ಸೂರತ್: ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಸೆಮಿ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಅಭಿಮನ್ಯು ಮಿಥುನ್ ವಿನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಒಂದು ಓವರ್ ನಲ್ಲಿ ಐದು ವಿಕೆಟ್ ಕಿತ್ತು ನೂತನ ದಾಖಲೆಗೆ ಕನ್ನಡಿಗ ಪಾತ್ರರಾಗಿದ್ಧಾರೆ.
ಹರ್ಯಾಣ ವಿರುದ್ಧದ ಉಪಾಂತ್ಯ ಪಂದ್ಯದಲ್ಲಿ ಮಿಥುನ್ ಈ ದಾಖಲೆ ಬರೆದಿದ್ದಾರೆ. ಹರ್ಯಾಣ ಇನ್ನಿಂಗ್ಸ್ ನ ಅಂತಿಮ ಓವರ್ ನಲ್ಲಿ ಮಿಥುನ್ ಈ ಸಾಧನೆ ಬರೆದರು.
ಮೊದಲ ಮೂರು ಓವರ್ ನಲ್ಲಿ 37 ರನ್ ನೀಡಿ ಒಂದೂ ವಿಕೆಟ್ ಪಡೆಯದ ಮಿಥುನ್ ಅಂತಿಮ ಓವರ್ ನಲ್ಲಿ ಕೇವಲ ಎರಡು ರನ್ ನೀಡಿ ಐದು ವಿಕೆಟ್ ಪಡೆದರು. ಮೊದಲ ನಾಲ್ಕು ಎಸೆತಗಳಲ್ಲಿ ಹ್ಯಾಟ್ರಿಕ್ ಸಹಿತ ನಾಲ್ಕು ವಿಕೆಟ್ ಪಡೆದರೆ ಮುಂದಿನ ಎಸೆತದಲ್ಲಿ ವೈಡ್ ಮತ್ತು ಒಂಟಿ ರನ್ ತೆಗೆಯಲಾಯಿತು. ಅಂತಿಮ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದ ಅಭಿಮನ್ಯು ತನ್ನ ವಿಕೆಟ್ ಸಂಖ್ಯೆಯನ್ನು ಐದಕ್ಕೇರಿಸಿದರು.
ಹಿಮಾಂಶು ರಾಣಾ, ರಾಹುಲ್ ತಿವಾಟಿಯಾ, ಸುಮಿತ್ ಕುಮಾರ್, ಅಮಿತ್ ಮಿಶ್ರಾ, ಜಿತೇಶ್ ಸರೋಹಾ ಒಂದೇ ಓವರ್ ನಲ್ಲಿ ವಿಕೆಟ್ ಒಪ್ಪಿಸಿದವರು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಹರ್ಯಾಣ ತಂಡ ಚೈತನ್ಯ ಬಿಷ್ಣೋಯ್ ಮತ್ತು ಹಿಮಾಂಶು ರಾಣಾ ಬ್ಯಾಟಿಂಗ್ ಸಹಾಯದಿಂದ 20 ಓವರ್ ನಲ್ಲಿ 194 ರನ್ ಗಳಿಸಿದೆ.