ಕಾರವಾರ: ಕೊರೊನಾ ವೈರಸ್ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್ ಪ್ರಿನ್ಸಸ್ ಎಂಬ ಕ್ರೂಸ್ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್ ಬಾಲಕೃಷ್ಣ ಮಗರ್(27) ಸೇರಿ ಒಟ್ಟು 119 ಭಾರತೀಯರು ಮತ್ತು ಐವರು ವಿದೇಶಿಯರನ್ನು ಕೇಂದ್ರ ಸರ್ಕಾರದ ವಿಶೇಷ ಏರ್ ಇಂಡಿಯಾ ವಿಮಾನದ ಮೂಲಕ ಗುರುವಾರ ವಾಪಸ್ ಭಾರತಕ್ಕೆ ಕರೆತರಲಾಯಿತು.
ಕೊರೊನಾ ವೈರಸ್ ಕಬಂಧ ಬಾಹುವಿನಿಂದ ತಪ್ಪಿಸಿಕೊಂಡು ಬಂದ ಅಭಿಷೇಕ ಮಗರ್ ಶುಕ್ರವಾರ ಮಾಧ್ಯಮಗಳಿಗೆ ವ್ಯಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ, ಕೆಲ ವಿಷಯ ಹಂಚಿಕೊಂಡಿದ್ದಾರೆ. ಪ್ರಿನ್ಸನ್ ಹಡಗಿನಿಂದ ಹೊರ ಬಂದ ಮೇಲೆ ಭಾರತೀಯರನ್ನು ಹೊತ್ತು ತಂದ ವಿಶೇಷ ವಿಮಾನ ಮುಂಜಾನೆ 4:30ರ ಸುಮಾರಿಗೆ ನವದೆಹಲಿ ತಲುಪಿತು. ಹರಿಯಾಣದ ಮಾನೇಸರ್‌ನಲ್ಲಿರುವ ಸೇನಾ ನೆಲೆಗೆ ಎಲ್ಲರನ್ನೂ ಕರೆದೊಯ್ಯಲಾಗಿದೆ ಎಂದು ವಿವರಿಸಿದ್ದಾರೆ.
ಅಭಿಷೇಕ್ ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಕೊರೊನಾ ವೈರಸ್ ಹರಡಲು ಕಾರಣವಾಗಬಹುದು ಎಂಬ ಭಯದಿಂದ ಜಪಾನ್ ಸರ್ಕಾರ ತನ್ನ ಭೂ ಪ್ರದೇಶದಲ್ಲಿ ಹಡಗನ್ನು ಒಳಪ್ರವೇಶಕ್ಕೆ ಅನುಮತಿಸಿರಲಿಲ್ಲ. ಹೀಗಾಗಿ 20 ದಿನಗಳಿಗಿಂತ ಹೆಚ್ಚು ಕಾಲ ಹಡಗಿನಲ್ಲಿದ್ದ ಸಿಬ್ಬಂದಿ, ಪ್ರಯಾಣಿಕರು ಸಮುದ್ರ ಮಧ್ಯದಲ್ಲಿಯೇ ಸಿಕ್ಕಿಕೊಂಡಿದ್ದರು. ಇದರಿಂದ ನಾವೆಲ್ಲ ಸಾವು ಬದುಕಿನ ಪ್ರಶ್ನೆ ಎದುರಿಸಿದ್ದೆವು. ಈಗ ಆ ಆತಂಕದಿಂದ ಹೊರಬರಲು ಸಾಕಷ್ಟು ಸಮಯ ಬೇಕು ಎಂದು ತಿಳಿಸಿದ್ದಾರೆ.
ನಾವು ಇದ್ದ ಹಡಗು ಚೀನಾ ತೊರೆದು ಕೆಲವೇ ದಿನಗಳಲ್ಲಿ ಇಂತಹ ಆಘಾತಕಾರಿ ಪರಿಸ್ಥಿತಿ ಎದುರಿಸುತ್ತೇವೆ ಎಂದು ಕನಸು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲ. ಈ ಬಗ್ಗೆ ಸ್ವಲ್ಪವೂ ಅನುಮಾನ ಇರಲಿಲ್ಲ. ಈ ಹಂತದಲ್ಲಿ ನಾನು ಎಲ್ಲವನ್ನೂ ವಿವರಿಸುವ ಸ್ಥಿತಿಯಲ್ಲಿಲ್ಲ ಮತ್ತು ಮಾನೇಸರ್‌ನಲ್ಲಿ 14 ದಿನಗಳ ಕಾಲ ಕಡ್ಡಾಯವಾಗಿ ಕೊರೊನಾ ವೈರಸ್ ಬಾಧಿ ತರಾಗಿದ್ದಾರೆಯೇ ಹೇಗೆ ಎಂಬುದನ್ನು ಪರೀಕ್ಷಿಸಿಕೊಳ್ಳಬೇಕಾಗಿದೆ. ಕ್ಯಾರೆಂಟೈನ್ ಅವಧಿಯ ನಂತರ ನಾನು ಮರಳಿ ಕಾರವಾರಕ್ಕೆ ಹಿಂದಿರುಗಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಎಲ್ಲವನ್ನೂ ವಿವರಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ಭಾರತ ಸರ್ಕಾರಕ್ಕೆ ಧನ್ಯವಾದ: ಡೈಮಂಡ್ ಪ್ರಿನ್ಸಸ್ ಹಡಗಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಭಾರತೀಯರನ್ನಲ್ಲದೇ, ವಿದೇಶಿ ಪ್ರಜೆಗಳನ್ನೂ ಕೇಂದ್ರ ಸರ್ಕಾರ ಇದೇ ವಿಮಾನದಲ್ಲಿ ವಿಶೇಷ ಆಸಕ್ತಿ ವಹಿಸಿ ದೆಹಲಿಗೆ ಕರೆ ತಂದಿದೆ. ಇದಕ್ಕೆ ಸಹಾಯ ಹಸ್ತ ಚಾಚಿದ್ದಕ್ಕಾಗಿ ಅವರು ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಅಭಿಷೇಕ್ ಭಾರತಕ್ಕೆ ತಲುಪಿದ ಕೂಡಲೇ ತಮ್ಮ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಜಾನ್ ಬಚಿ ತೋ ಲಾಖೋ ಪಾಯೇ ಲೌಟ್ ಕೆ ಬುದ್ದು ಘರ್ ತೋ ಆಯೆ’ ಎಂದು ಅವರು ತಮ್ಮ ಫೇಸ್‌ಬುಕ್ ವಾಲ್‌ನಲ್ಲಿ ಬರೆದುಕೊಂಡಿದ್ದಾರೆ. ಅಭಿಷೇಕ್ ಗೋವಾದಲ್ಲಿ ಹೋಟೆಲ್ ಮ್ಯಾನೇಜ್ಮೇಂಟ್ ಕೋರ್ಸ್ ಮುಗಿಸಿದ ನಂತರ, ಡೈಮಂಡ್ ಪ್ರಿನ್ಸಸ್ ಕ್ರೂಸ್ ಹಡಗಿನ ಸಿಬ್ಬಂದಿಯಾಗಿದ್ದರು. ಅವರು ಕಾರವಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರೈಸಿದ್ದರು.
ಸಮಾಧಾನದಲ್ಲಿ ತಂದೆ-ತಾಯಿ: ಅಭಿಷೇಕ್ ಕೊನೆಗೂ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವ ಬಗ್ಗೆ ಅಭಿಷೇಕನ ತಾಯಿ ರೂಪಾಲಿ ಮತ್ತು ತಂದೆ ಬಾಲಕೃಷ್ಣ ಸಮಾಧಾನಪಟ್ಟಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಮಗ ಸಮುದ್ರ ಮಧ್ಯ ಹಡಗಿನಲ್ಲಿ ಸಿಕ್ಕಿ ಹಾಕಿಕೊಂಡಾಗಿನಿಂದ ಆತಂಕದಲ್ಲಿಯೇ ಇದ್ದರು. ಕೊರೊನಾ ಎಂಬ ವೈರಸ್ ಭಯದಿಂದ ಮಗ ಪಾರದ ಎಂದು ಅವರು ಈಗ ನಿರಾಳರಾಗಿದ್ದಾರೆ.
ನಾವು ಅನುಭವಿಸಿದ ದುಃಖ ಮತ್ತು ಪಟ್ಟ ಸಂಕಟವನ್ನು ವಿವರಿಸಲು ಸಾಧ್ಯವಿಲ್ಲ. ಅಭಿಷೇಕ್ ನಮಗೆ ಒಬ್ಬನೇ ಮಗನಾಗಿದ್ದು, ಮನೆಗೆ ಬಂದ ಬಳಿಕ ಅಭಿಷೇಕ್ ವಿದೇಶಿ ಮೂಲದ ಅದೇ ಕಂಪನಿಯಲ್ಲಿ ಕೆಲಸ ಮುಂದುವರಿಸಬೇಕೆ ಅಥವಾ ಬೇಡವೇ ಎಂಬುದನ್ನು ವಿಚಾರ ಮಾಡುವುದಾಗಿ ತಿಳಿಸಿದ್ದಾರೆ. ಅಭಿಷೇಕ ತಾಯಿ ಮಾತನಾಡಿ, ನಾವು ಸಂಕಷ್ಟದಲ್ಲಿದ್ದಾಗ ನಮ್ಮನ್ನು ಬೆಂಬಲಿಸಿದ್ದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ, ಭಾರತ ಸರ್ಕಾರ ಮತ್ತು ಮಾಧ್ಯಮಗಳಿಗೆ ಧನ್ಯವಾದ ಹೇಳಿದ್ದಾರೆ.