ಬೆಂಗಳೂರು: ಒಲಿಂಪಿಕ್ಸ್ ಬಂಗಾರ ವಿಜೇತ ನೀರಜ್ ಚೋಪ್ರಾ ರಾಷ್ಟ್ರಗೀತೆ ಹಾಡುವ ಮೂಲಕ ಎಂಟನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ಬೆಂಗಳೂರಿನ ವೈಟ್‌ಫೀಲ್ಡ್‌ನ ಶೆರಟಾನ್ ಗ್ರ್ಯಾಂಡ್ ಹೊಟೇಲ್‌ನಲ್ಲಿ ಬುಧವಾರ ಆರಂಭಗೊಂಡಿತು.
ಆದರೆ ಉದ್ಘಾಟನಾ ಪಂದ್ಯದಲ್ಲೇ ಆತಿಥೇಯ ಬೆಂಗಳೂರು ಬುಲ್ಸ್ ತಂಡಕ್ಕೆ ಯು ಮುಂಬಾ ತಿವಿದಿದೆ. ಮುಂಬಾ 46 ಅಂಕ ಗಳಿಸಿದರೆ ಬೆಂಗಳೂರು 30 ಅಂಕಗಳನ್ನಷ್ಟೇ ಗಳಿಸಿತು.
ಪಂದ್ಯದ ಮೊದಲ ಅವಧಿಯಲ್ಲೇ ಮುಂಬಾ ಭಾರೀ ಮುನ್ನಡೆ ಸಾಧಿಸಿತ್ತು. ಮೊದಲ 20 ನಿಮಿಷ ಮುಗಿದಾಗ ಮುಂಬಾ 24, ಬೆಂಗಳೂರು 17 ಅಂಕ ಗಳಿಸಿದ್ದವು. ಎರಡನೇ ಅವಧಿಯಲ್ಲೂ ಈ ಹಿನ್ನಡೆಯಿಂದ ಹೊರಬರಲು ಬೆಂಗಳೂರಿಗೆ ಸಾಧ್ಯವಾಗಲಿಲ್ಲ.
ಬೆಂಗಳೂರು ಪರ ನಾಯಕ ಪವನ್ ಸೆಹ್ರಾವತ್ ಅವರಲ್ಲಿ ಹಿಂದಿನ ರೈಡಿಂಗ್ಸ್ ಪರಾಕ್ರಮ ಕಂಡುಬರಲಿಲ್ಲ. ಅವರ ರೈಡ್ಸ್ ಕೇವಲ ಬೋನಸ್ ಅಂಕಗಳಿಗಷ್ಟೇ ಸೀಮಿತವಾಗಿತ್ತು. ಅವರು 12 ಅಂಕ ಗಳಿಸಿದರು.
ಇದನ್ನೂ ಓದಿ:ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್: ಲಬುಶೇನ್ ನಂ. ವನ್
ಆದರೆ ಇನ್ನೊಬ್ಬ ರೈಡರ್ ಚಂದ್ರನ್ ರಂಜಿತ್ ಗಮನಾರ್ಹ ಪ್ರದರ್ಶನ ನೀಡಿ 13 ಅಂಕ ತಂದಿತ್ತರು. ಆದರೆ ರಕ್ಷಣಾ ವಿಭಾಗದಲ್ಲಿ ತಂಡಕ್ಕೆ ಸೂಕ್ತ ಬೆಂಬಲ ಸಿಗಲಿಲ್ಲ. ಮಯೂರ್ ಜಗನ್ನಾಥ್ 3 ಅಂಕ ಗಳಿಸಿದ್ದೇ ಉತ್ತಮ ಸಾಧನೆಯೆನಿಸಿತು. ಡಿಫೆಂಡರ್ ಮಹೇಂದರ್ ಸಿಂಗ್ ವೈಫಲ್ಯ ಬುಲ್ಸ್‌ಗೆ ಹಿನ್ನಡೆಯಾಯಿತು.
ಮುಂಬಾ ಪರ ಅಭಿಷೇಕ್ ಸಿಂಗ್ ಅಮೋಘ ದಾಳಿ ನಡೆಸಿ 19 ಅಂಕ ಗಳಿಸಿದರು. ನಾಯಕ ಫಜೆಲ್ ಅಟ್ರಾಚೆಲಿ ಅವರಿಂದ ವಿಶೇಷ ಟ್ಯಾಕಲ್ ಕಂಡುಬರಲಿಲ್ಲ.
ತೆಲುಗು ಟೈಟಾನ್ಸ್ ಮತ್ತು ತಮಿಳ್ ತಲೈವಾಸ್ ನಡುವಿನ ದ್ವಿತೀಯ ಪಂದ್ಯ 40-40 ಅಂಕದೊಂದಿಗೆ ಟೈ ಗೊಂಡಿತು. ಅಂತಿಮ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ ತಂಡ ಯುಪಿ ಯೋಧಾವನ್ನು 38-33 ಅಂತರದಿಂದ ಮಣಿಸಿತು.