ರಾಯಚೂರು: ಕೆಲ ವಿಚಾರವಾದಿಗಳು ಶ್ರೀ ಆಂಜನೇಯ ಸ್ವಾಮಿ ಆರಾಧನೆಯನ್ನು ಗುಲಾಮಗಿರಿ ಸಂಕೇತ ಎಂದು ಜರಿಯುತ್ತಾರೆ. ಆದರೆ, ನಾವು ಗುಲಾಮಗಿರಿಯಿಂದ ಮುಕ್ತಿ ಹೊಂದಬೇಕಾದರೆ ಆಂಜನೇಯ ಸ್ವಾಮಿಯನ್ನು ಆರಾಧಿಸಬೇಕು ಎಂದು ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು ಅಭಿಪ್ರಾಯ ಪಟ್ಟರು.
ಮಂತ್ರಾಲಯ ಹೊರವಲಯದಲ್ಲಿ ಸ್ಥಾಪಿಸಿದ ಅಭಯಾಂಜನೇಯ ಸ್ವಾಮಿ ಏಕಶಿಲಾ ಮೂರ್ತಿ ಲೋಕಾರ್ಪಣೆ ಸಮಾರಂಭದ ಬಳಿಕ ಆಶೀರ್ವಚನ ನೀಡಿದರು. ಬುದ್ಧಿ, ಮತಿಹೀನ, ಧೈರ್ಯ ಇಲ್ಲದ ವ್ಯಕ್ತಿ ಮಾತ್ರ ಗುಲಾಮನಾಗುತ್ತಾನೆ. ಆದರೆ, ಆಂಜನೇಯ ಸ್ವಾಮಿ ಉಪಾಸನೆಯಿಂದ ಬುದ್ಧಿ, ಧೈರ್ಯ, ಶಕ್ತಿ ಲಭಿಸುತ್ತದೆ. ಅಂಥ ದೇವರ ಆರಾಧನೆ ಎಂದಿಗೂ ಗುಲಾಮಗಿರಿಯ ಸಂಕೇತವಾಗಲು ಸಾಧ್ಯವಿಲ್ಲ ಎಂದರು.
ಆಂಜನೇಯ ಸ್ವಾಮಿ ಇದ್ದಲ್ಲಿ ಹರಿ ನೆಲೆಸುತ್ತಾನೆ. ಹರಿ ಇದ್ದಲ್ಲಿ ಆಂಜನೇಯ ಸ್ವಾಮಿ ಇರುತ್ತಾರೆ. ಭಗವಂತನ ಪೂಜೆಗೆ ಆಂಜನೇಯ ಸ್ವಾಮಿಯೇ ಮಾಧ್ಯಮವಾದರೆ, ಆಂಜನೇಯನ ಆರಾಧನೆಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳೇ ಮಾಧ್ಯಮವಾಗಿದ್ದಾರೆ. ಅಂಥ ಮುಖ್ಯ ಪ್ರಾಣ ದೇವರನ್ನು ಅಭಯಾಂಜನೇಯ ಹೆಸರಿನಲ್ಲಿ ಇಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂದರು.
ಭಗವಂತ ಎಲ್ಲೆಡೆ ವ್ಯಾಪಿಸಿದ್ದಾನೆ. ಆತನನ್ನು ಒಂದು ಮಾಧ್ಯಮದಲ್ಲಿ ಆರಾಧನೆ ಮಾಡಬೇಕು. ಜನಸಾಮಾನ್ಯರು ಪ್ರತಿಮಾ ಮಾಧ್ಯಮದಲ್ಲಿಯೇ ಭಗವಂತನನ್ನು ಆರಾಧಿ ಸಬೇಕು. ಅದು ಉತ್ತಮ ಮಾಧ್ಯಮವಾಗಿರಬೇಕು. ತರಂಗಗಳು ಗಾಳಿಯಲ್ಲಿ ಬೆರೆತರೂ ಕಣ್ಣಿಗೆ ಕಾಣುವುದಿಲ್ಲ. ಆದರೆ, ಟಿವಿ, ರೇಡಿಯೋ ಮೂಲಕ ಆ ತರಂಗಗಳು ತಮ್ಮ ಅಸ್ತಿತ್ವ ಸಾಕ್ಷಿಕರಿಸಲಿದೆ. ಆ ರೀತಿ ಎಲ್ಲೆಡೆ ಆವರಿಸಿರುವ ಭಗವಂತನನ್ನು ಕಾಣಬೇಕಾದರೆ ಮುಖ್ಯ ಪ್ರಾಣದೇವರೆಂಬ ಮಾಧ್ಯಮದ ಮೂಲಕ ಭಗವಂತನನ್ನು ಪ್ರತಿಷ್ಠಾಪಿಸಿ ಆರಾ ಧಿಸಬೇಕು ಎಂದರು.
ಹರಿವಾಯು ಗುರುಗಳ ಪ್ರೇರಣೆಯಿಂದಲೇ ಇಂಥ ಮಹತ್ಕಾರ್ಯಗಳು ನಡೆಯಲಿದೆ ವಿನಃ ನನ್ನನ್ನು ಸೇರಿದಂತೆ ಜನಸಾಮಾನ್ಯರಿಂದ ಸಾಧ್ಯವಿಲ್ಲ. ಆಂಜನೇಯ ಸ್ವಾಮಿಯೇ ದಾನಿಗಳ ಸ್ವಪ್ನದಲ್ಲಿ ಬಂದು ತಮಗೆ ಬೇಕಾದ ಸೇವೆ ಮಾಡಿಸಿಕೊಂಡಿದ್ದಾನೆ. ದಾನಿಗಳ ಸೇವೆಯಿಂದಲೇ ಇಂಥ ಕಾರ್ಯ ಮಾಡಲು ಸಾಧ್ಯವಾಗಿದೆ ಎಂದರು.
ಹೈಕೋರ್ಟ್ ನ್ಯಾಯಮೂರ್ತಿಗಳಾದ ಅರವಿಂದ ಕುಮಾರ, ಶ್ರೀನಿವಾಸ ಹರೀಶ ಕುಮಾರ, ವಿ.ಶ್ರೀಶಾನಂದ, ಏಕಶಿಲಾ ಶ್ರೀ ಅಭಯ ಆಂಜನೇಯ ದೇವಸ್ಥಾನದ ದಾನಿಗಳು ಹಾಗೂ ದೇವಸ್ಥಾನ ನಿರ್ಮಿಸಿದ ಬೆಂಗಳೂರಿನ ಬಿ.ಕೃಷ್ಣಮೂರ್ತಿ, ಶ್ರೀಮಠದ ವಿದ್ವಾಂಸ ಡಾ| ರಾಜಾ ಎಸ್.ಗಿರಿರಾಜಾಚಾರ್, ಶ್ರೀಗಳ ಆಪ್ತ ಕಾರ್ಯದರ್ಶಿ ಸುಶಮೀಂದ್ರಾಚಾರ್, ಶ್ರೀಮಠದ ಸಂಸ್ಕೃತ ವಿದ್ಯಾಪೀಠದ ಪ್ರಾಚಾರ್ಯ ಎನ್. ವಾದಿರಾಜಾಚಾರ್ ಸೇರಿದಂತೆ ಮಠದ ಸಿಬ್ಬಂದಿ ಇದ್ದರು.