Advertisement

370ನೇ ವಿಧಿ ರದ್ದತಿ, ಕಾಶ್ಮೀರಕ್ಕೆ ಶಾಂತಿಯ ಲಾಭ

08:48 PM Aug 04, 2023 | Team Udayavani |

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ರದ್ದು ಮಾಡಿ ಶನಿವಾರಕ್ಕೆ ನಾಲ್ಕು ವರ್ಷಗಳು ತುಂಬಿದ್ದು, ಕಣಿವೆ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಭಿವೃದ್ಧಿಯ ಜತೆ ಜತೆಗೆ ಶಾಂತಿಯ ಸ್ಥಾಪನೆಯಾಗಿದ್ದು, ಕಾಶ್ಮೀರದ ಮಂದಿ ನೆಮ್ಮದಿಯಿಂದ ಬಾಳ್ವೆ ಮಾಡುವ ವಾತಾವರಣ ಸೃಷ್ಟಿಯಾಗಿದೆ ಎಂಬುದು ಹೊರಜಗತ್ತಿಗೆ ಅರಿವಾಗುತ್ತಿದೆ.

Advertisement

2019ರ ಆ.5ರಂದು ಸಂಸತ್‌ನಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಯಾರೊಬ್ಬರೂ ಊಹೆ ಮಾಡಿರಲಿಲ್ಲ. ಇದಕ್ಕೆ ಕಾರಣಗಳೂ ಇದ್ದವು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ಈ ವಿಶೇಷ ಸ್ಥಾನಮಾನವನ್ನು ತೆಗೆಯುವ ಸಾಧ್ಯತೆಗಳೇ ಇಲ್ಲ ಎಂದೇ ವಿಶ್ಲೇಷಿಸಲಾಗುತ್ತಿತ್ತು. ಅಲ್ಲದೆ 370ನೇ ವಿಧಿ ರದ್ದತಿ ಮಾಡಿದರೆ ಕಣಿವೆಯಲ್ಲಿ ರಕ್ತಪಾತವೇ ಆಗಲಿದೆ, ಇಂಥದ್ದೊಂದು ನಿರ್ಧಾರಕ್ಕೆ ಯಾರೊಬ್ಬರು ಕೈಹಾಕಲಾರರು ಎಂಬ ರಾಜಕೀಯ ಪಂಡಿತರ ಹಲವಾರು ಲೆಕ್ಕಾಚಾರಗಳು ತಲೆಕೆಳಗಾದವು. 2019ರಿಂದ ಇಲ್ಲಿವರೆಗೆ ಕಣಿವೆ ರಾಜ್ಯದಲ್ಲಿ ಹಿಂಸೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಅಭಿವೃದ್ಧಿಯತ್ತ ರಾಜ್ಯ ದಾಪುಗಾಲಿಡುತ್ತಿದೆ. ಜತೆಗೆ, ಕೇಂದ್ರ ಸರ್ಕಾರವೂ ಅಭಿವೃದ್ಧಿಗೆ ಬೇಕಾದಷ್ಟು ಅನುದಾನವನ್ನೂ ಬಿಡುಗಡೆ ಮಾಡುತ್ತಿದೆ.

ಈ ನಾಲ್ಕು ವರ್ಷಗಳ ಅವಧಿಯ ಸ್ಥಿತಿ ಮತ್ತು ಅದರ ಹಿಂದಿನ ಸ್ಥಿತಿ ಬಗ್ಗೆ ಹೋಲಿಕೆ ಮಾಡಿದಾಗ, ಹಿಂಸಾಚಾರ, ಗದ್ದಲಗಳು ಕಡಿಮೆಯಾಗಿರುವುದು ಕಂಡು ಬರುತ್ತಿದೆ. ಗ್ರೆನೇಡ್‌ ದಾಳಿಗಳಂಥ ಪ್ರಕರಣಗಳು ಶೇ.15, ಐಇಡಿ ಸ್ಫೋಟಗಳಲ್ಲಿ ಮರಣ ಹೊಂದುವವರ ಸಂಖ್ಯೆ ಶೇ.57, ಹಿಟ್‌ ಆ್ಯಂಡ್‌ ರನ್‌ ಕೇಸುಗಳಲ್ಲಿ ಶೇ.42, ಆಯುಧಗಳ ಕಳವು ಪ್ರಕರಣಗಳಲ್ಲಿ ಶೇ.60, ಕಲ್ಲು ಎಸೆತ ಪ್ರಕರಣಗಳಲ್ಲಿ ಶೇ.92, ಹರತಾಳ ಮತ್ತು ಬಂದ್‌ ಕರೆಯಂಥ ಪ್ರಕರಣಗಳು ಶೇ.90, ಎನ್‌ಕೌಂಟರ್‌ಗಳು ಶೇ.32, ಭಯೋತ್ಪಾದಕರಿಂದ ನಾಗರಿಕರ ಸಾವು ಶೇ.11, ಕಾನೂನು ಮತ್ತು ಸುವ್ಯವಸ್ಥೆ ವೇಳೆ ನಾಗರಿಕರ ಸಾವು ಶೇ.100, ಪೊಲೀಸರ ಸಾವು ಶೇ.57, ಭಯೋತ್ಪಾದಕರ ನೇಮಕಾತಿ ಶೇ.58, ಅಪಹರಣ ಶೇ.58ರಷ್ಟು ಕಡಿಮೆಯಾಗಿವೆ.

ಹೀಗಾಗಿ, 370ನೇ ವಿಧಿ ತೆಗೆದುಹಾಕಿದ್ದರಿಂದ ಕಣಿವೆ ರಾಜ್ಯದ ಜನ ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. 2019ಕ್ಕೂ ಮುನ್ನ ಇದ್ದ ಸ್ಥಿತಿಯೂ ಈಗಿಲ್ಲ ಎಂಬುದು ಅಲ್ಲಿನ ನಾಗರಿಕರೇ ಮಾತನಾಡುತ್ತಿದ್ದಾರೆ. ಇದಕ್ಕೆ ಇತ್ತೀಚಿನ ಉದಾಹರಣೆ ಮೊಹರಂ ಕಡೇ ದಿನದ ಮೆರವಣಿಗೆ. ಇದನ್ನು ಶಿಯಾ ಮುಸಲ್ಮಾನರು ಮಾಡುತ್ತಿದ್ದು, ಕಳೆದ 37 ವರ್ಷಗಳಿಂದ ನಿಷೇಧಿಸಲಾಗಿತ್ತು. ಕಣಿವೆ ರಾಜ್ಯದಲ್ಲಿ ಶಿಯಾ ಮುಸ್ಲಿಮರ ಸಂಖ್ಯೆ ಕಡಿಮೆ ಇದ್ದು, ಬಹುಸಂಖ್ಯಾತರು ಇದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಜತೆಗೆ, ಮೆರವಣಿಗೆ ಮೇಲೆ ಕಲ್ಲು ಎಸೆತದಂಥ ಪ್ರಕರಣಗಳು ಹೆಚ್ಚಾಗಿದ್ದರಿಂದ ನಿಷೇಧ ಮಾಡಲಾಗಿತ್ತು. ಆದರೆ, ಇತ್ತೀಚಿಗೆ ಈ ಮೆರವಣಿಗೆ ನಡೆಯಿತಲ್ಲದೇ, ಅಲ್ಲಿನ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಕೂಡ ಭಾಗಿಯಾಗಿದ್ದರು.

ಏನೇ ಆಗಲಿ, ಈ ನಾಲ್ಕು ವರ್ಷಗಳಲ್ಲಿ ಕಣಿವೆ ರಾಜ್ಯ ಬದಲಾಗಿದೆ ಎಂಬುದನ್ನು ತಳ್ಳಿಹಾಕಲಾಗದು. ಹಾಗಂಥ ಮೈಮರೆತು ಕುಳಿತುಕೊಳ್ಳಲು ಸಾಧ್ಯವಿಲ್ಲ. ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಹಿಂಸೆಗಾಗಿ ಕಾಯುತ್ತಲೇ ಇರುತ್ತಾರೆ. ಇದರ ಮೇಲೂ ಗಮನ ಇರಿಸಿಕೊಂಡು, ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಹೋಗಬೇಕಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next