Advertisement

ಭಕ್ತಿ ಜತೆಗೆ ಬದುಕಿನ ಪಾಠ ಹೇಳಿ ಕೊಟ್ಟ ಸಂತ

10:15 AM Nov 23, 2021 | Team Udayavani |

ತ್ರಿವಿಧ ದಾಸೋಹಿ, ಕಾಯಕಯೋಗಿ, ಕೋಟ್ಯಂತರ ಭಕ್ತರ ಆರಾಧ್ಯ ದೈವ, ಕನಸುಗಳನ್ನು ಸಾಕಾರಗೊಳಿಸಿ ಕಂಗೊಳಿಸಿದ ಡಾ|ಅಭಿನವ ಅನ್ನದಾನ ಮಹಾಸ್ವಾಮೀಜಿ ಧರ್ಮದ ಜ್ಯೋತಿ ಬೆಳಗಿಸಿ ಕತ್ತಲೆಯ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬರಿಗೈಯಲ್ಲಿ ಮಠದ ಪೀಠವನ್ನೇರಿ ಸತತ ಪರಿಶ್ರಮ, ಛಲ ಬಿಡದ ಸಾಧಕನಂತೆ ಕರ್ಮಯೋಗಿಯಾಗಿ ನೂರಾರು ಸಂಸ್ಥೆಗಳನ್ನು ಕಟ್ಟಿದ್ದಲ್ಲದೆ, ಬಡ ರೈತರ ಮಕ್ಕಳಿಗೆ ಅನ್ನ, ಅಕ್ಷರ, ವಸತಿ ನೀಡಿ ಪೋಷಿಸಿ ಭಕ್ತಿ ಮಾರ್ಗದ ಜತೆಗೆ ಬದುಕಿನ ಪಾಠ ಹೇಳಿ ಕೊಟ್ಟು ಕಣ್ಮರೆಯಾಗಿದ್ದಾರೆ.

Advertisement

ಕರ್ನಾಟಕದ ಪ್ರಮುಖ ವೀರಶೈವ ಲಿಂಗಾಯತ ಮಠಗಳಾದ ಬಳ್ಳಾರಿ ಜಿಲ್ಲೆ ಕೊಟ್ಟೂರು ಸಂಸ್ಥಾನ ಮಠದಲ್ಲಿ ಡಾ|ಸಂಗನಬಸವ ಶ್ರೀ, ಗದಗ ಜಿಲ್ಲೆ ಗಜೇಂದ್ರಗಢ ತಾಲೂಕಿನ ಹಾಲಕೆರೆ ಗ್ರಾಮದ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದಲ್ಲಿ ಡಾ|ಅಭಿನವ ಅನ್ನದಾನ ಮಹಾಸ್ವಾಮೀಜಿ ಎಂದು ಶ್ರೀಗಳನ್ನು ಕರೆಯಲಾಗುತ್ತಿತ್ತು. ಬಾದಾಮಿ ತಾಲೂಕಿನ ಶಿವಯೋಗ ಮಂದಿರಕ್ಕೆ 25 ವರ್ಷಗಳ ಕಾಲ ಪೀಠಾಧೀಪತಿಗಳಾಗಿ ಕಾರ್ಯನಿರ್ವಹಿಸಿ ಸಾವಿರಾರು ಸ್ವಾಮೀಜಿಗಳನ್ನು ತಿದ್ದಿ-ತೀಡಿ ಮೂರ್ತರೂಪಗೊಳಿಸಿದ್ದರು. ಇಂದು ನಾಡಿನ ಪ್ರಮುಖ ಲಿಂಗಾಯತ ಮಠಗಳಲ್ಲಿ ಶ್ರೀಗಳ ಸಾವಿರಾರು ಶಿಷ್ಯರಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾ|ನ ಬಿದರೆ ಗ್ರಾಮದಲ್ಲಿ 1938ರಲ್ಲಿ ಜನಿಸಿದ ಸಂಗನಬಸವ ಶ್ರೀ ಗಳ ತಂದೆ ಸ್ವತಂತ್ರ ಮಠದ ಶ್ರೀಬಸವಲಿಂಗಯ್ಯನವರು. ತಾಯಿ ಗುರಮ್ಮನವರು. ಶಿವಯೋಗ ಮಂದಿರ ಸ್ಥಾಪಕರಾದ ಪೂಜ್ಯ ಲಿಂ|ಹಾನಗಲ್ಲ ಕುಮಾರಸ್ವಾಮಿಗಳಿಗೆ ಜಂಗಮಾಶ್ರಮ ನೀಡಿದ್ದ ಬಿದಿರೆಯ ಕುಮಾರಸ್ವಾಮಿಗಳು ಜನಿಸಿದ ಪವಿತ್ರ ವಂಶದಲ್ಲಿಯೇ ಶ್ರೀಗಳ ತಂದೆ ಬಸವಲಿಂಗಯ್ಯನವರು ಜನಿಸಿದ್ದು ಎಂಬುದು ಗಮನಾರ್ಹ.

ಚಿಕ್ಕವರಿರುವಾಗಲೇ ತಾಯಿಯನ್ನು ಕಳೆದುಕೊಂಡ ಶ್ರೀಗಳು, ಬೈಲಹೊಂಗಲದ ಕುಂಬಾರಗೇರಿ ಮಠದ ಶಿವಬಸಯ್ಯನವರ ಆಶ್ರಯದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ್ದರು. ಕೆಲವು ದಿನ ಹಾಲಕೆರೆ ಅನ್ನದಾನೇಶ್ವರ ಮಠದ ಶಾಲೆಯಲ್ಲೂ ಓದಿದ್ದರು. ಮುಂದೆ ಸಂಗನಬಸವ ಶ್ರೀಗಳನ್ನು ಜಮಖಂಡಿಯ ವಿರಕ್ತ ಮಠಕ್ಕೆ ನೇಮಿಸಿ, ಮುಂದಿನ ಅಭ್ಯಾಸಕ್ಕಾಗಿ ಶಿವಯೋಗ ಮಂದಿರಕ್ಕೆ ಸೇರಿಸಲಾಯಿತು.

ಹನ್ನೆರಡು ವರ್ಷ ಶಿವಯೋಗಮಂದಿರದಲ್ಲಿದ್ದು ಶಿವಯೋಗ ಸಾಧನೆಗೆ ತಮ್ಮನ್ನು ಪರಿಪೂರ್ಣ ಒಡ್ಡಿಕೊಂಡರು. ಕನ್ನಡ, ಇಂಗ್ಲಿಷ್‌, ಸಂಸ್ಕೃತ ಮತ್ತು ಹಿಂದಿ ಭಾಷೆಗಳ ಅಭ್ಯಾಸದ ಜತೆಗೆ ವಚನಶಾಸ್ತ್ರ, ತತ್ವಶಾಸ್ತ್ರ, ಯೋಗಶಾಸ್ತ್ರದಂತಹ ಆಧ್ಯಾತ್ಮಿಕ ವಿಷಯಗಳಲ್ಲಿಯೂ ಅಧ್ಯಯನ ನಡೆಸಿದರು. ಮುಂದೆ ಹೆಚ್ಚಿನ ಅಭ್ಯಾಸಕ್ಕಾಗಿ ಕಾಶಿಗೂ ತೆರಳಿ ದರ್ಶನ ಶಾಸ್ತ್ರ, ವ್ಯಾಕರಣ ಶಾಸ್ತ್ರಗಳನ್ನು ಅಭ್ಯಸಿಸಿ, ಕಾಶೀ ವಿವಿಯಿಂದ “ಕಾವ್ಯ ತೀರ್ಥ’, “ವೇದಾಂತಾಚಾರ್ಯ’, “ಯೋಗ ತಂತ್ರಾಚಾರ್ಯ’ ಪದವಿಗಳನ್ನು ಪ್ರಥಮ ದರ್ಜೆಯಲ್ಲಿ ಪಡೆದರು. ಹಿಂದಿಯಲ್ಲಿಯೂ ಎಂಎ ಪದವಿ ಪಡೆದ ಜ್ಞಾನಯೋಗಿಗಳಾಗಿದ್ದರು.

Advertisement

ಇದನ್ನೂ ಓದಿ:ಮರೆಗುಳಿ ಕಾಯಿಲೆ ಮೂಲ ಪತ್ತೆ; ಐಐಟಿ ಮಂಡಿ ಸಂಶೋಧಕರಿಂದ ಮಹತ್ವದ ಸಂಶೋಧನೆ

ಅಲ್ಲಿಂದ ವಾಪಸ್‌ ಬಂದ ಬಳಿಕ ಹಂಪಿ, ಹೊಸಪೇಟೆ, ಬಳ್ಳಾರಿಗಳಲ್ಲಿ ಪ್ರಮುಖ ಶಾಖೆಗಳನ್ನು ಹೊಂದಿದ್ದ ಕೊಟ್ಟೂರು ಸ್ವಾಮಿಗಳ ಸಂಸ್ಥಾನಮಠದ ಜವಾಬ್ದಾರಿ ವಹಿಸಿಕೊಂಡರು. 1972, ಜೂ.1ರಂದು 19ನೇ ಪೀಠಾಧಿ ಕಾರಿಗಳಾಗಿ ಅ ಧಿಕಾರ ಸ್ವೀಕರಿಸಿದರು. ಇದಾದ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದ ಹಾಲಕೆರೆಯ ಅನ್ನದಾನೀಶ್ವರ ಸಂಸ್ಥಾನಮಠದ ಪೀಠಾಧಿ ಕಾರಿಗಳಾಗಿದ್ದ ಶ್ರೀ ಗುರು ಅನ್ನದಾನೀಶ್ವರ ಮಹಾಸ್ವಾಮೀಜಿ ಲಿಂಗೈಕ್ಯ ಅನಂತರ ಹಾಲಕೆರೆಯ ಸಂಸ್ಥಾನಮಠದ ಜವಾಬ್ದಾರಿಯನ್ನೂ ವಹಿಸಿಕೊಂಡರು.

ದಣಿವರಿಯದ ಕಾಯಕಯೋಗಿ: 1987, ಆ.27ರಂದು ಹಾಲಕೆರೆ ಸಂಸ್ಥಾನ ಮಠದ ಅ ಧಿಕಾರ ವಹಿಸಿಕೊಂಡ ಡಾ|ಅಭಿನವ ಅನ್ನದಾನ ಸ್ವಾಮೀಜಿ, ಗದಗ, ಬಳ್ಳಾರಿ ಹಾಗೂ ಶಿವಯೋಗ ಮಂದಿರವನ್ನು ಧಾರ್ಮಿಕ ಹಾಗೂ ಶೈಕ್ಷಣಿಕ ನಾಡನ್ನಾಗಿ ರೂಪಿಸಿದರು. ಹಂಪಿಯ ಮಹಾಕವಿ ಹರಿಹರ ಸ್ಮಾರಕ, ಹೇಮಕೂಟದ ಸಂಶೋಧನಾ ಸಂಸ್ಥೆ ಕಟ್ಟಿ ಬೆಳೆಸಿದರು. “ಸುಕುಮಾರ’ ಮಾಸಿಕ ಪತ್ರಿಕೆ ಮುನ್ನಡೆಸಿದರು, ನೂರಾರು ಶಾಲಾ-ಕಾಲೇಜು ಆರಂಭಿಸಿ ಬಡ ರೈತ ಮಕ್ಕಳಿಗೆ ನೆರವಾದರು. ಸ್ತ್ರೀ ಸಮಾನತೆಗೆ ಆದ್ಯತೆ ನೀಡಿದರು, ಸಾವಯವ ಕೃಷಿ ಅಭಿವೃದ್ಧಿ, ಗೋ ಸಂರಕ್ಷಣೆಗೆ ಶ್ರಮಿಸಿದರು. ಗೋಡಂಬಿ, ದಾಲಿcನ್ನಿ, ಮಹಾಘನಿಯಂತಹ ಬೆಲೆ ಬಾಳುವ ಸಸಿಗಳನ್ನು ನೆಟ್ಟು ಪೋಷಿಸಿದರು. ಜನಜಾಗೃತಿ, ಧರ್ಮ ಸಂಸ್ಕಾರ, ಉಳವಿಗೆ 261 ಚಕ್ಕಡಿಯಾತ್ರೆ ಆರಂಭಿಸಿದರು. ಲಿಂ|ಗುರು ಅನ್ನದಾನ ಶ್ರೀಗಳ ಪ್ರತಿಯ ಸಂಕೇತವಾಗಿ 2005ರಲ್ಲಿ 180 ಕೆಜಿ ಬೆಳ್ಳಿಯಿಂದ 16 ಅಡಿ ಎತ್ತರದ ಬೆಳ್ಳಿ ರಥ ನಿರ್ಮಿಸಿ ಸಮಾಜಮುಖೀಯಾದ ಶ್ರೀಗಳು, ಎರಡು ಮಹಾಸಂಸ್ಥಾನಗಳ ಪ್ರಗತಿಗೆ ತಮ್ಮನ್ನೇ ತಾವು ಅರ್ಪಿಸಿಕೊಂಡು ದಣಿವರಿಯದೆ ದುಡಿದರು.

ಶತಮಾನದ ಇತಿಹಾಸ ಹೊಂದಿರುವ ವೀರಶೈವರ ಧಾರ್ಮಿಕ ಗುರುಕುಲ ಎಂದೇ ಪರಿಗಣಿತವಾದ ಬಾದಾಮಿ ತಾಲೂಕಿನ ಶಿವಯೋಗ ಮಂದಿರದಲ್ಲಿ ಬದಲಾವಣೆಯ ಕ್ರಾಂತಿಯನ್ನೇ ಮಾಡಿದರು. ವಟುಗಳಿಗೆ ಎಲ್ಲ ರೀತಿಯ ಶಿಕ್ಷಣ, ಬಸವ ತಣ್ತೀ ಬೋಧಿಸಿ ಆಧ್ಯಾತ್ಮಿಕತೆಗೆ ಹೊಸ ರೂಪ ನೀಡಿದರು. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಜತೆಗೆ ರಾಷ್ಟ್ರಧರ್ಮದ ಅರಿವು ಮೂಡಿಸಿದರು. ಉತ್ತರ ಕರ್ನಾಟಕ ಮಾತ್ರವಲ್ಲ ರಾಜ್ಯಾದ್ಯಂತ ಇರುವ ಪ್ರಮುಖ ಲಿಂಗಾಯತ ಮಠಗಳಿಗೆ ಶ್ರೀಗಳನ್ನು ಸೃಷ್ಟಿಸಿ ಜ್ಞಾನ ಜ್ಯೋತಿ ಬೆಳಗಿದರು.

ಕ್ಷಣ ಕ್ಷಣಕ್ಕೂ ಕುಮಾರಯೋಗಿ ಧ್ಯಾನ ಸಂಗನಬಸವ ಶ್ರೀಗಳು ವಕೀಲನಾಗುವ ಕನಸು ಕಂಡಿದ್ದರು. ಆದರೆ ಕುಮಾರ ಶಿವಯೋಗಿಗಳ ದಿವ್ಯ ಪುರಾಣ, ಶ್ರೀಗಳ ಪವಿತ್ರ ಜೀವನವನ್ನು ಒಳಗೊಂಡ ಕೃತಿಗಳನ್ನು ಓದಿ ಸ್ವಾಮಿತ್ವದ ದೀಕ್ಷೆ ತೊಟ್ಟರು. ಅವರ ತತ್ವಾದರ್ಶಗಳನ್ನು ಅಳವಡಿಸಿ ಕೊಂಡು ಪ್ರತಿದಿನ ಕುಮಾರೇಶನ ನೆನೆದು ಪ್ರಸಾದ ತೆಗೆದುಕೊಂಡು ಜೀವಿಸುತ್ತಿದ್ದರು.

2014ರಲ್ಲಿ ಪೂಜ್ಯ ಗುರುಗಳ ಹೃದಯಕ್ಕೆ ಸ್ಟಂಟ್‌ ಅಳವಡಿಸಿದರು. ಮಧ್ಯರಾತ್ರಿ ವಿಪರೀತ ಎದೆನೋವು ಕಾಣಿಸಿಕೊಂಡು ಶ್ರೀಗಳು ತಮ್ಮ ಆಪ್ತ ಶಿಷ್ಯನನ್ನು ಕರೆದು “ಇಂದೇ ಭಗವಂತನೆಡೆಗೆ ನಮ್ಮ ಯಾತ್ರೆ’ ಎಂದು ಹೇಳಿ ಕುಮಾರೇಶ್ವರ ಪುರಾಣ ಕೈಗೆತ್ತಿಕೊಂಡು ಒಂದೆರೆಡು ಸಂ ಯನ್ನ ಓದುವುದರೊಳಗೆ ಎಲ್ಲ ನೋವು ಮಾಯವಾಯಿತು. ಐದಾರು ವರ್ಷ ಗಳವರೆಗೆ ಯಾವುದೇ ನೋವಿಲ್ಲದೆ ಜೀವನ ನಡೆಸಿದ್ದು ಪವಾಡವೇ ಸರಿ.

ಶ್ರೀಗಳ ನ್ಯಾಯ ನಿಷ್ಠುರತೆ-ನಿರ್ದಾಕ್ಷಿಣ್ಯ ಪರತೆ ಶ್ರೀಗಳು ಸಾಮಾನ್ಯವಾಗಿ ಮೃದು ಸ್ವಭಾವದವರಾಗಿದ್ದರೂ ಪ್ರಸಂಗ ಬಂದಾಗ ವಜ್ರದಂತೆ ಕಠೊರ ವಾಗುತ್ತಿದ್ದರು. ಶಿಕ್ಷಣದ ಗುಣಮಟ್ಟ ಎತ್ತರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡುವುದು ನಿಲ್ಲಬೇಕೆಂದು ಆಲೋಚಿಸಿ ಅದನ್ನು ತಮ್ಮ ಶಿಕ್ಷಣ ಸಂಸ್ಥೆಗಳಿಂದಲೇ ಆರಂಭಿಸಿದರು. ಶ್ರೀಗಳ ಸೂಚನೆಯಂತೆ ವಿದ್ಯಾರ್ಥಿಗಳು ನಕಲು ಮಾಡದಂತೆ ಶಿಕ್ಷಕರು ಕಟ್ಟುನಿಟ್ಟಾಗಿ ನೋಡಿಕೊಂಡರು. ಅದರಿಂದಾಗಿ ಪರೀಕ್ಷೆಯಲ್ಲಿ ಬಹಳ ವಿದ್ಯಾರ್ಥಿಗಳು ಫೇಲಾದರು. ಸರಕಾರ ಅನುದಾನ ಕಡಿತ ಮಾಡುವಂತೆ ತಿಳಿಸಿತು.

ಇದರಿಂದ ಶ್ರೀಗಳು ಬಹಳ ಬೇಸರ ಪಟ್ಟುಕೊಂಡರು. ಒಮ್ಮೆ ರಾಜ್ಯ ಸರಕಾರದ ಶಿಕ್ಷಣ ಸಚಿವರು ರೋಣಕ್ಕೆ ಬಂದಾಗ ಅವರ ಗೌರವಾರ್ಥ ಒಂದು ಸಭೆಯನ್ನು ಪೂಜ್ಯ ಶ್ರೀಗಳ ಸಾನ್ನಿಧ್ಯದಲ್ಲಿ ರಾಜಕೀಯ ಮುಖಂಡರು ಏರ್ಪಡಿಸಿದ್ದರು. ಆಗ ಆಶೀರ್ವಚನ ನೀಡಿದ ಶ್ರೀಗಳು, ನಮ್ಮ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟದ ಅಭಾವವಿದೆ. ಅದಕ್ಕೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದು ಮುಖ್ಯ ಕಾರಣ. ಅದು ನಿಲ್ಲಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಶಾಲೆಗಳಲ್ಲಿ ಪಾಸಾಗುವವರ ಸಂಖ್ಯೆ ಸಹಜವಾಗಿಯೇ ಕಡಿಮೆ ಇರುತ್ತದೆ. ಆ ಕಾರಣವನ್ನೇ ಮುಂದು ಮಾಡಿ ಅಂಥ ಶಾಲೆಗಳ ಅನುದಾನವನ್ನು ಕಡಿತ ಮಾಡುವ ಇಲ್ಲವೇ ನಿಲ್ಲಿಸುವ ಸರಕಾರದ ಕ್ರಮ ಸರಿಯಲ್ಲ.

ಇದರಿಂದ ನಕಲು ಮಾಡಲು ಸ್ವತಃ ಸರಕಾರವೇ ಅವಕಾಶ ನೀಡುತ್ತದೆಂಬ ಅಭಿಪ್ರಾಯ ಜನರಲ್ಲಿ ಮೂಡುತ್ತದೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಸರಕಾರ ಈ ಬಗ್ಗೆ ಗಮನ ಹರಿಸುವುದು ಅವಶ್ಯ ಎಂದು ನಿಷ್ಠುರವಾಗಿ ನುಡಿದಿದ್ದರು.
ಸನ್ಯಾಸಿ ಧರ್ಮ ಕ್ರಿಯಾಮುಖವಾದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಸಂಗನಬಸವ ಶ್ರೀಗಳು ಜ್ವಲಂತ ಉದಾಹರಣೆ. ಧಾರ್ಮಿಕ ಸಂಸ್ಥೆಗಳ ನೇತೃತ್ವ ವಹಿಸಿಯೂ, ಪ್ರಗತಿಪರ ವಿಚಾರಗಳಿಗೆ ಆದ್ಯತೆ ನೀಡಿದರು. ಆರೋಗ್ಯಕರ ಸಮಾಜಕ್ಕೆ ಅವಿರತ ಶ್ರಮಿಸಿದರು. ಅಕ್ಷರದಿಂದ ಅಜ್ಞಾನ, ಅನ್ನದಿಂದ ಹಸಿವು ಕಳೆದ ಪ್ರಾತಃಸ್ಮರಣೀಯರು. ತಮ್ಮ ನಿಷ್ಕಾಮ ಸೇವೆಯ ಮೂಲಕ ಅಜರಾಮರ.

Advertisement

Udayavani is now on Telegram. Click here to join our channel and stay updated with the latest news.

Next