ಕನ್ಯಾಕುಮಾರಿ: ಪಾಕ್ ಸೆರೆಯಿಂದ ಇಂದು ಸಂಜೆ ಬಿಡುಗಡೆಗೊಂಡು ಭಾರತಕ್ಕೆ ಆಗಮಿಸುವ ಭಾರತೀಯ ವಾಯು ಪಡೆಯ ಹೆಮ್ಮೆಯ ಪೈಲಟ್, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ತಮಿಳು ನಾಡಿನವರೆಂಬ ಬಗ್ಗೆ ಎಲ್ಲ ಭಾರತೀಯರು ಹೆಮ್ಮೆ ಪಡುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕನ್ಯಾಕುಮಾರಿಯಲ್ಲಿಂದು ನಡೆದ ರಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ ಅವರು, ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಇಡಿಯ ದೇಶವೇ ಒಂದುಗೂಡಿದೆ; ನಮ್ಮ ದೇಶ ಎಂದೂ ಶತ್ರುಗಳಿಗೆ ತಲೆ ಬಾಗುವುದಿಲ್ಲ; ನಾವೆಲ್ಲರೂ ಒಗ್ಗೂಡಿ ದೇಶದ ಘನತೆ, ಗೌರವದ ರಕ್ಷಣೆಗೆ ಹೋರಾಡುತ್ತೇವೆ ಎಂದು ಹೇಳಿದರು.
ಪಾಕಿಸ್ಥಾನದಿಂದ ಹೊರ ಹೊಮ್ಮುವ ಭಯೋತ್ಪಾದನೆಯ ಮೂಲೋತ್ಪಾಟನೆಯೇ ಭಾರತದ ಗುರಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ವಿಂಗ್ ಕಮಾಂಡರ್ ಅಭಿನಂದನ್ ತೋರಿರುವ ಧೈರ್ಯ ಸಾಹಸವನ್ನು ಅವರು ಬಹುವಾಗಿ ಪ್ರಶಂಸಿಸಿದರು.
ಈ ನಡುವೆ ಐಎಎಫ್ ಪೈಲಟ್ ಅಭಿನಂದನ್ ಅವರನ್ನು ಪಾಕ್ ಬಿಡುಗಡೆ ಮಾಡಲಿರುವುದನ್ನು ಚೀನ ಸ್ವಾಗತಿಸಿದೆ.
ಇದೇ ವೇಳೆ ಏರ್ ಕೆನಡ ಭಾರತಕ್ಕೆ ತನ್ನ ವಿಮಾನ ಹಾರಾಟಗಳನ್ನು ಆರಂಭಿಸಿದೆ. ಪಾಕಿಸ್ಥಾನ ಇಂದು ತನ್ನ ವಾಯು ಪ್ರದೇಶವನ್ನು ಅಂತಾರಾಷ್ಟ್ರೀಯ ಹಾರಾಟಕ್ಕೆ ಮುಕ್ತಗೊಳಿಸಿರುವುದೇ ಇದಕ್ಕೆ ಕಾರಣವಾಗಿದೆ.