ಬೆಂಗಳೂರು: ಕಳ್ಳ ಮಾಲು ವಿಲೇವಾರಿಗೆ ಸಂಬಂಧಿಸಿದ ಹಣಕಾಸು ವ್ಯವಹಾರದಲ್ಲಿ 40 ವರ್ಷದ ಮಹಿಳೆ ಹಾಗೂ ಆಕೆಯ ಪುತ್ರನನ್ನು ಅಪಹರಿಸಿದ ಆರೋಪದಡಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ರೌಡಿ ಶೀಟರ್‌ಗಳು ಸೇರಿ 9 ಮಂದಿ ಆರೋಪಿಗಳನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಂದ್ರಾಲೇಔಟ್ ಠಾಣೆ ರೌಡಿ ಶೀಟರ್‌ಗಳಾದ ಜೋಸೆಫ್ (35), ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನಾ (30) ಮತ್ತು ಸೌಮ್ಯಾ (34), ಪ್ರತಾಪ್ (30), ಜತಿನ್(28), ವಿಘ್ನೇಶ್, ಆಟೋ ಚಾಲಕ ಸೈಯದ್ ಶಹಬುದ್ದೀನ್ (32), ಸ್ವಾತಿ (28) ಹಾಗೂ ಮಾದೇಶ್ (28) ಬಂಧಿತರು.
ಆರೋಪಿಗಳು ಆ.13ರಂದು ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯಿಂದ 40 ವರ್ಷದ ಮಹಿಳೆ ಹಾಗೂ ಆತನ ಪುತ್ರ ವರುಣ್ (20) ಎಂಬವ ರನ್ನು ಅಪಹರಿಸಿ 3 ದಿನ ಅಕ್ರಮವಾಗಿ ಗೃಹ ಬಂಧನದಲ್ಲಿರಿಸಿಕೊಂಡು ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಪೊಲೀಸರು ಹೇಳಿದರು.
ಏನಿದು ಪ್ರಕರಣ?: ದೂರುದಾರ ಮಹಿಳೆ ಮತ್ತು ಆಕೆಯ ಪುತ್ರ ವರುಣ್, ಕಳವು ಮೊಬೈಲ್ ಹಾಗೂ ಚಿನ್ನಾಭರಣಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಿಕೊಂಡಿದ್ದಾರೆ. ಶಕ್ತಿ ಮತ್ತು ಬಸವರಾಜು ಎಂಬುವರು ಕದ್ದ ವಸ್ತುಗಳನ್ನು ವಿಲೇವಾರಿ ಮಾಡಲು ವರುಣ್‌ಗೆ ನೀಡುತ್ತಿದ್ದರು. ವರುಣ್ ತನ್ನ ತಾಯಿಯ ಮೂಲಕ ಈ ವಸ್ತುಗಳನ್ನು ವಿಲೇವಾರಿ ಮಾಡಿಸುತ್ತಿದ್ದ.
ಈ ವಿಚಾರ ತಿಳಿದುಕೊಂಡ ರೌಡಿ ಶೀಟರ್‌ಗಳಾದ ಜೋಸೆಫ್ ಮತ್ತು ಪಾಗಲ್ ಸೀನ, ವರುಣ್ ಮತ್ತು ಆಕೆಯ ತಾಯಿಗೆ 2 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ. ಅವರು ಕೊಡಲು ನಿರಾಕರಿಸಿದಾಗ ತಮ್ಮ ಸಹಚರ ರೊಂದಿಗೆ ಆ.13ರಂದು ಚಂದ್ರಾಲೇ ಔಟ್‌ನಿಂದ ತಾಯಿ-ಮಗನನ್ನು ಅಪಹರಣ ಮಾಡಿದ್ದರು. ಬಳಿಕ ಕೆಂಗೇರಿಯ ಪ್ರತಾಪ್ ಮತ್ತು ಸೌಮ್ಯಾ ಮನೆಯಲ್ಲಿ ಅಕ್ರಮವಾಗಿ ಗೃಹ ಬಂಧನದಲ್ಲಿರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ತಾಯಿ-ಮಗನ ಅಕ್ರಮ ಗೃಹ ಬಂಧನದ ವೇಳೆ ಆರೋಪಿಗಳು ಇಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿ ದ್ದರು. ಈ ವೇಳೆ ವರುಣ್ ತಾಯಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, 2 ಲಕ್ಷ ರೂ. ಬೇಡಿಕೆ ಇರಿಸಿದ್ದರು. ಬಳಿಕ ಇವರ ಬಳಿ ಹಣ ಇಲ್ಲ ಎಂಬುದನ್ನು ತಿಳಿದುಕೊಂಡು ಆ.16ರಂದು ಬಿಟ್ಟು ಕಳುಹಿಸಿದ್ದರು. ಬಳಿಕ ಮಹಿಳೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿ 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.