ಹೈದರಾಬಾದ್: ಐಪಿಎಲ್ ಮೆಗಾ ಹರಾಜಿಗೆ ದಿನಗಳು ಹತ್ತಿರ ಬರುತ್ತಿದ್ದಂತೆ ಫ್ರಾಂಚೈಸಿಗಳು ಹಲವು ಚಟುವಟಿಕೆಗಳಲ್ಲಿ ಬ್ಯುಸಿಯಾಗಿವೆ. ಈ ಬಾರಿ ಮೆಗಾ ಹರಾಜು ನಡೆಯಲಿರುವ ಕಾರಣದಿಂದ ತಮ್ಮಲ್ಲಿ ಉಳಿಸಿಕೊಳ್ಳಬಯಸುವ ಆಟಗಾರರ ಪಟ್ಟಿಯನ್ನು ಆಯಾ ಫ್ರಾಂಚೈಸಿಗಳು ಸಿದ್ದತೆ ಮಾಡಿಕೊಳ್ಳುತ್ತಿವೆ.
ಕಳೆದ ಸೀಸನ್ ನಲ್ಲಿ ತನ್ನ ಹೊಡಿಬಡಿ ಆಟದಿಂದ ಹೆಸರು ಮಾಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡವು ತನ್ನ ರೆಟೆನ್ಶನ್ ಆಟಗಾರರ ಪಟ್ಟಿಯನ್ನು ಸಿದ್ದಮಾಡಿದೆ ಎಂದು ವರದಿ ಮಾಡಿದೆ.
ಸನ್‌ರೈಸರ್ಸ್ ಹೈದರಾಬಾದ್ (SRH) ಪ್ರಮುಖ ಆಟಗಾರರಾದ ಹೆನ್ರಿಕ್ ಕ್ಲಾಸೆನ್, ಪ್ಯಾಟ್ ಕಮಿನ್ಸ್ ಮತ್ತು ಅಭಿಷೇಕ್ ಶರ್ಮಾರನ್ನು ಉಳಿಸಿಕೊಳ್ಳುವ ನಿರ್ಧಾರ ಮಾಡಿದೆ ಎಂದು ವರದಿಯಾಗಿದೆ.
ಇಎಸ್‌ಪಿಎನ್ ಕ್ರಿಕ್‌ಇನ್‌ಫೋ ಪ್ರಕಾರ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಹೆನ್ರಿಕ್ ಕ್ಲಾಸೆನ್ ಅವರನ್ನು ಮೊದಲ ಆಯ್ಕೆಯಾಗಿ ಹೈದರಾಬಾದ್ ತನ್ನಲ್ಲಿ ಉಳಿಸಿಕೊಳ್ಳಲಿದೆ. ಅವರಿಗೆ 23 ಕೋಟಿ ರೂ (ಸುಮಾರು USD 2.74 ಮಿಲಿಯನ್) ನೀಡಿ ಉಳಿಸಿಕೊಳ್ಳುತ್ತಿದೆ. ಆಸ್ಟ್ರೇಲಿಯಾದ ಆಲ್‌ರೌಂಡರ್ ಪ್ಯಾಟ್ ಕಮ್ಮಿನ್ಸ್ 18 ಕೋಟಿ (USD 2.14 ಮಿಲಿಯನ್) ಮೊತ್ತದೊಂದಿಗೆ ಎಸ್‌ಆರ್‌ಎಚ್ ಉಳಿಸಕೊಳ್ಳುತ್ತಿದೆ. ಭಾರತದ ಯುವ ಆಲ್‌ರೌಂಡರ್ ಅಭಿಷೇಕ್ ಶರ್ಮಾ ಅವರನ್ನು 14 ಕೋಟಿ ರೂ ಗೆ (USD 1.67 ಮಿಲಿಯನ್) ನೀಡಿ ರಿಟೆನ್ಶನ್ ಮಾಡಿಕೊಳ್ಳಲಿದೆ.
ಐಪಿಎಲ್ ನ ಹೊಸ ರಿಟೆನ್ಶನ್ ನಿಯಮಗಳು ಫ್ರಾಂಚೈಸಿಗಳು ತಮ್ಮ ಹಿಂದಿನ ತಂಡಗಳಿಂದ ಆರು ಆಟಗಾರರನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಪ್ಯಾಟ್ ಕಮಿನ್ಸ್ ಅವರನ್ನು ಕಳೆದ ಬಾರಿ 20.50 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಆದರೆ ಈ ಬಾರಿ 18 ಕೋಟಿ ರೂ ಮೊತ್ತಕ್ಕೆ ಉಳಿಸಿಕೊಳ್ಳಲಿದೆ.
ಸನ್ ರೈಸರ್ಸ್ ಹೈದರಾಬಾದ್ ತಂಡವು ಟ್ರಾವಿಸ್ ಹೆಡ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರನ್ನೂ ಉಳಿಸಿಕೊಳ್ಳಲಿದೆ ಎಂದು ವರದಿ ಹೇಳಿದೆ.