ಹೊಸದಿಲ್ಲಿ: ಲೋಕಸಭೆ ಚುನಾವಣೆ ನಡುವೆಯೇ ಬಹಿರಂಗ ಚರ್ಚೆಗೆ ಸವಾಲು ಹಾಕಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಚರ್ಚೆಗೆ ಆಹ್ವಾನಿಸಿದ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಪತ್ರ ಬರೆದು ಚರ್ಚೆಗೆ ರಾಯ್ ಬರೇಲಿ ಕ್ಷೇತ್ರದ ಪ್ರತಿನಿಧಿಯೊಬ್ಬರನ್ನು ನಾಮನಿರ್ದೇಶನ ಮಾಡಿದ್ದಾರೆ.
ಆತ್ಮೀಯ ರಾಹುಲ್ ಗಾಂಧಿ ಜೀ, ಬಿಜೆಪಿ ಯುವಮೋರ್ಚಾ ನಿಮ್ಮೊಂದಿಗೆ ಚರ್ಚೆಗೆ ಪ್ರತಿನಿಧಿ ನಿಯೋಜಿಸಿದೆ.ಬಿಜೆಪಿ ಯುವಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಅಭಿನವ್ ಪ್ರಕಾಶ್ ನಿಮ್ಮೊಂದಿಗೆ ಚರ್ಚೆಗೆ ಬರಲಿದ್ದಾರೆ. ಅಭಿನವ್ ಪ್ರಕಾಶ್ ಅವರು ರಾಯ್ ಬರೇಲಿಯಲ್ಲಿ ಸುಮಾರು 30% ರಷ್ಟಿರುವ ಪಾಸಿ (SC) ಸಮುದಾಯದ ಯುವ ಮತ್ತು ವಿದ್ಯಾವಂತ ನಾಯಕರಾಗಿದ್ದಾರೆ. ಇದು ರಾಜಕೀಯ ಪರಂಪರೆಯಲ್ಲಿ ಬಂದ ಕುಡಿ ಮತ್ತು ಕಠಿನ ದಾರಿಯಲ್ಲಿ ಸಾಗಿಬಂದ ಸಾಮಾನ್ಯ ಯುವಕನ ನಡುವಿನ ಸಮೃದ್ಧ ಚರ್ಚೆಯಾಗಿದೆ.ಎದುರು ನೋಡುತ್ತಿದ್ದೇನೆ!” ಎಂದು ಪತ್ರ ಬರೆದಿದ್ದಾರೆ.
2024ರ ಚುನಾವಣೆ ಸಂಬಂಧಿಸಿ ಪ್ರಮುಖ ಸಮಸ್ಯೆಗಳು ಹಾಗೂ ಆರೋಪ-ಪ್ರತ್ಯಾರೋಪಗಳನ್ನು ಖುದ್ದು ರಾಹುಲ್ ಮತ್ತು ಮೋದಿ ಸಾರ್ವಜನಿಕ ವೇದಿಕೆಯಲ್ಲೇ ಪರಸ್ಪರ ಮುಖಾಮುಖಿಯಾಗಿ ಚರ್ಚಿಸಿದರೆ, ಜನರಿಗೆ ಇದರಿಂದ ಉಪಯೋಗವಾಗುತ್ತದೆ. ಹಾಗಾಗಿ ಈ ಇಬ್ಬರೂ ಸಾರ್ವಜನಿಕವಾಗಿ ಚರ್ಚೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮದನ್ ಬಿ. ಲೋಕುರ್, ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ ಹಾಗೂ ಹಿರಿಯ ಪತ್ರಕರ್ತ ಎನ್.ರಾಮ್ ಅವರು ಪ್ರಧಾನಿ ಮೋದಿ ಮತ್ತು ರಾಹುಲ್‌ಗೆ ಪತ್ರ ಬರೆದಿದ್ದರು.
ಇದಕ್ಕೆ ಪ್ರತಿಯಾಗಿ ರಾಹುಲ್ ಟ್ವೀಟ್ ಮಾಡಿ, ಪ್ರಧಾನಿ ನರೇಂದ್ರ ಮೋದಿ ಜತೆಗೆ ಸಾರ್ವಜನಿಕ ಚರ್ಚೆ ನಡೆಸುವ ಆಹ್ವಾನವನ್ನು ಅಧಿಕೃತವಾಗಿ ಸ್ವೀಕರಿಸಿದ್ದರು. ಚರ್ಚೆಗೆ ಪ್ರಧಾನಿ ಮೋದಿ ಕೂಡ ಒಪ್ಪಿಕೊಂಡರೆ, ಚರ್ಚೆಯ ರೂಪರೇಖೆಯ ವಿವರ ಹಾಗೂ ದಿನಾಂಕದ ಮಾಹಿತಿಯನ್ನು ಹಂಚಿಕೊಳ್ಳುವಂತೆ ಕೇಳಿದ್ದರು.
ರಾಹುಲ್ ಗಾಂಧಿ ಅವರ ಜತೆಗೆ ಬಹಿರಂಗ ಚರ್ಚೆ ನಡೆಸುವ ಆಹ್ವಾನವನ್ನು ಒಪ್ಪಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಇನ್ನೂ ಧೈರ್ಯ ಮಾಡಿಯೇ ಇಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದರು. 56 ಇಂಚಿನ ಎದೆಯ ವ್ಯಕ್ತಿ ಮಾತ್ರ ಆಹ್ವಾನ ಸ್ವೀಕರಿಸಿಲ್ಲ. ಟಿ.ವಿ. ಚಾನೆಲ್‌ಗಳಿಗೆ ಮೋದಿ ನೀಡುವ ಸಂದರ್ಶನಗಳೆ ಲ್ಲವೂ ಬರೀ ನಾಟಕಗಳು. ದೇಶದ ಸಮಸ್ಯೆಗಳ ಬಗ್ಗೆ ಅವರಿಗೆ ಕೇಳುವ ಎಲ್ಲ ಪ್ರಶ್ನೆಗಳು, ಉತ್ತರಗಳೆಲ್ಲವೂ ಪೂರ್ವ ನಿರ್ಧರಿತ. ಇಲ್ಲಿಯವರೆಗೆ ಮಾಧ್ಯಮಗಳು ಮೋದಿಯನ್ನು ಏಕಾಏಕಿ ಪ್ರಶ್ನೆ ಮಾಡಿದ್ದೇ ಇಲ್ಲ ಎಂದಿದ್ದರು.