Advertisement

ಮಹಿಳೆಯರಲ್ಲಿದೆ ಉದ್ಯಮಿಯಾಗುವ ಸಾಮರ್ಥ್ಯ

05:57 PM Feb 15, 2021 | Team Udayavani |

ಬೀದರ: ಜವಾಬ್ದಾರಿಗೆ ಅನುಗುಣವಾಗಿ ಕುಟುಂಬದಲ್ಲಿ ಹಲವು ವಿಧದ ಪಾತ್ರ ಯಶಸ್ವಿಯಾಗಿ ನಿರ್ವಹಿಸುವ ಮಹಿಳೆ ಕುಟುಂಬದ ಏಳ್ಗೆಗೆ ಆಧಾರವಾಗಿದ್ದಾಳೆ. ಮನೆ ನಿರ್ವಹಿಸುವ ಗೃಹಿಣಿಯಾಗಿಯೂ ಕುಟುಂಬಕ್ಕೆ ಆರ್ಥಿಕ ಬಲ ನೀಡುವ ಉದ್ಯಮಿಯಾಗಿಯೂ ಸೇವೆ ಸಲ್ಲಿಸುವ ಅಸಾಧರಣ ಸಾಮರ್ಥ್ಯ ಮಹಿಳೆ ಹೊಂದಿದ್ದಾಳೆ ಎಂದು ಕೌಶಲ್ಯ ಕರ್ನಾಟಕ ಅಧಿಕಾರಿ ಶಿವಲೀಲಾ ಬಂಡೆ ಹೇಳಿದರು. ನೂಪುರ ನೃತ್ಯ ಅಕಾಡೆಮಿಯಿಂದ ನಗರದಲ್ಲಿ ನಡೆದ ಕರಕುಶಲ ಮೇಳ ಮತ್ತು ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಮನೆಯಲ್ಲಿಯೇ ವಿವಿಧ ಬಗೆಯ ಕರಕುಶಲ ವಸ್ತುಗಳ ತಯಾರಿಯನ್ನು ಹವ್ಯಾಸವಾಗಿ ಹೊಂದಿರುವ ಅನೇಕ ಗೃಹಿಣಿಯರು ಅತ್ಯುತ್ತಮ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಆದರೆ ಮಾರುಕಟ್ಟೆಗೆ ಬಂದು ವ್ಯವಹಾರ ಮಾಡುವಲ್ಲಿ ಸಮಸ್ಯೆ ಹೊಂದಿದ್ದಾರೆ. ಮುಖ್ಯವಾಗಿ ಕೌಟುಂಬಿಕ ಸಹಾಯ ಮತ್ತು ಉಪೇಕ್ಷೆಗಳಿಂದ ಹಿಂದುಳಿದಿರುವುದು ಕಂಡುಬರುತ್ತದೆ ಎಂದರು.

ಕುಟುಂಬ ಮತ್ತು ವ್ಯವಹಾರ ಎರಡನ್ನೂ ನಿಭಾಯಿಸುವ ಅಸಾಧಾರಣ ಸಾಮರ್ಥ್ಯ ಗುರುತಿಸದೇ ಹೆಣ್ಣು ಎಂದಾಕ್ಷಣ ಅಸಡ್ಡೆ ತೋರುವ ಸಾಮಾಜಿಕ ಚಿಂತನೆ, ವಿಚಾರಧಾರೆ ನಾವಿಂದು ಬದಲಿಸಬೇಕು. ಮಹಿಳೆಯರೆಲ್ಲರೂ ತಮ್ಮ ಮನೆಗಳಿಂದಲೇ ಹೊಸ ಚಿಂತನೆ ಬಿತ್ತುವ ಕಾರ್ಯ ಆರಂಭಿಸಬೇಕು. ಬೀದರಿನಲ್ಲಿ ಇಂದು ದ್ಯೋಗವಕಾಶಗಳು ಹೆಚ್ಚಾಗುತ್ತಿವೆ. ಸಣ್ಣ ಕೈಗಾರಿಕೆಗಳಿಗೆ ಗೃಹೋದ್ಯಮಗಳಿಗೆ ಅತ್ಯುತ್ತಮ ಬೇಡಿಕೆಯಿದ್ದು ಸರ್ಕಾರದ ಸಹಾಯ ಸೌಲಭ್ಯ, ನೆರವು ಬಳಸಿಕೊಳ್ಳಬೇಕು ಎಂದರು.

ಹಿರಿಯ ಜೀವಿ ಜಗದೇವಿ ಪೊಲೀಸ್‌ ಪಾಟೀಲ ಚಾಲನೆ ನೀಡಿ ಮಾತನಾಡಿ, ಮಹಿಳೆ ಎಂದೂ ಅಬಲೆಯಲ್ಲ. ಅವಳೂ ಔದ್ಯೋಗಿಕ ರಂಗದಲ್ಲೂ ಮಿಂಚಬಹುದು. ಅದಕ್ಕಾಗಿ ದೃಢ ಮನಸ್ಸು ಮಾಡಬೇಕು ಎಂದರು. ದಂತ ವೈದ್ಯೆ ಡಾ| ಶ್ವೇತಾ ಮೇಗೂರು ಮಾತನಾಡಿ, ಮಹಿಳೆಯರು ಪ್ರಭಾವ ಶಾಲಿಯಾಗಿ ಬೆಳೆಯಲು ಸಾಧ್ಯವಿದೆ. ಪ್ರತಿಭಾನ್ವಿತ ಮಹಿಳೆ ಸಮಾಜಕ್ಕೆ ಅಂಜಬೇಕಿಲ್ಲ. ತಮ್ಮ ನಡೆ-ನುಡಿಯಿಂದ ಸಂಸ್ಕಾ ರಯುತವಾಗಿ ಬದುಕುವುದರಿಂದ ಗೌರವಾನ್ವಿತ ವ್ಯಕ್ತಿಗಳಾಗಿ
ಬದುಕಬಹುದು ಎಂದರು.

ಸಾಧಕ ಮಹಿಳೆ ಸಿರಿಗನ್ನಡ ವೇದಿಕೆ ಅಧ್ಯಕ್ಷೆ ರೂಪಾ ಪಾಟೀಲ ಮಾತನಾಡಿ, ನೃತ್ಯ, ಸಂಗೀತ ಕಲೆಗಳು ಸಾಮರ್ಥ್ಯ ವೃದ್ಧಿಗೆ ಸಹಕಾರಿ ಎಂದರು. ಅಕಾಡೆಮಿಯ ಉಷಾ ಪ್ರಭಾಕರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಿಳೆಯರಲ್ಲಿನ ಪ್ರತಿಭೆ ಪ್ರದರ್ಶಿಸಲು ಅವಕಾಶಗಳು ಒದಗಿ ಬರಬೇಕು. ಅದಕ್ಕಾಗಿ ನೃತ್ಯ ವಿದ್ಯಾರ್ಥಿಗಳ ಪಾಲಕರಿಗಾಗಿ ಕರಕುಶಲ ಮೇಳ ಆಯೋಜಿಸಿ ಅವರ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಒದಗಿಸುವ ಸಣ್ಣ ಪ್ರಯತ್ನ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ತಿಂಗಳಿಗೊಮ್ಮೆಯಾದರೂ ಇಂತಹ ಮೇಳಗಳನ್ನು ಆಯೋಜಿಸಿ ವಸ್ತುಗಳ ಪ್ರದರ್ಶನ-ಮಾರಾಟಕ್ಕೆ ಅನುವು ಮಾಡಿಕೊಡಲಾಗುವುದು ಎಂದರು.

Advertisement

ಆಹಾರ ವಸ್ತುಗಳ ಪ್ರದರ್ಶನ ಮಾರಾಟದಲ್ಲಿ ಸಂಧ್ಯಾ ಸಹಿನಾಳೆ ಪ್ರಥಮ, ರಾಜೇಶ್ವರಿ ವಾಸಿ ದ್ವಿತೀಯ ಹಾಗೂ ಕರಕುಶಲ ವಿಭಾಗದಲ್ಲಿ ರೋಹಿಣಿ ಸಂತೋಷ, ಪವಿತ್ರಾ ಪವನಕುಮಾರ ಪ್ರಶಸ್ತಿ ಪಡೆದರು. ಈ ವೇಳೆ ರಘುರಾಮ ಉಪಾಧ್ಯಾಯ, ಉಮೇಶ ನಾಯಕ, ಸತೀಶ ಕೋಟ್ಯಾನ, ಅನಿತಾ ಶೆಟ್ಟಿ ಇತರರು ಇದ್ದರು. ಸುಬ್ರಹ್ಮಣ್ಯ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಪ್ರಥಮ ಪ್ರಭು ಸಂಚಾಲನೆ ಮಾಡಿದರು. ಪ್ರಭಾಕರ ಎ.ಎಸ್‌ ಸ್ವಾಗತಿಸಿದರು. ಮಂಗಳಾ ಭಾಗವತ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next