ಬೆಂಗಳೂರು: “ನಮ್ಮ ಮೆಟ್ರೋ’ ರೈಲು, ಶುಕ್ರವಾರ ಪ್ರಯಾಣಿಕರ ಸಂಚಾರದಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿದೆ. ಕೇವಲ ಒಂದು ದಿನದಲ್ಲಿ ಮೆಟ್ರೋದಲ್ಲಿ 4.58 ಲಕ್ಷ ಮಂದಿ ಪ್ರಯಾಣಿಸಿದ್ದು, 1.09 ಕೋಟಿ ರೂ. ಆದಾಯ ಹರಿದುಬಂದಿದೆ. ಇದು ಗೌರಿ-ಗಣೇಶ ಹಬ್ಬಕ್ಕೆ ಬಿಎಂಆರ್‌ಸಿಗೆ ಬಂದ ಗಿಫ್ಟ್!
ವಾರಾಂತ್ಯದ ಜತೆಗೆ ಹಬ್ಬದ ಹಿನ್ನೆಲೆಯಲ್ಲಿ ಸಾಲು ಮೂರು ದಿನಗಳು ರಜೆ ಇದ್ದು, ನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬೇರೆ ಬೇರೆ ಊರುಗಳಿಗೆ ತೆರಳಿದರು. ಇಲ್ಲಿನ ಹತ್ತಿರದ ಬಸ್ ನಿಲ್ದಾಣಗಳನ್ನು ತಲುಪಲು ಪ್ರಯಾಣಿಕರು ಮೆಟ್ರೋಗೆ ಮುಗಿಬಿದ್ದರು. ಇದರಿಂದ ಶುಕ್ರವಾರ ರಾತ್ರಿವರೆಗೆ ಒಟ್ಟಾರೆ 4.58 ಲಕ್ಷ ಜನ ಪ್ರಯಾಣಿಸಿದ್ದಾರೆ. ಈ ಪೈಕಿ ನೇರಳೆ ಮಾರ್ಗದಲ್ಲಿ 2,49,162 ಹಾಗೂ ಹಸಿರು ಮಾರ್ಗದಲ್ಲಿ 2,09,076 ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್ ತಿಳಿಸಿದ್ದಾರೆ.
ಸಾಮಾನ್ಯವಾಗಿ ಈ ಎರಡೂ ಮಾರ್ಗಗಳಲ್ಲಿ ನಿತ್ಯ ಸರಾಸರಿ 4.20ರಿಂದ 4.30 ಲಕ್ಷ ಜನ ಪ್ರಯಾಣಿಸುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 25ರಿಂದ 30 ಸಾವಿರ ಪ್ರಯಾಣಿಸಿದ್ದಾರೆ. ಒಟ್ಟಾರೆ ಇಡೀ ದಿನ ನೇರಳೆ ಮಾರ್ಗದಿಂದ 54,25,474 ಹಾಗೂ ಹಸಿರು ಮಾರ್ಗದಿಂದ 54,81,372 ರೂ. ಹರಿದುಬಂದಿದೆ. ಈ ಹಿಂದೆ 2019ರ ಆಗಸ್ಟ್ 14ರಂದು 4.53 ಲಕ್ಷ ಜನ ಪ್ರಯಾಣಿಸಿದ್ದರು. ಅಲ್ಲದೆ, ಏಪ್ರಿಲ್ 4ರಂದು 4.52 ಲಕ್ಷ ಜನ ಸಂಚರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು ಎಂದು ಅವರು ಮಾಹಿತಿ ನೀಡಿದರು.
“ಈ ಮೈಲುಗಲ್ಲುಗಳು ನಮ್ಮ ಮೆಟ್ರೋ ಸೇವೆಗೆ ಪ್ರಯಾಣಿಕರು ನೀಡಿದ ಸ್ಪಂದನೆಯಿಂದ ಸಾಧ್ಯವಾಗಿದೆ. ಇದಕ್ಕಾಗಿ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸುವ ಮೂಲಕ ಈ ವಿಶ್ವಾಸವನ್ನು ಉಳಿಸಿಕೊಳ್ಳಲಾಗುವುದು’ ಎಂದು ಯಶವಂತ ಚವಾಣ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಟ್ವಿಟರ್‌ನಲ್ಲೇ ಕೆಲವರು ಬಿಎಂಆರ್‌ಸಿಎಲ್‍ಗೆ ಪ್ರತಿಕ್ರಿಯೆ ರೂಪದಲ್ಲಿ ಕೆಲವು ಸಲಹೆಗಳನ್ನೂ ನೀಡಿದ್ದಾರೆ.
“ನಮ್ಮ ಮೆಟ್ರೋ’ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಅಗತ್ಯವಿದೆ. ಟ್ರಿಪ್‌ಗಳ ಅಂತರವನ್ನು ಕಡಿಮೆ ಮಾಡುವ ಮೂಲಕ ಫ್ರಿಕ್ವೆನ್ಸಿ ಹೆಚ್ಚಿಸಬೇಕು. ಈಗಲೂ ಹಲವು ಮೂರು ಬೋಗಿಗಳ ಮೆಟ್ರೋ ರೈಲುಗಳಿದ್ದು, ಅವುಗಳ ಸಾಮರ್ಥ್ಯ ದುಪ್ಪಟ್ಟುಗೊಳಿಸುವ ಅವಶ್ಯಕತೆ ಇದೆ. ಅಲ್ಲದೆ, ಹಸಿರು ಮಾರ್ಗದಲ್ಲಿ ಮೊದಲ ಮೂರು ನಿಲ್ದಾಣಗಳ ನಡುವಿನ ಪ್ರಯಾಣ ದರ ಕಡಿಮೆ ಮಾಡಬೇಕು ಎಂದು ತಿಳಿಸಿದ್ದಾರೆ.