Advertisement
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಸಹಿತ ಹಲವು ಕಡೆಗಳಿಗೆ ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆಯಿದು. ಹಾಸನ, ಮೈಸೂರು, ಕೊಡಗು ಜಿಲ್ಲೆಯ ಜನರನ್ನು ದಕ್ಷಿಣ ಕನ್ನಡಕ್ಕೆ ಹಾಗೂ ಕೇರಳಕ್ಕೆ ಈ ರಸ್ತೆ ಸಂಪರ್ಕಿಸುತ್ತದೆ. ಶಿರಾಡಿ ಹೆದ್ದಾರಿಗೆ ಬೆಂಗಳೂರು – ಕರಾವಳಿಗಿರುವ ಪರ್ಯಾಯ ರಸ್ತೆಯಿದು.
ಕಳೆದ ಬಾರಿಯ ಭಾರೀ ಮಳೆಗೆ ಅಡ್ಡಹೊಳೆಯಲ್ಲೂ ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಸೇತುವೆಯ ಪಿಲ್ಲರ್‌ಗಳಿಗೆ ಬಡಿದಿವೆ. ಪಿಲ್ಲರ್‌ಗಳಿಗೆ ಹಾನಿಯಾಗಿದ್ದು, ಸೇತುವೆ ಮೇಲೆ ಸಂಚಾರವೀಗ ದುಸ್ತರವಾಗಿದೆ. ಮೈಸೂರು ಪ್ರಾಂತದ ಜನರು ಹಿಂದೆ ಕುಕ್ಕೆ ಕ್ಷೇತ್ರಕ್ಕೆ ಬರಲು ಬಳಸುತ್ತಿದ್ದ ರಸ್ತೆಯಿದು. ಬಿಸಿಲೆ – ಶನಿವಾರಸಂತೆ – ಹೊಳೆನರಸೀಪುರ ಮೂಲಕ ಬೆಂಗಳೂರಿಗೆ ತೆರಳಲು ಹತ್ತಿರದ ರಸ್ತೆ ಇದಾಗಿದೆ. ಅರಕಲಗೂಡು ಮಾರ್ಗವಾಗಿ ಪ್ರಸಿದ್ಧ ಪುಣ್ಯ ಕ್ಷೇತ್ರ ರಾಮನಾಥಪುರದ ಮೂಲಕ ಮೈಸೂರಿಗೂ ಹತ್ತಿರದ ರಸ್ತೆಯಿದು. ಸುಬ್ರಹ್ಮಣ್ಯಕ್ಕೆ ಸಕಲೇಶಪುರ, ಕೂಡುರಸ್ತೆ, ವನಗೂರು ಮೊದಲಾದೆಡೆಗಳಿಂದ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳಿಗೂ ಈ ರಸ್ತೆ ಅನುಕೂಲಕರವಾಗಿದೆ.
Related Articles
ಅಪಾಯಕಾರಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಬೆಂಗಳೂರು, ಮೈಸೂರಿನಿಂದ ಸುಳ್ಯ, ಸುಬ್ರಹ್ಮಣ್ಯ ಧರ್ಮಸ್ಥಳಗಳಿಂದ ಸಂಚರಿಸುತ್ತಿವೆ. ಭಾರೀ ಘನ ಹಾಗೂ ಲಘು ವಾಹನಗಳು, ಪ್ರವಾಸಿ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಚಲಿಸುತ್ತವೆ. ಅರಣ್ಯದಿಂದ ಬರುವ ನೀರು, ಸೂಕ್ತ ಚರಿಂಡಿಯಿಲ್ಲದೆ ರಸ್ತೆ ಮೇಲೆ ಹರಿಯುತ್ತಿದೆ. ರಸ್ತೆ ಹಾಳಾಗುತ್ತಿದೆ. ಬಿಸಿಲೆ ಘಾಟಿ ರಸ್ತೆಯಲ್ಲಿ ಈ ಹಿಂದೆ ನಡೆದ ಕಾಂಕ್ರೀಟ್ ಸಹಿತ ರಸ್ತೆ ವಿಸ್ತರಣೆ ಕಾಮಗಾರಿಯಲ್ಲಿ ಆದ ಲೋಪ ಭಾರೀ ಸುದ್ದಿ ಮಾಡಿತ್ತು. ಪ್ರತಿಭಟನೆಗಳೂ ನಡೆದಿದ್ದವು. ಪ್ರಧಾನಿಯವರಿಗೂ ಸಕಲೇಶಪುರ ಭಾಗದವರು ಪತ್ರ ಬರೆದಿದ್ದರು.
Advertisement
ರಸ್ತೆ ದುರಸ್ತಿಯಾಗಬೇಕುಬಿಸಿಲೆ ಘಾಟಿ ರಸ್ತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹತ್ತಿರದ ರಸ್ತೆಯಾದ್ದರಿಂದ ಈ ರಸ್ತೆಯಾಗಿ ಬಂದಿರುವೆ. ಆದರೆ ನಡುವೆ ಸ್ವಲ್ಪ ಭಾಗದ ರಸ್ತೆ ಹಾಳಾಗಿದೆ. ಸೇತುವೆ ಬಳಿಯೂ ಕಷ್ಟವಾಗುತ್ತಿದೆ. ತುರ್ತಾಗಿ ಈ ರಸ್ತೆ ದುರಸ್ತಿಗೊಳಿಸಿದಲ್ಲಿ ಎಲ್ಲರಿಗೂ ಅನುಕೂಲವಾಗಲಿದೆ ಎಂದು ಹಾಸನದ ಟ್ಯಾಕ್ಸಿ ಚಾಲಕ ಪ್ರಭು ಪ್ರತಿಕ್ರಿಯಿಸಿದ್ದಾರೆ. ದುರಸ್ತಿಯಾದಲ್ಲಿ ಅನುಕೂಲ
ರಸ್ತೆ ಚೆನ್ನಾಗಿದೆ. ನಡುವೆ ಅತ್ಯಲ್ಪ ದೂರದ ತನಕ ಹದೆಗೆಟ್ಟಿದೆ. ಸೇತುವೆ ಮೇಲ್ಭಾಗದಲ್ಲಿ ಸಂಚಾರಕ್ಕೆ ಕಷ್ಟವಾಗುತ್ತಿದೆ. ಇವುಗಳ ದುರಸ್ತಿಯಾದಲ್ಲಿ ಸಂಚಾರಕ್ಕೆ ಅನುಕೂಲ. ಶೀಘ್ರ ಅದನ್ನು ನಡೆಸುವಂತೆ ಸರಕಾರಕ್ಕೆ ಆಗ್ರಹಿಸುತ್ತೇವೆ.
– ರವಿ ಕೂಡುರಸ್ತೆ, ಆಟೋ ಚಾಲಕ 26 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ
ಕಚ್ಚಾ ರಸ್ತೆ ಆಗಿದ್ದ ಇದು ನಿಧಾನವಾಗಿ ಡಾಮರು ರಸ್ತೆಯಾಗಿ ಬದಲಾಗಿತ್ತು. ಎರಡು ವರ್ಷಗಳ ಹಿಂದೆ ಮೂರು ಹಂತದಲ್ಲಿ 26 ಕೋಟಿ ರೂ. ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಬಿಸಿಲೆ ಘಾಟಿ ರಸ್ತೆಯ ಸುಬ್ರಹ್ಮಣ್ಯ-ಕೂಡು ರಸ್ತೆ ನಡುವೆ ದ.ಕ. ವಿಭಾಗಕ್ಕೆ ಸೇರಿದ 30 ಕಿ.ಮೀ. ರಸ್ತೆ ಅಭಿವೃದ್ಧಿಗೊಂಡಿದೆ. ಯಸಳೂರು ವಿಭಾಗಕ್ಕೆ ಸೇರಿದ 2 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಶೀಘ್ರ ಕಾಮಗಾರಿ ಆರಂಭ
ಬಿಸಿಲೆ ಘಾಟಿ ರಸ್ತೆಯಲ್ಲಿ ಅಡ್ಡಹೊಳೆ ಸೇತುವೆ ಗಟ್ಟಿಯಾಗಿಯೇ ಇದೆ. ಸೇತುವೆ ಸಂಪರ್ಕ ಕಡಿತಗೊಳ್ಳುವಷ್ಟು ಶಿಥಿಲಗೊಂಡಿಲ್ಲ. ಸೇತುವೆ ಮೇಲಿನ ಕಾಂಕ್ರೀಟ್ ಎದ್ದು ಹೋಗಿ ಕಬ್ಬಿಣದ ಸರಳುಗಳು ಕಾಣುತ್ತಿವೆಯಷ್ಟೆ. ಹಾನಿಗೊಳಗಾದ ಅಡ್ಡಹೊಳೆ ಸೇತುವೆ ದುರಸ್ತಿ ಸಹಿತ ಈ ರಸ್ತೆಯ 2.5 ಕಿ.ಮೀ. ದೂರದ ರಸ್ತೆ ಕಾಂಕ್ರೀಟ್ ಕಾಮಗಾರಿ 10 ಕೋಟಿ ರೂ. ವೆಚ್ಚದಲ್ಲಿ ನಡೆಯಲಿದೆ. ಟೆಂಡರು ಪ್ರಕ್ರಿಯೆ ಪೂರ್ಣಗೊಂಡಿದೆ. ಮಂಗಳೂರು ಮೂಲದ ವಿಜಯಾನಂದ ಹೆಸರಿನ ಗುತ್ತಿಗೆದಾರರು ಕಾಮಗಾರಿ ನಡೆಸುತ್ತಾರೆ. ವಾರದಲ್ಲಿ ಕೆಲಸ ಆರಂಭಿಸಲು ಸೂಚಿಸುವೆ.
– ವೆಂಕಟೇಶ್ ಎಇಇ , ಸಕಲೇಶಪುರ ಲೋಕೋಪಯೋಗಿ ಇಲಾಖೆ