ಬೆಳಗಾವಿ: ಮೇಕೆದಾಟು ಯೋಜನೆ ಬಗ್ಗೆ ತಮಿಳುನಾಡು ಸರ್ಕಾರ ತಪ್ಪು ಕಲ್ಪನೆ ಯಲ್ಲಿದೆ. ರಾಜ್ಯ ಸರ್ಕಾರ ಯೋಜನೆ ಅನುಷ್ಠಾನಗೊಳಿಸುತ್ತಿಲ್ಲ, ಕೇವಲ ಡಿಪಿಆರ್ ಮಾತ್ರ ಸಿದ್ಧಪಡಿಸುತ್ತಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ತಮಿಳುನಾಡು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಕೇವಲ ರಾಜಕಾರಣಕ್ಕಾಗಿ ಯೋಜನೆಯನ್ನು ವಿರೋಧ ಮಾಡುವುದು ಸರಿಯಲ್ಲ. ಕಾನೂನು ಚೌಕಟ್ಟಿನೊಳಗೆ ಯೋಜನೆ ಜಾರಿ ಮಾಡಲು
ಮುಂದಾಗಿದ್ದೇವೆ ಎಂದು ಹೇಳಿದರು.
ಕೇಂದ್ರದ ಜಲ ಆಯೋಗ ಕೇವಲ ಡಿಪಿಆರ್ ಸಿದ್ದಪಡಿಸಲು ಮಾತ್ರ ಅನುಮತಿ ಕೊಟ್ಟಿದೆ. ಡಿಪಿಆರ್ ಬಿಟ್ಟು ನಾವು ಅಣೆಕಟ್ಟೆ ಕಟ್ಟುವ ಕೆಲಸ ಆರಂಭ ಮಾಡಿಲ್ಲ. ನಮ್ಮ ವಾದ ಮಂಡನೆ ಮಾಡಲು ಸುಪ್ರೀಂ ಕೋರ್ಟ್ 4 ವಾರಗಳ ಸಮಯ ಕೊಟ್ಟಿದೆ. ಇದಕ್ಕೆ ನಾವು ಸಿದ್ದವಾಗುತ್ತಿದ್ದೇವೆ. ಸಂಪೂರ್ಣ ತೀರ್ಪಿನ ವಿವರ ಬಂದ ಮೇಲೆ ನಾನು ಪ್ರತಿಕ್ರಿಯೆ ಕೊಡುತ್ತೇನೆ ಎಂದು ಹೇಳಿದರು.