ಉಡುಪಿ/ಮಲ್ಪೆ: ಭಾರತವೀಗ ಸಬಲ ಪ್ರಧಾನಮಂತ್ರಿಯ ಕೈಯಲ್ಲಿದೆ. ಉಗ್ರರ ದಮನವನ್ನು ನಡೆಸಲಾಗುವುದು. ಅಭಿನಂದನ್ ಅವರನ್ನು ವಾಪಸು ಪಡೆ ಯಲು ಸಾಧ್ಯವಾದುದು ಭಾರತದ ಸಾಮರ್ಥ್ಯವನ್ನು ಸಾರುತ್ತದೆ, ಇದುವೇ ಬಿಗ್ ಡೀಲ್ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರೆ ಮೀನಾಕ್ಷಿ ಲೇಖೀ ಹೇಳಿದರು.
ಮಲ್ಪೆ ಕಡಲತೀರದಲ್ಲಿ ನಮೋ ಭಾರತ್ ಸಂಘಟನೆ ರವಿವಾರ ಆಯೋಜಿಸಿದ “ಪಾಂಚಜನ್ಯ’ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮೀನುಗಾರರಿಗೆ ನೆರವು, ಉಜ್ವಲ ಗ್ಯಾಸ್, ರಸ್ತೆ, ರೈಲ್ವೆ, ಆಯುಷ್ಮಾನ್ ಭಾರತ ಇತ್ಯಾದಿ ಯೋಜನೆಗಳ ಮೂಲಕ ಮೋದಿ ಸರಕಾರ ಜನಹಿತ ಕಾಪಾಡಿದೆ. ಉಡುಪಿ ಜಿಲ್ಲೆಯಲ್ಲಿ ಪಾಸ್‌ಪೋರ್ಟ್ ಕಚೇರಿ ತೆರೆಯಲಾಗಿದೆ ಎಂದರು.
ದುಬೈ ಪರಿಸರದಲ್ಲಿ ಒಂದಿಷ್ಟು ಮೀನುಗಾರರು ಸಿಕ್ಕಿದ್ದು, ಅವರು ಯಾರೆಂದು ತಿಳಿದಿಲ್ಲ. ಮಲ್ಪೆಯಿಂದ ನಾಪತ್ತೆಯಾದ ಮೀನುಗಾರರ ಕುರಿತು ಉತ್ತಮ ಸುದ್ದಿ ಬರಬಹುದು ಎಂದರು. ಚೇತನ್ ಆಜಾದ್, ಡಾ| ಸೀತಾರಾಮ ಭಟ್ ಉಪಸ್ಥಿತರಿದ್ದರು. ಶಶಾಂಕ ಶಿವತ್ತಾಯ ಅಧ್ಯಕ್ಷತೆ ವಹಿಸಿದ್ದರು. ಶ್ರೀಕಾಂತ ಶೆಟ್ಟಿ ಪ್ರಸ್ತಾವನೆಗೈದರು. ದಾಮೋದರ ಶರ್ಮಾ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಪ್ಪ, ತಿಮ್ಮಯ್ಯ, ಉಪೇಂದ್ರ ಸ್ಮರಣೆ
ಜನರಲ್ ಕಾರ್ಯಪ್ಪ, ತಿಮ್ಮಯ್ಯ, ಉಪೇಂದ್ರ ಪೂಜಾರಿ ಯವರು ಜನಿಸಿದ ನಾಡಿಗೆ ನಮನ ಎಂದು ಮೀನಾಕ್ಷಿ ಲೇಖೀಯವರು ಕನ್ನಡದಲ್ಲಿ ಹೇಳಿದರು.