Advertisement

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

12:08 PM Jul 15, 2024 | Team Udayavani |

ಸೀತಾ ಮತ್ತು ಗೀತಾ (ಹೆಸರು ಬದಲಾಯಿಸಿದೆ) ಇಬ್ಬರೂ ಅತಿಯಾದ ಋತುಸ್ರಾವ, ತೀವ್ರ ಬಳಲಿಕೆ ಮತ್ತು ತಲೆತಿರುಗುವ ಸಮಸ್ಯೆಗಳಿಂದ ನಮ್ಮ ಡಾ| ಟಿಎಂಎ ಪೈ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆ ಗೊಳಪಡಿಸಿದ ಬಳಿಕ ಇಬ್ಬರೂ 5 ಗ್ರಾಂ % ನಷ್ಟು ಅಲ್ಪಪ್ರಮಾಣದ ಹಿಮೊಗ್ಲೋಬಿನ್‌ ನೊಂದಿಗೆ ತೀವ್ರ ತರಹದ ರಕ್ತಹೀನತೆ ಹೊಂದಿರುವುದು ತಿಳಿದುಬಂತು.

Advertisement

ಜತೆಗೆ, ಗೀತಾ ಅವರಲ್ಲಿ ಅತಿಯಾದ ಋತುಸ್ರಾವಕ್ಕೆ ಅಡೆನೊಮಯೋಸಿಸ್‌ ಮತ್ತು ಸೀತಾ ಅವರಲ್ಲಿ ಫೈಬ್ರಾಯ್ಡ ಕಾರಣವಾಗಿರುವುದು ಪತ್ತೆಯಾಯಿತು. ಇಬ್ಬರೂ ರೋಗಿಗಳಿಗೆ ರಕ್ತಹೀನತೆಯನ್ನು ಸರಿಪಡಿಸಲು ರಕ್ತಮರುಪೂರಣ ನಡೆಸಲಾಯಿತು ಮತ್ತು ಬಳಿಕ ನಿರ್ದಿಷ್ಟ ಚಿಕಿತ್ಸೆಗಳನ್ನು ಅಂದರೆ, ಹಿಸ್ಟರೆಕ್ಟೊಮಿ (ಗರ್ಭಕೋಶವನ್ನು ತೆಗೆದುಹಾಕುವುದು) ಒದಗಿಸಲಾಯಿತು.

ಗರ್ಭಕೋಶದ ಅಸಹಜ ರಕ್ತಸ್ರಾವ (ಎಯುಬಿ)ವು ಎಲ್ಲ ವಯೋಮಾನದ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಾಗಿದ್ದು, ವಯಸ್ಸನ್ನು ಆಧರಿಸಿ ಕಾರಣಗಳು ಬೇರೆ ಬೇರೆಯಾಗಿರಬಹುದಾಗಿದೆ. ಮಹಿಳೆಯರು ಸ್ತ್ರೀರೋಗ ಮತ್ತು ಪ್ರಸೂತಿಶಾಸ್ತ್ರಜ್ಞರನ್ನು ಕಾಣಲು ಧಾವಿಸುವ ಮೂರನೇ ಒಂದರಷ್ಟು ಪ್ರಕರಣಗಳಿಗೆ ಇದೇ ಕಾರಣವಾಗಿರುತ್ತದೆ.

ಮಹಿಳೆಯರ ದೈಹಿಕ, ಸಾಮಾಜಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಎಯುಬಿಯು ಗಮನಾರ್ಹ ಪರಿಣಾಮವನ್ನು ಬೀರಬಹುದಾಗಿದೆ. ಎಯುಬಿ ಹೊಂದಿರುವ ಮಹಿಳೆಯರು ಕ್ಲಪ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಅತ್ಯಾವಶ್ಯಕವಾಗಿದೆ.

ಎಯುಬಿ ಅಂದರೇನು?

Advertisement

ಎಯುಬಿ ಎಂಬುದು ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ ಎಂಬುದರ ಸಂಕ್ಷಿಪ್ತ ರೂಪ, ಕನ್ನಡದಲ್ಲಿ ಇದನ್ನು “ಗರ್ಭಕೋಶದ ಅಸಹಜ ರಕ್ತಸ್ರಾವ’ ಎಂದು ಕರೆಯಬಹುದು. ಮಹಿಳೆಯೊಬ್ಬರ ಸಹಜ ಋತುಸ್ರಾವ ಪ್ರಕ್ರಿಯೆಯಲ್ಲಿ ಕಂಡುಬರುವ ಯಾವುದೇ ರೀತಿಯ ಅಸಹಜ ಬದಲಾವಣೆ – ಅವಧಿ, ಬಾರಿ ಅಥವಾ ಪ್ರಮಾಣ- ಇವೆಲ್ಲವನ್ನೂ ಎಯುಬಿ ಎಂದು ಪರಿಗಣಿಸಲಾಗುತ್ತದೆ. ಋತುಚಕ್ರದ ಸಹಜ ಅವಧಿಯು ಸಾಮಾನ್ಯವಾಗಿ 24ರಿಂದ 38 ದಿನಗಳಾಗಿರುತ್ತವೆ. ಸಹಜ ಋತುಸ್ರಾವದ ಅವಧಿಯು ಸಾಮಾನ್ಯವಾಗಿ 8 ದಿನಗಳ ವರೆಗೆ ಇರುತ್ತದೆ. ಭಾರತದಲ್ಲಿ ಎಯುಬಿಯು ಸರಿಸುಮಾರು ಶೇ.17ರಷ್ಟು ಮಹಿಳೆಯರಲ್ಲಿ ಕಂಡುಬರುತ್ತದೆ. ಎಯುಬಿಯು ಯಾವುದೇ ವಯಸ್ಸಿನ ಮಹಿಳೆಯರಲ್ಲಿ ಕಂಡುಬರಬಹುದಾದರೂ ಅದು ಹದಿಹರಯದವರು ಮತ್ತು ಋತುಚಕ್ರಬಂಧಪೂರ್ವ ವಯಸ್ಸಿನವರಲ್ಲಿ ಹೆಚ್ಚು ಉಂಟಾಗುತ್ತದೆ.

ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?

ಸಹಜವಾಗಿ ಋತುಸ್ರಾವ ಹೊಂದುತ್ತಿದ್ದ ಯಾವುದೇ ಮಹಿಳೆ ತನ್ನ ಋತುಸ್ರಾವ ಪ್ರಕ್ರಿಯೆಯಲ್ಲಿ ಯಾವುದೇ ಬದಲಾವಣೆಯನ್ನು ಗಮನಿಸಿದರೆ – ಋತುಸ್ರಾವದ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ, 38ಕ್ಕಿಂತಲೂ ಹೆಚ್ಚು ದಿನ ಅಥವಾ 24ಕ್ಕಿಂತ ಕಡಿಮೆ ದಿನಗಳ ಋತುಸ್ರಾವ, 7ರಿಂದ 9 ದಿನಗಳಿಗಿಂತ ಹೆಚ್ಚು ದಿನಗಳ ಕಾಲ ಕಂಡುಬರುವ ಅನಿಯಮಿತ ಋತುಸ್ರಾವ, ಋತುಸ್ರಾವದ ದಿನಗಳ ನಡುವೆಯೂ ರಕ್ತಸ್ರಾವ ಮತ್ತು ಋತುಚಕ್ರಬಂಧದ ಬಳಿಕವೂ ರಕ್ತಸ್ರಾವ – ಇಂಥವುಗಳನ್ನು ಗಮನಿಸಿದರೆ ವೈದ್ಯರನ್ನು ಕಾಣಬೇಕು.

ವೈದ್ಯರನ್ನು ಯಾಕೆ ಕಾಣಬೇಕು?

ಯೋನಿಯ ಮೂಲಕ ಅಸಹಜ ರಕ್ತಸ್ರಾವ ಉಂಟಾಗುತ್ತಿರುವ ಸಂದರ್ಭದಲ್ಲಿ ವೈದ್ಯರನ್ನು ಸಂಪರ್ಕಿಸುವ ಉದ್ದೇಶವೆಂದರೆ ರಕ್ತಹೀನತೆಯನ್ನು ತಡೆಗಟ್ಟುವುದು, ರಕ್ತಸ್ರಾವಕ್ಕೆ ನಿರ್ದಿಷ್ಟ ಕಾರಣವನ್ನು ಪತ್ತೆಹಚ್ಚುವುದು ಮತ್ತು ಅನಾರೋಗ್ಯಕ್ಕೆ ನಿರ್ದಿಷ್ಟವಾದ ಚಿಕಿತ್ಸೆಯನ್ನು ಪಡೆದುಕೊಳ್ಳುವುದು. ಹದಿಹರಯದ ಬಾಲಕಿಯರಲ್ಲಿ ಎಯುಬಿ ಉಂಟಾದರೆ ಶಾಲೆಗೆ ಗೈರುಹಾಜರಿಗೆ ಕಾರಣವಾಗುತ್ತದೆ ಹಾಗೂ ಆಕೆಯ ಪೌಷ್ಟಿಕಾಂಶ ಸ್ಥಿತಿಗತಿ ಮತ್ತು ಬೆಳವಣಿಗೆಯನ್ನು ಬಾಧಿಸುತ್ತದೆ.

ಎಯುಬಿಯು ಚಿಕಿತ್ಸೆಗೊಳಪಡದೆ ಹಾಗೆಯೇ ಮುಂದುವರಿದಲ್ಲಿ ಶೀಘ್ರ ದಣಿವು, ಹಸಿವು ನಷ್ಟ ಹಾಗೂ ಯಾವುದೇ ಬಗೆಯ ಸೋಂಕುಗಳಿಗೆ ಸುಲಭವಾಗಿ ತುತ್ತಾಗುವ ಅಪಾಯವನ್ನು ತಂದೊಡ್ಡುತ್ತದೆ. ಮಹಿಳೆಯರ ವಯೋಮಾನವನ್ನು ಆಧರಿಸಿ ಎಯುಬಿಗೆ ಕಾರಣಗಳು ಬದಲಾಗಬಹುದಾಗಿವೆ; ಹದಿಹರಯದ ಬಾಲಕಿಯರಲ್ಲಿ ಹಾರ್ಮೋನ್‌ ವ್ಯತ್ಯಯ, ರಕ್ತ ಹೆಪ್ಪುಗಟ್ಟುವ ಸಮಸ್ಯೆ (ಹಿಮೊಸ್ಟಾಸಿಸ್‌) ಇದಕ್ಕೆ ಸಾಮಾನ್ಯ ಕಾರಣವಾಗಿದ್ದರೆ, ಸಂತಾನೋತ್ಪತ್ತಿ ನಡೆಸಬಲ್ಲ ವಯೋಮಾನದ ಮಹಿಳೆಯರಲ್ಲಿ ಗರ್ಭಪಾತ ಮತ್ತು ಫೈಬ್ರಾಯ್ಡ ಗಳಂತಹ ಕ್ಯಾನ್ಸರ್‌ ಅಲ್ಲದ ಗಡ್ಡೆಗಳು ಕಾರಣವಾಗಿರುತ್ತವೆ; ಋತುಚಕ್ರಬಂಧ ಹೊಂದುವ ಆಸುಪಾಸಿನ ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್‌ ಇದಕ್ಕೆ ಕಾರಣವಲ್ಲ ಎಂಬುದನ್ನು ಪತ್ತೆಹಚ್ಚುವುದು ಆದ್ಯತೆಯಾಗಿರುತ್ತದೆ.

ಎಯುಬಿ ರೋಗಿ ಮಹಿಳೆಯರು ವೈದ್ಯರನ್ನು ಸಂಪರ್ಕಿಸುವುದನ್ನು ಮುಂದೂಡುತ್ತಾರೆ ಏಕೆ? (ನಿಶ್ಶಬ್ದವಾಗಿ ನರಳುವುದೇಕೆ?)

ಎಯುಬಿ ಅಥವಾ ಇನ್ಯಾವುದೇ ಪ್ರಜನನ ಸಂಬಂಧಿ ಅನಾರೋಗ್ಯಗಳಿಗೆ ತುತ್ತಾಗಿರುವ ಮಹಿಳೆಯರು ಕ್ಲಪ್ತ ಕಾಲದಲ್ಲಿ ವೈದ್ಯರನ್ನು ಸಂಪರ್ಕಿಸದೆ ನಿಶ್ಶಬ್ದವಾಗಿ ನರಳುತ್ತಿರುತ್ತಾರೆ ಎನ್ನುವುದೇ ಬಹಳ ವಿಷಾದಕರ ವಿಷಯ. ಕಳಪೆ ಆರೋಗ್ಯ ಸ್ಥಿತಿ, ಅನಕ್ಷರತೆ, ಋತುಸ್ರಾವಕ್ಕೆ ಸಂಬಂಧಿಸಿದಂತೆ ಯಾವುದು ಅಸಹಜ ಎಂಬುದನ್ನು ತಿಳಿಯಲಾಗದೆ ಇರುವುದು ಮತ್ತು ಅತಿಯಾದ ರಕ್ತಸ್ರಾವವನ್ನೂ ಸಹಜ ಎಂದೇ ಭಾವಿಸುವುದು, ಇತರ ಅನಾರೋಗ್ಯಗಳಿಗೆ ಹೋಲಿಸಿದರೆ ಗರ್ಭಕೋಶದ ಸಮಸ್ಯೆಗಳು ಆದ್ಯತೆಯವಲ್ಲ ಎಂದು ಭಾವಿಸುವುದು, ಸಾಮಾಜಿಕ ಮುಜುಗರ, ಕೌಟುಂಬಿಕ ಹೊಣೆಗಾರಿಕೆಗಳು, ಕೆಲಸ, ಸಾಮಾಜಿಕ ನಿಬಂಧನೆಗಳು ಇತ್ಯಾದಿ ಹಲವು ಕಾರಣಗಳು ಎಯುಬಿಗೆ ತುತ್ತಾಗಿರುವ ಅನೇಕ ಮಹಿಳೆಯರು ಸರಿಯಾದ ಸಮಯಕ್ಕೆ ವೈದ್ಯರನ್ನು ಸಂಪರ್ಕಿಸದಂತೆ ತಡೆಯುತ್ತವೆ.

ಇದನ್ನು ತಡೆಯುವುದಕ್ಕಾಗಿ ಮಹಿಳೆಯರಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರೀಯ ಸೇವೆಗಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು, ಆರೋಗ್ಯ ಸೇವಾ ಸೌಲಭ್ಯಗಳನ್ನು ಪಡೆದುಕೊಳ್ಳುವುದನ್ನು ವಿಳಂಬಿಸಿದರೆ ಎದುರಾಗಬಹುದಾದ ಅಪಾಯಗಳ ಬಗ್ಗೆ ತಿಳಿಹೇಳಬೇಕು ಮತ್ತು ಈ ಸಂಬಂಧಿಯಾದ ಸೂಕ್ತ ಮಾಹಿತಿಗಳನ್ನು ಅವರಿಗೆ ಅವರ ಭಾಷೆಯಲ್ಲಿಯೇ ಒದಗುವಂತೆ ಮಾಡಬೇಕಿದೆ.

ಎಯುಬಿಗೆ ಕಾರಣಗಳೇನು?

ಎಯುಬಿಗೆ ಕಾರಣಗಳನ್ನು “PALM-COEINʼ ಎಂಬ ಸಂಕೇತ ಸೂತ್ರದ ಅಡಿಯಲ್ಲಿ ಪಟ್ಟಿ ಮಾಡಬಹುದಾಗಿದೆ. ­

ಪಾಲಿಪ್‌ (ಎಯುಬಿ-ಪಿ): ಗರ್ಭಕೋಶದ ಕುಹರದಲ್ಲಿ, ಎಂಡೋಮೆಟ್ರಿಯಂ (ಗರ್ಭಕೋಶದ ಒಳಪದರ)ನಲ್ಲಿ ಉಂಟಾಗುವ ಬೆಳವಣಿಗೆಗಳು.

­ಅಡೆನೋಮಯೋಸಿಸ್‌ (ಎಯುಬಿ-ಎ): ಗರ್ಭಕೋಶದ ಒಳಪದರವು (ಎಂಡೋಮೆಟ್ರಿಯಂ) ಗರ್ಭಕೋಶದ ಸ್ನಾಯುಪದರ (ಮಯೋಮೆಟ್ರಿಯಂ) ದೊಳಕ್ಕೆ ಬೆಳವಣಿಗೆ ಹೊಂದುವುದು. ­

ಲಯೋಮಯೋಮಾ (ಎಯುಬಿ-ಎಲ್‌): ಗರ್ಭಕೋಶದ ಸ್ನಾಯು ಪದರದಲ್ಲಿ ಕ್ಯಾನ್ಸರ್‌ ಅಲ್ಲದ ಫೈಬ್ರೊಮಸ್ಕುಲರ್‌ ಗಡ್ಡೆಗಳು.

­ಮ್ಯಾಲಿಗ್ನಾನ್ಸಿ ಆ್ಯಂಡ್‌ ಹೈಪರ್‌ಪ್ಲಾಸಿಯಾ (ಎಯುಬಿ-ಎಂ): ಕ್ಯಾನ್ಸರ್‌ ಮತ್ತು ಕ್ಯಾನ್ಸರ್‌ಪೂರ್ವ ಬೆಳವಣಿಗೆಗಳು. ­

ಕೊಆಗ್ಯುಲೋಪತಿ (ಎಯುಬಿ-ಸಿ): ಹಿಮೊಸ್ಟಾಸಿಸ್‌ (ರಕ್ತಸ್ರಾವವನ್ನು ನಿಲ್ಲಿಸುವ ವ್ಯವಸ್ಥೆ) ನ ಅನಾರೋಗ್ಯಗಳು. ­

ಅಂಡೋತ್ಪತ್ತಿ ಚಟುವಟಿಕೆ ಸ್ಥಗಿತ: ಅಂಡೋತ್ಪತ್ತಿಗೆ ಸಂಬಂಧಿಸಿದ ಅನಾರೋಗ್ಯಗಳು ಅಮೆನೊರಿಯಾ (ಋತುಸ್ರಾವ ಆಗದೆ ಇರುವುದು), ರಕ್ತಸ್ರಾವದಲ್ಲಿ ಏರುಪೇರು, ಊಹಿಸಲು ಸಾಧ್ಯವಾಗದಷ್ಟು ತೀವ್ರವಾದ ಋತುಸ್ರಾವದಂತಹ ವೈವಿಧ್ಯವಾದ ಲಕ್ಷಣಗಳಿಗೆ ಕಾರಣವಾಗಬಹುದು. ಅಂಡೋತ್ಪತ್ತಿಗೆ ಸಂಬಂಧಿಸಿದ ಅನಾರೋಗ್ಯಗಳು ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌, ಹೈಪರ್‌ಥೈರಾಯ್ಡಿಸಂ, ಹೈಪರ್‌ ಪ್ರೊಲ್ಯಾಕ್ಟಿನೀಮಿಯಾ, ಮಾನಸಿಕ ಒತ್ತಡ, ಬೊಜ್ಜು, ಅನೊರೆಕ್ಸಿಯಾ, ತೂಕ ನಷ್ಟ ಮತ್ತು ಅತಿಯಾದ ವ್ಯಾಯಾಮಗಳ ಜತೆಗೆ ಸಂಬಂಧ ಹೊಂದಿರಬಹುದಾಗಿದೆ.

­ಎಂಡೊಮೆಟ್ರಿಯಲ್‌ (ಎಯುಬಿ-ಇ): ಅಂಡೋತ್ಪತ್ತಿ ಕಾರ್ಯಚಟುವಟಿಕೆ ಸಹಜವಾಗಿದ್ದು, ಇತರ ಯಾವುದೇ ಕೊಆಗ್ಯುಲೊಪತಿ ಇಲ್ಲದೆ ಎಂಡೊಮೆಟ್ರಿಯಂನ ಅಸಹಜತೆಗಳಿಂದಾಗಿ ಗರ್ಭಕೋಶದಿಂದ ರಕ್ತಸ್ರಾವ.

­ಅಯೊಟ್ರೊಜೆನಿಕ್‌ (ಎಯುಬಿ-ಐ): ಎಕೊÕಜೆನಸ್‌ ಗೊನೇಡಲ್‌ ಸ್ಟಿರಾಯ್ಡ ಗಳು, ಗರ್ಭಕೋಶಕ್ಕೆ ತೂರಿಸುವ ಸಾಧನಗಳು ಅಥವಾ ಅಯೊಟ್ರೊಜೆನಿಕ್‌ ಎಂಬುದಾಗಿ ವರ್ಗೀಕರಿಸಲಾಗಿರುವ ದೇಹವ್ಯವಸ್ಥೆಗೆ ಸಂಬಂಧಿಸಿದ ಅಥವಾ ದೇಹದ ಹೊರ ಗಿನಿಂದ ಬಳಸುವ ದ್ರವ್ಯಗಳ ಬಳಕೆಯಿಂದ ಅಸಹಜ ರಕ್ತಸ್ರಾವ (ಎಯುಬಿ -ಐ). ­

ಇನ್ನೂ ನಿರ್ದಿಷ್ಟವಾಗಿ ವರ್ಗೀಕರಿಸಲಾಗದ (ಎಯುಬಿ-ಎನ್‌): ವ್ಯಾಖ್ಯಾನಿಸಲಾಗದ ಅಥವಾ ಅಪರೂಪಕ್ಕೆ ಎದುರಾಗಬಹುದಾದ ತೊಂದರೆಗಳನ್ನು ಸೇರಿಸಿಕೊಳ್ಳುವುದಕ್ಕಾಗಿ “ಇನ್ನೂ ನಿರ್ದಿಷ್ಟವಾಗಿ ವರ್ಗೀಕರಿಸಲಾಗದ’ ಎಂಬ ವರ್ಗವನ್ನು ಸೃಷ್ಟಿಸಲಾಗಿದೆ.

ರೋಗಪತ್ತೆ ಹೇಗೆ?

ನಿಮ್ಮ ಗೈನಕಾಲಜಿಸ್ಟ್‌ ನಿಮ್ಮ ಆರೋಗ್ಯ ಮತ್ತು ಋತುಚಕ್ರದ ಬಗ್ಗೆ ವಿವರವಾಗಿ ಮಾಹಿತಿಯನ್ನು ಕಲೆಹಾಕುತ್ತಾರೆ. ವೈದ್ಯರನ್ನು ಭೇಟಿಯಾಗುವುದಕ್ಕೆ ಮುನ್ನ ಋತುಚಕ್ರದ ದಿನಾಂಕಗಳು, ಸ್ರಾವ ಇತ್ಯಾದಿ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು ಪ್ರಯೋಜನಕಾರಿ. ದಿನಾಂಕಗಳು, ಅವಧಿ, ಸ್ರಾವ ಎಷ್ಟು ಪ್ರಮಾಣದಲ್ಲಿದೆ ಇತ್ಯಾದಿ ವಿವರಗಳನ್ನು ಬರೆದಿಟ್ಟುಕೊಂಡರೆ ಉತ್ತಮ. ವೈದ್ಯರು ನಿಮ್ಮ ದೈಹಿಕ ಪರೀಕ್ಷೆ, ಕೆಲವು ರಕ್ತ ಪರೀಕ್ಷೆಗಳು ಮತ್ತು ಅಗತ್ಯಬಿದ್ದರೆ ಅಲ್ಟ್ರಾಸೊನೋಗ್ರಫಿ (ಸ್ಕ್ಯಾನ್‌) ಮಾಡಬಹುದು. ನಡೆಸಬಹುದಾದ ಕೆಲವು ವಿಶೇಷ ಪರೀಕ್ಷೆಗಳು ಎಂದರೆ: ­

ಹಿಸ್ಟರೆಸ್ಕೊಪಿ: ಸಪೂರವಾದ, ಹಗುರವಾದ ಸ್ಕೋಪ್‌ ಒಂದನ್ನು ಯೋನಿಯ ಮೂಲಕ ಗರ್ಭಕೋಶದ ದ್ವಾರದ ತನಕ ಕಳುಹಿಸಿ ಎಂಡೊಮೆಟ್ರಿಯಲ್‌ ಕುಹರವನ್ನು ವೀಕ್ಷಿಸಲಾಗುತ್ತದೆ; ಅಗತ್ಯ ಬಿದ್ದರೆ ಬಯಾಪ್ಸಿ ನಡೆಸಲಾಗುತ್ತದೆ. ­

ಎಂಡೊಮೆಟ್ರಿಯಲ್‌ ಬಯಾಪ್ಸಿ: ಎಂಡೊಮೆಟ್ರಿಯಂನ ಸಣ್ಣ ತುಣುಕನ್ನು ತೆಗೆದು ಸೂಕ್ಷ್ಮದರ್ಶಕದ ಮೂಲಕ ವೀಕ್ಷಿಸಿ ಕ್ಯಾನ್ಸರ್‌ ಅಥವಾ ಕ್ಯಾನ್ಸರ್‌ ಪೂರ್ವ ಬೆಳವಣಿಗೆ ಇದೆಯೇ ಎಂದು ಪರೀಕ್ಷಿಸಲಾಗುತ್ತದೆ.

­ಸಿಟಿ ಮತ್ತು ಎಂಆರ್‌ಐ: ರೋಗಪತ್ತೆಗೆ ಸಂಬಂಧಿಸಿ ಸಂದೇಹ ಉಂಟಾದ ಸಂದರ್ಭದಲ್ಲಿ ಮತ್ತು ಕ್ಯಾನ್ಸರ್‌ ಎಷ್ಟು ಪ್ರಮಾಣದಲ್ಲಿ ವ್ಯಾಪಿಸಿದೆ ಎಂಬುದನ್ನು ತಿಳಿದುಕೊಳ್ಳಬೇಕಾದಂತಹ ಅಪರೂಪದ ಸಂದರ್ಭಗಳಲ್ಲಿ ಸಿಟಿ ಮತ್ತು ಎಂಆರ್‌ಐ ನಡೆಸಲಾಗುತ್ತದೆ.

ಎಯುಬಿ ನಿರ್ವಹಣೆ ಹೇಗೆ?

ಎಯುಬಿಗೆ ಚಿಕಿತ್ಸೆ ಒದಗಿಸುವುದರ ಉದ್ದೇಶ:

1. ಪ್ರಸ್ತುತ ಉಂಟಾಗುತ್ತಿರುವ ಭಾರೀ ರಕ್ತಸ್ರಾವವನ್ನು ನಿಯಂತ್ರಿಸುವುದು ಮತ್ತು ರಕ್ತ ನಷ್ಟವನ್ನು ಸರಿಪಡಿಸುವುದು.

2.ರೋಗಸ್ಥಿತಿಯನ್ನು ಗುಣಪಡಿಸಿ ಪುನರಾವರ್ತನೆ ಆಗದಂತೆ ತಡೆಯುವುದು.

ಬಹುತೇಕ ಪ್ರಕರಣಗಳಲ್ಲಿ ಔಷಧೋಪಚಾರ ಚಿಕಿತ್ಸೆಯನ್ನು ಆದ್ಯತೆಯ ಚಿಕಿತ್ಸಾ ವಿಧಾನವಾಗಿ ಪರಿಗಣಿಸಲಾಗುತ್ತದೆ. ಹಾರ್ಮೋನ್‌ ಅಲ್ಲದ ಔಷಧಗಳು, ಹಾರ್ಮೋನ್‌ ಔಷಧಗಳು ಇದರಲ್ಲಿ ಸೇರಿದ್ದು, ಮಾತ್ರೆಗಳು, ಇಂಜೆಕ್ಷನ್‌ಗಳು ಮತ್ತು ಗರ್ಭಕೋಶದ ಕುಹರದಲ್ಲಿ ತೂರಿಸಲಾದ ಸಲಕರಣೆಯ ಮೂಲಕ ಒದಗಿಸುವ ಔಷಧಗಳ ಮೂಲಕ ಆವರ್ತನೀಯವಾಗಿ ಇದನ್ನು ನೀಡಲಾಗುತ್ತದೆ.

ಔಷಧೋಪಚಾರಕ್ಕೆ ರೋಗಿ ಪ್ರತಿಸ್ಪಂದಿಸದೆ ಇದ್ದಲ್ಲಿ ಗರ್ಭಕೋಶದ ಒಳಪದರವನ್ನು ನಾಶಪಡಿಸಲು ಅಥವಾ ಫೈಬ್ರಾಯ್ಡನ ಗಾತ್ರವನ್ನು ಕುಗ್ಗಿಸುವುದಕ್ಕಾಗಿ ಥರ್ಮಲ್‌ ಎನರ್ಜಿ, ಅಲ್ಟ್ರಾಸೌಂಡ್‌ ಅಥವಾ ಅಯಸ್ಕಾಂತೀಯ ತರಂಗಗಳನ್ನು ಹಾಯಿಸುವಂತಹ ಅತ್ಯಂತ ಕಡಿಮೆ ಗಾಯವನ್ನು ಉಂಟುಮಾಡುವ ಶಸ್ತ್ರಚಿಕಿತ್ಸಾತ್ಮಕ ವಿಧಾನಗಳನ್ನು ಅನುಸರಿಸಲಾಗುತ್ತದೆ. ಆದರೆ ಈ ಚಿಕಿತ್ಸೆಗಳಿಗೆ ವಿಶೇಷ ಉಪಕರಣಗಳು ಅಗತ್ಯವಾಗಿದ್ದು, ವೆಚ್ಚವೂ ಅಧಿಕವಾಗಿರುವುದರಿಂದ ಸಾಮಾನ್ಯವಾಗಿ ಇವುಗಳನ್ನು ಉಪಯೋಗಿಸುವುದು ಕಡಿಮೆ.

ಎಯುಬಿಗೆ ಇತರೆಲ್ಲ ಚಿಕಿತ್ಸಾ ವಿಧಾನಗಳು ವಿಫ‌ಲವಾದ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆಯು ಅಂತಿಮವಾದ ನಿರ್ದಿಷ್ಟ ಚಿಕಿತ್ಸಾ ವಿಧಾನವಾಗಿರುತ್ತದೆ. ಆದರೆ ಜನನಾಂಗದ ಕ್ಯಾನ್ಸರ್‌ನಂತಹ ಕ್ಯಾನ್ಸರ್‌ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯೇ ಪ್ರಥಮ ಆದ್ಯತೆಯ ಚಿಕಿತ್ಸಾ ವಿಧಾನವಾಗಿರುತ್ತದೆ. ಶಸ್ತ್ರಚಿಕಿತ್ಸಾತ್ಮಕ ಚಿಕಿತ್ಸಾ ವಿಧಾನಗಳನ್ನು ಉಪಯೋಗಿಸುವ ವೇಳೆ ರೋಗಿಯ ವಯಸ್ಸು, ಸಂತಾನೋತ್ಪತ್ತಿ ಸ್ಥಿತಿಗತಿ ಮತ್ತು ಋತುಚಕ್ರ ಚಟುವಟಿಕೆಯನ್ನು ಉಳಿಸಿಕೊಳ್ಳುವ ಇಚ್ಛೆಯಂತಹ ಅಂಶಗಳನ್ನು ಪರಿಗಣಿಸಲಾಗುತ್ತದೆ. ಶಸ್ತ್ರಚಿಕಿತ್ಸಾತ್ಮಕ ವಿಧಾನಗಳಲ್ಲಿ ಫೈಬ್ರಾಯ್ಡನಂತಹ ಗಡ್ಡೆಗಳನ್ನು ಮಾತ್ರ ತೆಗೆದುಹಾಕುವುದು (ಮಯೊಮೆಕ್ಟೊಮಿ) ಅಥವಾ ಗರ್ಭನಾಳಗಳು ಮತ್ತು ಅಂಡಾಶಯಗಳ ಸಹಿತ ಅಥವಾ ರಹಿತವಾಗಿ ಗರ್ಭಕೋಶವನ್ನು ತೆಗೆಯುವುದು (ಹಿಸ್ಟರೆಕ್ಟೊಮಿ) ಸೇರಿವೆ.

ಶಸ್ತ್ರಚಿಕಿತ್ಸೆಯನ್ನು ಹೇಗೆ ನಡೆಸಲಾಗುತ್ತದೆ ಎಂಬುದನ್ನು ಆಧರಿಸಿ ಅದು ಕಡಿಮೆ ಗಾಯವನ್ನು ಉಂಟು ಮಾಡುವ ಹಿಸ್ಟರೊಸ್ಕೋಪ್‌/ ಲ್ಯಾಪರೊಸ್ಕೊಪ್‌ ಅಥವಾ ಯೋನಿ ಮಾರ್ಗದ ಮೂಲಕವಾಗಿರಬಹುದು ಅಥವಾ ಹೊಟ್ಟೆಯ ಭಾಗವನ್ನು ತೆರೆದು ಮಾಡುವ ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಯಾಗಿರಬಹುದಾಗಿದೆ.

ಎಯುಬಿಯು ಮಹಿಳೆಯೊಬ್ಬಳು ತನ್ನ ಜೀವಿತಾವಧಿಯ ಯಾವುದೇ ವಯಸ್ಸಿನಲ್ಲಿ ಎದುರಿಸಬಹುದಾದ ಸಾಮಾನ್ಯ ಸ್ತ್ರೀರೋಗಶಾಸ್ತ್ರ ಸಂಬಂಧಿ ಆರೋಗ್ಯ ಸಮಸ್ಯೆಯಾಗಿದೆ. ಯಾವುದೇ ರೀತಿಯ ಮುಜುಗರ ಅಥವಾ ಹಿಂಜರಿಕೆಗೆ ಒಳಗಾಗದೆ ಕ್ಲಪ್ತ ಕಾಲದಲ್ಲಿ ವೈದ್ಯಕೀಯ ಸಹಾಯವನ್ನು ಪಡೆಯುವುದರಿಂದ ಈ ಸಮಸ್ಯೆಯನ್ನು ಬೇಗನೆ ಪತ್ತೆಹಚ್ಚಲು ಮತ್ತು ಸಮರ್ಪಕ ಚಿಕಿತ್ಸೆಗೆ ಒಳಗಾಗುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದ ದೀರ್ಘ‌ಕಾಲೀನ ಸಂಕೀರ್ಣ ಸಮಸ್ಯೆಗಳನ್ನು ಹಾಗೂ ಮಾನಸಿಕ ಮತ್ತು ದೈಹಿಕ ಬವಣೆಯನ್ನು ತಡೆಯಬಹುದಾಗಿದೆ.

-ಡಾ| ವಿನುತಾ,

ಅಸೋಸಿಯೇಟ್‌ ಪ್ರೊಫೆಸರ್‌

ಒಬಿಜಿ ವಿಭಾಗ,

ಡಾ| ಟಿಎಂಎ ಪೈ ಆಸ್ಪತ್ರೆ, ಉಡುಪಿ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.

Next