Advertisement

WhatsAppನಲ್ಲಿನ್ನು “ಸಂದೇಶ ತಿದ್ದುವ” ಅವಕಾಶ

01:49 PM May 23, 2023 | Pranav MS |

ನವದೆಹಲಿ: ವಾಟ್ಸ್‌ಆ್ಯಪ್‌ನಲ್ಲಿ ನೀವು ಸಂದೇಶವನ್ನು ಕಳುಹಿಸಿದ ಬಳಿಕ ಅದರಲ್ಲಿ ಏನಾದರೂ ತಿದ್ದುಪಡಿ ಮಾಡಬೇಕು ಎಂದುಕೊಂಡಲ್ಲಿ, ಮೆಸೇಜ್‌ ಡೆಲಿವರಿ ಆದ 15 ನಿಮಿಷಗಳ ಕಾಲ ಅಂಥ ತಿದ್ದುಪಡಿ ಮಾಡಲು ಇನ್ನು ಮುಂದೆ ಅವಕಾಶವಿರುತ್ತದೆ!

Advertisement

ಹೌದು, ಇಂಥದ್ದೊಂದು ಹೊಸ ಫೀಚರ್‌ ಅನ್ನು ವಾಟ್ಸ್‌ಆ್ಯಪ್‌ ಪರಿಚಯಿಸಿದೆ. ಕಳೆದ ವಾರವಷ್ಟೇ ಈ ಫೀಚರ್‌ ಅನ್ನು ಸಂಸ್ಥೆಯು ಆ್ಯಂಡ್ರಾಯ್ಡ ಮತ್ತು ಐಒಎಸ್‌ ಆ್ಯಪ್‌ನ ಬೇಟಾ ಆವೃತ್ತಿಯಲ್ಲಿ ಪರೀಕ್ಷೆ ನಡೆಸಿತ್ತು. ಈಗ ಜಗತ್ತಿನಾದ್ಯಂತ ಬಳಕೆದಾರರಿಗೆ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಈವರೆಗೆ ವಾಟ್ಸ್‌ಆ್ಯಪ್‌ನಲ್ಲಿ ನೀವು ಕಳುಹಿಸಿದ ಸಂದೇಶವನ್ನು ಡಿಲೀಟ್‌ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಮುಂದೆ, ಒಮ್ಮೆ ಕಳುಹಿಸಿದ ಸಂದೇಶವನ್ನು ತಿದ್ದುಪಡಿ ಮಾಡುವ ಅವಕಾಶ ಕಲ್ಪಿಸಿದೆ. ಇದರಿಂದಾಗಿ, ಇಡೀ ಸಂದೇಶವನ್ನು ಮತ್ತೆ ಟೈಪ್‌ ಮಾಡುವ ಸಮಯ ಉಳಿತಾಯವಾಗಲಿದೆ.

ಸಂದೇಶ ರವಾನೆಯಾದ 15 ನಿಮಿಷಗಳ ಕಾಲ ಮಾತ್ರ ಎಡಿಟ್‌ ಮಾಡಲು ಅವಕಾಶವಿರುತ್ತದೆ. ಸಂದೇಶ ತಿದ್ದುಪಡಿ ಮಾಡಬೇಕೆಂದರೆ, ನೀವು ಆ ಸಂದೇಶದ ಮೇಲೆ “ಲಾಂಗ್‌ ಪ್ರಸ್‌’ ಮಾಡಿ, ಒತ್ತಿ ಹಿಡಿಯಬೇಕು. ನಂತರ, ಮೆನುವಿಗೆ ಹೋಗಿ, “ಎಡಿಟ್‌’ ಆಯ್ಕೆಯನ್ನು ಕ್ಲಿಕ್‌ ಮಾಡಿ, ಸಂದೇಶದಲ್ಲಿ ಬದಲಾವಣೆ ಮಾಡಬಹುದು.
ಎಡಿಟ್‌ ಮಾಡಲಾದ ಸಂದೇಶದಲ್ಲಿ “ಎಡಿಟೆಡ್‌'(ತಿದ್ದುಪಡಿ ಮಾಡಲಾಗಿದೆ) ಎಂಬ ಟ್ಯಾಗ್‌ ಕಾಣಸಿಗುತ್ತದೆ. ಅಂದರೆ, ಸಂದೇಶ ಸ್ವೀಕರಿಸುವವನಿಗೆ ಈ ಸಂದೇಶ ತಿದ್ದುಪಡಿಯಾಗಿದ್ದು ಎಂಬುದು ಗೊತ್ತಾಗುತ್ತದೆ. ಆದರೆ, ತಿದ್ದುಪಡಿಗೂ ಮುಂಚೆ ಏನಿತ್ತು ಎಂಬುದು ಗೊತ್ತಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next