ಮುಂಬಯಿ: ಮಲ್ಟಿ ಸ್ಟೇಟ್ ಶೆಡ್ನೂಲ್ಡ್ ಬ್ಯಾಂಕ್‌ಗಳಲ್ಲಿ ಪ್ರತಿಷ್ಠಿತ ಬ್ಯಾಂಕ್‌ಗಳಲೊಂದಾಗಿರುವ ಅಭ್ಯುದಯ ಕೋ. ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ 54 ನೇ ಸಂಸ್ಥಾಪನಾ ದಿನಾಚರಣೆಯು ಜೂ. 25 ರಂದು ವಾಶಿಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಥಾಣೆ ಜಿಲ್ಲಾ ಮಾಜಿ ಉಸ್ತುವಾರಿ ಸಚಿವ ಗಣೇಶ್ ನಾೖಕ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಪ್ರಸ್ತುತ ಆರ್ಥಿಕ ಕ್ಷೇತ್ರದಲ್ಲಿ ಅಭ್ಯುದಯ ಬ್ಯಾಂಕ್ ವಿಶೇಷವಾದ ಸಾಧನೆಗಳನ್ನು ಮಾಡುತ್ತಿದ್ದು, ಗ್ರಾಹಕ ಸ್ನೇಹಿ ಬ್ಯಾಂಕ್ ಆಗಿ ಪರಿವರ್ತನೆಗೊಂಡಿರುವುದು ಅಭಿನಂದನೀಯ. ಗ್ರಾಹಕರ ಅಭಿರುಚಿಗೆ ತಕ್ಕಂತೆ ಕಳೆದ 54 ವರ್ಷಗಳಿಂದ ಬ್ಯಾಂಕ್ ವ್ಯವಹರಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯವಾಗಿದೆ. ಬ್ಯಾಂಕ್ ಇನ್ನಷ್ಟು ಸಾಧನೆಗಳನ್ನು ಮಾಡಿ ದೇಶ-ವಿದೇಶಗಳಲ್ಲೂ ಹೆಸರು ಮಾಡುವಂತಾಗಲಿ ಎಂದು ನುಡಿದು ಶುಭಹಾರೈಸಿದರು.
ಬ್ಯಾಂಕಿನ ಚೀಫ್ ಜನರಲ್ ಮ್ಯಾನೇಜರ್ ರಾಜೀವ ಗಂಗಾಲ್ ಅವರು, ಅಭ್ಯುದಯ ಬ್ಯಾಂಕಿನ ವಿವಿಧ ಸೇವೆಗಳನ್ನು ವಿವರಿಸಿದರು. ಅಲ್ಲದೆ ಪ್ಲಾಟಿನಂ ರೂಪೇ ಕಾರ್ಡ್, ಯುನಿಫೀಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಪಿಒಎಸ್ ಮೆಷಿನ್ ಸೌಲಭ್ಯ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಿ, ಬ್ಯಾಂಕ್ ಗ್ರಾಹಕರೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸುತ್ತಿದೆ ಎಂಬುವುದನ್ನು ತಿಳಿಸಿದರು.
ಬ್ಯಾಂಕಿನ ಆಡಳಿತ ನಿರ್ದೇಶಕ ಪ್ರೇಮನಾಥ್ ಎಸ್. ಸಾಲ್ಯಾನ್ ಅವರು ಮಾತನಾಡಿ, ಅಭ್ಯುದಯ ಬ್ಯಾಂಕ್ ಸಾಧಿಸಿದ ಮೈಲುಗಲ್ಲನ್ನು ವಿವರಿಸಿದರು. ಬ್ಯಾಂಕ್ ಕಳೆದ 54 ವರ್ಷಗಳಿಂದ ಆರ್ಥಿಕ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿದೆ. ದೇಶದ ಅಭಿವೃದ್ಧಿಯಲ್ಲೂ ಬ್ಯಾಂಕಿನ ಪಾತ್ರ ಮಹತ್ವದ್ದಾಗಿದೆ. ಭವಿಷ್ಯದಲ್ಲೂ ಎಲ್ಲರ ಸಹಕಾರದಿಂದ ಬ್ಯಾಂಕ್ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ನುಡಿದರು.
ಬ್ಯಾಂಕಿನ ಕಾರ್ಯಾಧ್ಯಕ್ಷ ಸೀತಾರಾಮ್ ಸಿ. ಗಾಂಡತ್ ಅವರು, ಬ್ಯಾಂಕ್ ಕಳೆದ 54 ವರ್ಷಗಳಿಂದ ಆರ್ಥಿಕ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಸಾಧಿಸುತ್ತ ಬಂದಿದೆ. ಇದಕ್ಕೆ ಕಾರಣ ಬ್ಯಾಂಕಿನ ಆಧುನಿಕ ಟೆಕ್ನಾಲಜಿ ಹಾಗೂ ಗ್ರಾಹಕರು ಎಂದರೆ ತಪ್ಪಾಗಲಾರದು. ಗ್ರಾಹಕರ ಹಿತದೃಷ್ಟಿಯನ್ನಿಟ್ಟುಕೊಂಡು ಬ್ಯಾಂಕ್ ಅವರಿಗೆ ಸ್ಪಂದಿಸುತ್ತಿದೆ. ಬ್ಯಾಂಕ್‌ನ ಅಭಿವೃದ್ಧಿ ಯಲ್ಲಿ ಶೇರುದಾರರು, ಡಿಪೊಸಿಟರ್, ಗ್ರಾಹಕರು, ಹಿತೈಷಿಗಳು ಹಾಗೂ ಸಿಬಂದಿಗಳ ಸೇವೆಯನ್ನು ಮರೆಯುವಂತಿಲ್ಲ. ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಿ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಯ ಪಥದತ್ತ ಸಾಗಿಸುವ ಪಣವನ್ನು ನಾವೆಲ್ಲರು ತೊಡೋಣ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.
ಬ್ಯಾಂಕಿನ ಉಪ ಕಾರ್ಯಾಧ್ಯಕ್ಷ ನಿತ್ಯಾನಂದ ಪ್ರಭು, ನಿರ್ದೇಶಕ ಮಂಡಳಿ, ಹಿರಿಯ ಅಧಿಕಾರಿಗಳು, ವಿವಿಧ ಶಾಖೆಗಳ ಅಧಿಕಾರಿಗಳು, ವಲಯಾಧಿಕಾರಿಗಳು, ಬ್ಯಾಂಕಿನ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.