ಹೊಸದಿಲ್ಲಿ: ಬಾಲಾಕೋಟ್ ದಾಳಿ ಬಳಿಕ ಪಾಕಿಸ್ಥಾನದ ವಾಯುಪಡೆಯ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಸುದ್ದಿ ಮಾಡಿದ, ವಾಯುಪಡೆ ಸೂಪರ್ ಹೀರೋ ಪೈಲಟ್ ಅಭಿನಂದನ್ (36) ಇದೀಗ ಮತ್ತೆ ಮಿಗ್ 21 ವಿಮಾನ ಚಾಲನೆಗೆ ಸಿದ್ಧವಾಗಿದ್ದಾರೆ. ಅವರೀಗ ರಾಜಸ್ಥಾನದ ವಾಯುಪಡೆ ನೆಲೆಯಲ್ಲಿ ನಿಯೋಜಿತರಾಗಿದ್ದಾರೆ.
ಫೆ.27ರಂದು ಪಾಕ್ ವಾಯುಪಡೆಯೊಂದಿಗೆ ಹೋರಾಟದ ಬಳಿಕ ಅಭಿನಂದನ್ ವಿಮಾನ ಪತನಗೊಂಡಿದ್ದು, ಪಾಕ್ ಸೇನೆಗೆ ಸೆರೆ ಸಿಕ್ಕಿದ್ದರು. ಬಳಿಕ ಪಾಕ್ ಅಭಿನಂದನ್ ಅವರನ್ನು ಯುದ್ಧ ಕೈದಿ ಎಂದು ಪರಿಗಣಿಸಿ ಮರಳಿಸಿತ್ತು.
ವಿಮಾನದಿಂದ ಹೊರಗೆ ಹಾರಿದ್ದು, ಮತ್ತು ಸ್ಥಳೀಯರು, ಪಾಕ್ ಸೇನೆಯ ಹಿಂಸೆಯಿಂದಾಗಿ ಅಭಿನಂದನ್‌ಗೆ ಏಟಾಗಿದ್ದು ಬಳಿಕ ಅವರು ವಿಮಾನ ಚಾಲನೆಯಿಂದ ದೂರವಿದ್ದರು. ಈಗ 6 ತಿಂಗಳ ಬಳಿಕ ಮತ್ತೆ ಸಿದ್ಧರಾಗಿದ್ದಾರೆ.
ಬೆಂಗಳೂರಿನ ಏರೋಸ್ಪೇಸ್ ಮೆಡಿಸಿನ್ ಅಭಿನಂದನ್ ಅವರನ್ನು ಪೈಲಟ್ ಕೆಲಸಕ್ಕೆ ಫಿಟ್ ಆಗಿರುವುದಾಗಿ ಮೂರು ವಾರಗಳ ಹಿಂದೆ ಘೋಷಿಸಿದೆ.
ಶತ್ರುರಾಷ್ಟ್ರದ ಕೈಗೆ ಸೆರೆ ಸಿಕ್ಕರೂ, ಅಪ್ರತಿಮ ಧೈರ್ಯ ತೋರಿದ್ದಕ್ಕಾಗಿ ಮತ್ತು ಶತ್ರು ರಾಷ್ಟ್ರದ ಯುದ್ಧ ವಿಮಾನ ಪುಡಿಗಟ್ಟಿದ್ದಕ್ಕಾಗಿ ಅವರಿಗೆ ಇತ್ತೀಚಿಗೆ ವೀರ ಚಕ್ರ ಶೌರ್ಯ ಪದಕವನ್ನು ನೀಡಲಾಗಿತ್ತು.