ನವದೆಹಲಿ: ಮಾಜಿ ರಾಷ್ಟ್ರಪತಿ, ಪಶ್ಚಿಮಬಂಗಾಳದ ಹಿರಿಯ ಕಾಂಗ್ರೆಸ್ ಮುಖಂಡ ದಿ.ಪ್ರಣಬ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಸೋಮವಾರ (ಜುಲೈ 05) ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ನಾಯಕತ್ವ ಬದಲಾವಣೆ ಹಾದಿ ಬೀದಿಯ ಚರ್ಚೆ ವಿಷಯವಲ್ಲ: ಯತ್ನಾಳ್ ಗೆ ಕಟೀಲ್ ತಿರುಗೇಟು
ಜಾಂಗಿಪುರ್ ಲೋಕಸಭಾ ಕ್ಷೇತ್ರದ ಮಾಜಿ ಕಾಂಗ್ರೆಸ್ ಸಂಸದ ಕಳೆದ ಕೆಲವು ವಾರಗಳ ಹಿಂದೆ ತೃಣಮೂಲ ಕಾಂಗ್ರೆಸ್ ಮುಖಂಡರ ಜತೆ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲ ಕಳೆದ ತಿಂಗಳು ಅಭಿಜಿತ್ ಮುಖರ್ಜಿ ಅವರು ಟಿಎಂಸಿ ವರಿಷ್ಠ ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದರು.
ಮೂಲಗಳ ಪ್ರಕಾರ, ಅಂತಿಮ ನಿರ್ಧಾರವನ್ನು ತೆಗೆದುಕೊಂಡಿರುವ ಅಭಿಜಿತ್ ಮುಖರ್ಜಿ ಅವರು ಇಂದು ಸಂಜೆ ತೃಣಮೂಲ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿಸಿದೆ.
ಇತ್ತೀಚೆಗಷ್ಟೇ ಕೋಲ್ಕತಾದಲ್ಲಿ ಕೇಳಿ ಬಂದ ನಕಲಿ ಲಸಿಕೆ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಿಜಿತ್ ಮುಖರ್ಜಿ ಅವರು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದರು.
ಒಂದು ವೇಳೆ ನಕಲಿ ಲಸಿಕೆ ಅಭಿಯಾನದ ವಿಚಾರದಲ್ಲಿ ದೀದಿ ಮಮತಾ ಬ್ಯಾನರ್ಜಿ ಅವರ ಮೇಲೆ ಆರೋಪ ಹೊರಿಸುವುದಾದರೆ, ನೀರವ್ ಮೋದಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿಯಂತಹ ಪ್ರಕರಣಗಳಲ್ಲಿಯೂ ಮೋದಿ ಅವರನ್ನು ದೂಷಿಸಬೇಕಾಗುತ್ತದೆ. ಹೀಗಾಗಿ ಪಶ್ಚಿಮಬಂಗಾಳ ಸರ್ಕಾರದ ವಿರುದ್ಧ ಆರೋಪ ಸರಿಯಲ್ಲ ಎಂದು ಮುಖರ್ಜಿ ಟ್ವೀಟ್ ಮಾಡಿದ್ದರು.