Advertisement

ಡಿ.3ರಿಂದ ಕಲಬುರಗಿಯಿಂದಲೇ ಅಭಯ ಗೋಯಾತ್ರೆ

10:57 AM Oct 30, 2017 | Team Udayavani |

ಕಲಬುರಗಿ: ಗೋ ಸೇವೆ ಹೆಸರಿನಲ್ಲಿ ಸಂತರು ಮುಂದೆ ಬಂದಾಗ ಸಮಾಜದಲ್ಲಿ ಪರಿವರ್ತನೆ ಸಾಧ್ಯವಿದೆ ಎನ್ನುವುದನ್ನು ಮನಗಂಡು ಡಿಸೆಂಬರ್‌ 3ರಿಂದ ಜ.15ರವರೆಗೆ ಸಂತರ ನೇತೃತ್ವದಲ್ಲಿ ಅಭಯ ಗೋಯಾತ್ರೆ ಆಯೋಜಿಸಲಾಗಿದ್ದು, ಕಲಬುರಗಿಯಿಂದಲೇ ಯಾತ್ರೆ ಆರಂಭವಾಗಲಿದೆ ಎಂದು ಶ್ರೀ ರಾಮಂಚಂದ್ರಾಪುರ ಮಠದ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

Advertisement

ಕಲಬುರಗಿ ಉದನೂರ ರಸ್ತೆಯ ಜಯತೀರ್ಥ ಕಲ್ಯಾಣ ಮಂಟಪದಲ್ಲಿ ರವಿವಾರ ಆಯೋಜಿಸಲಾಗಿದ್ದ ಭಾರತೀಯ
ಗೋ ಪರಿವಾರದ ವತಿಯಿಂದ ಅಭಯಾಕ್ಷರ ಮತ್ತು ಅಭಯ ಗೋಯಾತ್ರೆಗಳ ಕುರಿತು ಸಮಾಲೋಚನೆ, ಸಂತ ಚಿಂತನಾ ಸಭೆ ಉದ್ದೇಶಿಸಿ ಅವರು ಆಶೀರ್ವಚನ ನೀಡಿದರು.

ಡಿ.3ರ ದತ್ತಜಯಂತಿ ದಿನ ಒಂದು ಸಾವಿರ ಮಠಾಧೀಶರ ಸಮ್ಮುಖದಲ್ಲಿ ಕಲಬುರಗಿಯಿಂದ ಯಾತ್ರೆ ಆರಂಭವಾಗಲಿದೆ. ಜ.14ರ ಮಕರ ಸಂಕ್ರಾಂತಿ ದಿನ ಬೆಂಗಳೂರಿನಲ್ಲಿ ಮುಕ್ತಾಯವಾಗಲಿದೆ. ಜ.20 ಹಾಗೂ 21ರಂದು ಅಭಯ
ಗೋಯಾತ್ರೆಯ ಮಹಾಮಂಗಲ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಎಷ್ಟೋ ಸಂತರು ಹೋರಾಟ ಮಾಡಿದ್ದಲ್ಲದೇ, ಬಲಿದಾನ ಮಾಡಿದರೂ ಸಹ ಗೋಮಾತೆ ವಧೆ ನಿಷೇಧವಾಗಿಲ್ಲ.
ಅಭಯಾಕ್ಷರ ಸಂಗ್ರಹದ ಉದ್ದೇಶದಿಂದಲೇ ಯಾತ್ರೆ ಆಯೋಜಿಸಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಸಂತರು ಮುಂದೆ ನಿಂತು ಮಾಡಬೇಕಿದೆ. ಗೋ ಪ್ರೇಮ, ಗೋ ರಕ್ಷೆ ಸಂತರ ಧರ್ಮವಾಗಿದ್ದು, ಇದುವೇ ಸಂತರಿಗೆ ಬಹುದೊಡ್ಡ ಶಕ್ತಿಯಾಗಿದೆ ಎಂದರು.

ಭಾರತೀಯ ಗೋಪರಿವಾರ ರಾಜ್ಯಾಧ್ಯಕ್ಷ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿಮಠದ ಶ್ರೀ ಪಾಂಡುರಂಗ ಮಹಾರಾಜ…, ಬೆಂಗಳೂರು ರಾಮೋಹಳ್ಳಿ ಸಿದ್ಧಾರೂಡ ಮಿಷನ್‌ ಆಶ್ರಮದ ಡಾ| ಆರೋಢ ಭಾರತೀ ಸ್ವಾಮೀಜಿ, ಅಲ್ಮೇಲ ಸ್ಥಾನಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಹಾಗೂ 50ಕ್ಕೂ ಹೆಚ್ಚು ಮಠಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತೀಯ ಗೋ ಪರಿವಾರದ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ| ವೈ.ವಿ. ಕೃಷ್ಣಮೂರ್ತಿ ಕಾರ್ಯಕ್ರಮದ ಮಾಹಿತಿ ನೀಡಿದರು. ಭಾರತೀಯ ಗೋ ಪರಿವಾರದ ಕಾರ್ಯದರ್ಶಿ ಮಧು ಗೋಮತಿ ನಿರೂಪಿಸಿದರು. ಸಂತ ಸೇವಕ ಸಮಿತಿಯ ಶಿಶಿರ ಹೆಗಡೆ ಸಹಕರಿಸಿದರು.

Advertisement

ಸಮಾಜ ಸೇವಕಿ ದಿವ್ಯಾ ಹಾಗರಗಿ ಜನರಿಂದ ಸಂಗ್ರಹಿಸಿದ 5 ಸಾವಿರ ಅರ್ಜಿಗಳನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗೆ ಹಸ್ತಾಂತರಿಸಿ, ಇನ್ನು 20ಸಾವಿರ ಸಹಿ ಸಂಗ್ರಹಿಸುವುದಾಗಿ ಹೇಳಿದರು. ಸಭೆಯಲ್ಲಿ ಕಲಬುರಗಿ ಪ್ರಾಂತ ಸಂಘಟನಾ ಕಾರ್ಯದರ್ಶಿ ರವಿ ಲಾತೂರಕರ್‌, ರಾಘವೇಂದ್ರ ಕೋಗನೂರು, ಕೃಷ್ಣ ಕುಲಕರ್ಣಿ, ತಮ್ಮಣಗೌಡ ಶಹಾಪುರ, ಶ್ರೀಗುರು ವಿದ್ಯಾಪೀಠದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ದಿಗ್ಗಾವಿ, ದಿವ್ಯಾ ಹಾಗರಗಿ, ಎಂ.ಎಸ್‌. ಪಾಟೀಲ ನರಿಬೋಳ, ಶ್ರೀಪಾದ ಜೋಷಿ, ಪದ್ಮನಾಭ ಜೋಷಿ, ಸಂಜೀವ ಜೋಷಿ, ರಮೇಶ ಜೋಷಿ, ಸುಮಂಗಲ ಚಕ್ರವರ್ತಿ, ಸಂಗೀತ ಮದುಕರ ನಾಯಕ್‌, ನಾಗಲಿಂಗಯ್ಯ ಮಠಪತಿ, ಡಾ| ರವಿ, ಮಹೇಶ ಚಟ್ನಳ್ಳಿ ಮತ್ತಿತರರು ಇದ್ದರು.

ಆಂದೋಲಾ ಸ್ವಾಮೀಜಿ ಬಂಧಿಸಿದರೆ ಪ್ರತಿಭಟನೆ

ಕಲಬುರಗಿ: ಧಾರ್ಮಿಕ ಕಾರ್ಯಗಳ ಜತೆಗೆ ಸಾಮಾಜಿಕವಾಗಿ ಹೋರಾಟದ ಮನೋಭಾವ ಹೊಂದಿರುವ ಆಂದೋಲಾ ಮಠದ ಸಿದ್ದಲಿಂಗ ಸ್ವಾಮೀಜಿ ಯಾವುದೇ ತಪ್ಪು ಮಾಡದಿದ್ದರೂ ವಿನಾಕಾರಣ ಬಂಧಿಸಿದರೆ ರಾಜ್ಯಾದ್ಯಂತ  ಠಾಧೀಶರು ರಸ್ತೆಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಎಚ್ಚರಿಕೆ ನೀಡಿದರು.ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮಠಗಳ ಮೇಲೆ ದೌರ್ಜನ್ಯ ನಡೆಸಿದರೆ ಯಾರೂ ಕೇಳುವುದಿಲ್ಲ ಎನ್ನುವ ಭಾವನೆ ತೊಲಗಿದೆ. ಸ್ವಾಮೀಜಿ ಮೇಲೆ ದೌರ್ಜನ್ಯ ನಡೆದರೆ ಸಂತ ಸಮೂಹವೇ ಹೋರಾಟ ಮಾಡಿ ಖಂಡಿಸುತ್ತದೆ. ವಿನಾಕಾರಣ ಮಠಗಳ ಮೇಲೆ ಪೊಲೀಸ್‌ ಇಲಾಖೆ ದೌಜನ್ಯ ನಡೆಸಿದರೆ ತಾವು ಸುಮ್ಮನಿರೋದಿಲ್ಲ ಎಂದರು.ಯಾರೋ ಪ್ರತಿಭಟನೆ ಮಾಡಿದರೆ ಹಿಂದೆ ಮುಂದೆ ವಿಚಾರಿಸದೆ ಆಂದೋಲಾ ಶ್ರೀ ಬಂಧಿಸಲು ಹೊರಟಿರುವುದು ಸಂವಿಧಾನ ಬದ್ಧವಲ್ಲ. ಕಾನೂನು ಎಲ್ಲರಿಗೂ ಒಂದೇ ಇರಬೇಕು. 

ಹಿಂದೂಗಳಿಗೆ ಒಂದು ಕಾನೂನು ಅನ್ಯ ಧರ್ಮಿಯರಿಗೆ ಮತ್ತೂಂದು ಕಾನೂನು ಏಕೆ? ಆಂದೋಲಾ ಸ್ವಾಮೀಜಿ ಬಂಧಿಸುವ ಕ್ರಮ ವಾಪಸ್‌ ಪಡೆಯಬೇಕು ಎಂದರು. ಗಂವಾರ ಮಠದ ಸೋಪಾನನಾಥ ಸ್ವಾಮೀಜಿ, ಜಿಲ್ಲಾ ಶಿವಾಚಾರ್ಯರ ಸಂಘದ ಅಧ್ಯಕ್ಷ ರೇವಣಸಿದ್ದ ಶಿವಾಚಾರ್ಯರು, ಪಾಳಾದ ಗುರುಮೂರ್ತಿ ಸ್ವಾಮೀಜಿ, ಎಂ.ಎಸ್‌.ಪಾಟೀಲ್‌ ನರಿಬೋಳ, ಮಲ್ಲಿಕಾರ್ಜುನ ಅದ್ವಾನಿ ಮುಂತಾದವರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next