿಧೀಕ್ಷೆ ದೊರೆತಿದೆ. ಶ್ರೀಗಳು ಕೊಪ್ಪಳ-ಹೊಸಪೇಟೆ ಭಾಗಕ್ಕೆ ಪ್ರವಾಸ ಕೈಗೊಂಡಾಗಲೆಲ್ಲ ಮುಖ್ಯ ಪ್ರಾಣ ದೇವರ ಸನ್ನಿಧಾನಕ್ಕೆ ತೆರಳಿ ಜಪ-ತಪ ಕೈಗೊಳ್ಳುತ್ತಿರುವುದನ್ನು ಮಾತ್ರ ಮರೆತಿರಲಿಲ್ಲ.

ಗವಿಸಿದ್ದೇಶ್ವರ ಜಾತ್ರೋತ್ಸವಕ್ಕೆ ಚಾಲನೆ: ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು ಪೇಜಾವರ ಶ್ರೀಗಳನ್ನು 2012ರಲ್ಲಿ ಜಾತ್ರಾ ಮಹೋತ್ಸವಕ್ಕೆ ಆಹ್ವಾನಿಸಿದ್ದರು. ಜಾತ್ರೆಗೆ ಆಗಮಿಸಿದ್ದ ಶ್ರೀಗಳು ಮಹಾ ರಥೋತ್ಸವಕ್ಕೆ ಚಾಲನೆ ನೀಡಿ ಅಪಾರ ಭಕ್ತ ಸಮೂಹ ನೋಡಿ ಆಶ್ಚರ್ಯಚಕಿತರಾಗಿದ್ದರು.

ಅಭಿನವ ಶ್ರೀಗಳು ಕಿರಿಯ ವಯಸ್ಸಿನಲ್ಲೇ ಇಷ್ಟೊಂದು ಭಕ್ತ ಸಮೂಹವನ್ನು ಸಂಪಾದಿಸಿರುವ ಬಗ್ಗೆ ಹಾಗೂ ಈ ಭಾಗದಲ್ಲಿನ ಭಕ್ತಿ, ಭಾವೈಕ್ಯತೆ, ಪ್ರಸಾದ, ದಾಸೋಹ, ಜಾತ್ರೋತ್ಸವ ಆಚರಣೆಯ ಬಗ್ಗೆ ಗುಣಗಾನ ಮಾಡಿದ್ದರು.

 

-ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next