ಬೆಳ್ತಂಗಡಿ: ಕೆಲವು ವರ್ಷಗಳಿಂದ ಕತಾರ್‌ನಲ್ಲಿ ವಾಹನ ಚಾಲಕ ವೃತ್ತಿಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಕಿಲ್ಲೂರು, ನಾಡ ಎಂಬಲ್ಲಿನ ಅಬ್ದುಲ್ ಹಮೀದ್ ಎಂಬವರು ವಿದೇಶಿಯೊಬ್ಬರಿಂದ ಲಭಿಸಿದ ಹೆಚ್ಚಿನ ವೇತನದ ಬೇರೊಂದು ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಇದ್ದ ಕೆಲಸವನ್ನೂ ಬಿಟ್ಟು, ಹೆಚ್ಚಿನ ವೇತನ ಸಿಗುವ ಹೊಸ ಕನಸುಗಳೊಂದಿಗೆ ಆ ಹೊಸ ಉದ್ಯೋಗವನ್ನು ಗಿಟ್ಟಿಸಿಕೊಂಡರು. ಕೆಲ ಕಾಲದ ಪರಿಚಯಸ್ಥನಾದುದರಿಂದ ಹಿಂದೆ ಮುಂದೆ ನೋಡದೆ ಕೆಲಸಕ್ಕೆ ಸೇರಿಕೊಂಡರು. ಸಾಮಾನ್ಯವಾಗಿ 10-12 ಗಂಟೆಗಳಷ್ಟಿರುವ ಕೆಲಸವು ಪ್ರಾರಂಭದಿಂದಲೇ ಇಮ್ಮಡಿಯಷ್ಟಾದರೂ ಸುಧಾರಿಸಿಕೊಂಡರು. ಇತರ ಕೆಲವು ಚಾಲಕರು ರಜೆಯಲ್ಲಿದ್ದಾರೆ, ಕೆಲವೇ ದಿನಗಳಲ್ಲಿ ಅವರು ಬಂದುಬಿಡುತ್ತಾರೆ ಸಾವರಿಸಿಕೊಳ್ಳಿ ಅಂತ ಸಮಜಾಯಿಷಿ ನೀಡಿದರು.
ಅನಂತರದ ದಿನಗಳಲ್ಲಿ ಕಡಿಮೆಯೆಂದರೆ ದಿನಕ್ಕೆ 20 ಗಂಟೆಗಳಷ್ಟಾದರೂ ದುಡಿಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಹೀಗೆ 2-3 ತಿಂಗಳು ಕಳೆದು ತನ್ನ ಅಸಹಾಯಕ ವೇದನೆಗೆ ಯಾವುದೇ ಮಾನ್ಯತೆ ಸಿಗದೇ ಇದ್ದಾಗ, ತನಗೆ ಈ ಉದ್ಯೋಗ ಮಾಡಲಾಗುವುದಿಲ್ಲ, ಊರಿಗೆ ಕಳಿಸಿ ಬಿಡಿ ಎಂಬ ಕಠಿನ ನಿರ್ಧಾರಕ್ಕೆ ಬಂದರು. ಅಂಗಲಾಚಿದರೂ ತನ್ನ
ಮಾಲಕರು ಕಿವಿಗೊಡಲಿಲ್ಲ. ಹೀಗೆ ಮೋಸಕ್ಕೆ ಬಲಿಯಾಗಿದ್ದೇನೆಂದು ಖಚಿತಗೊಂಡು ಪ್ರತಿಭಟನೆಯೇ ಕೊನೆಯ ಅಸ್ತ್ರವೆಂದುಕೊಂಡು ಕೆಲಸಕ್ಕೆ ಹಾಜರಾಗದೆ ತನ್ನ ವಸತಿ ಸ್ಥಳದಲ್ಲೇ ಕಳೆದರು. ರಾಯಭಾರಿ ಕಚೇರಿ ಮತ್ತು ಇತರ ಕಚೇರಿಗಳಿಗೆ ಹಲವು ಬಾರಿ ಅಲೆದಾಡಿ ಯಾವುದೇ ಪ್ರಯೋಜನವಾಗಲಿಲ್ಲ. ಅತ್ತ ಮಾಲಕರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ತನ್ನ ಕಷ್ಟವನ್ನು ಊರಿನ ಮತ್ತು ಇತರ ಗಲ್ಫ್ ರಾಷ್ಟ್ರಗಳಲ್ಲಿರುವ ಸ್ನೇಹಿತರಲ್ಲಿ ಹೇಳಿಕೊಂಡಿದ್ದರು.
ಈ ಸಂಕಷ್ಟವನ್ನು ಮನಗಂಡ ಸೌದಿಯಲ್ಲಿರುವ ಅವರ ಸ್ನೇಹಿತರಲ್ಲಿ ಯಾರೋ ಒಬ್ಬರು ಅಲ್ಲಿನ ಕೆಸಿಎಫ್ ನಾಯಕರ ಗಮನಕ್ಕೆ ತಂದರು. ಕಾರ್ಯದರ್ಶಿ ಅಬ್ದುರ್ರಹೀಂ ಸಅದಿ ಮತ್ತು ಸಾಂತ್ವನ ವಿಭಾಗದ ನಾಯಕ ಅಬ್ದುಲ್ ರಜಾಕ್ ಮುಂಡ್ಕೂರು ಅವರು ಫಾರೂಕ್ ಕೃಷ್ಣಾಪುರ , ಇಮ್ರಾನ್ ಕೂಳೂರು ಇವರ ಸಹಕಾರದೊಂದಿಗೆ ಅವರಿಗೆ ಬೇಕಾದ ಎಲ್ಲ ದಾಖಲೆಗಳನ್ನು ವಾರದೊಳಗೆ ಸರಿಪಡಿಸಿ, ಕಂಪೆನಿಯಿಂದ ಪಾಸ್‌ಪೋರ್ಟ್ ಪಡೆದು, ಎಕ್ಸಿಟ್ ವ್ಯವಸ್ಥೆಯೊಂದಿಗೆ ಆ.4 ರಂದು ಊರಿಗೆ ಕಳಿಸಿ ಕೊಟ್ಟಿದ್ದಾರೆ.