Advertisement

ಹುಟ್ಟಿದ ಕೂಡಲೇ ಅಪಹರಣವಾಗಿದ್ದ ಮಗು 22 ದಿನಗಳ ನಂತರ ತಾಯಿ ಮಡಿಲಿಗೆ

07:52 PM Apr 06, 2022 | Team Udayavani |

ದಾವಣಗೆರೆ:ಜನಿಸಿದ ಎರಡು ಗಂಟೆಯೊಳಗೆ ಅಪಹರಣಕ್ಕೆ ಒಳಗಾಗಿದ್ದ ಮುದ್ದಾದ ಗಂಡು ಮಗು 22  ದಿನಗಳ ನಂತರ ಬುಧವಾರ ತಾಯಿಯ ಮಡಿಲು ಸೇರಿದೆ.

Advertisement

ಹರಪನಹಳ್ಳಿ ಯ ಇಸ್ಮಾಯಿಲ್ ಜಬೀವುಲ್ಲಾ ಅವರ ಪತ್ನಿ ಉಮ್ಮೆಸಲ್ಮಾ ಮಾ.16 ರಂದು ದಾವಣಗೆರೆಯ ಚಾಮರಾಜಪೇಟೆಯಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಅಂದು ಸಂಜೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ತೂಕ ಕಡಿಮೆ ಇದೆ ಎಂದು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಅದೇ ದಿನ ರಾತ್ರಿ 8.45 ರ ಸಮಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಗುವಿನ ತಂದೆ ಜಬೀವುಲ್ಲಾಗೆ ಬಟ್ಟೆ ತರಲು ಹೇಳಿದ್ದರು. ಬಟ್ಟೆಗಳನ್ನು ತಂದಾಗ, ಮಗುವನ್ನು ನಿಮ್ಮ ಕಡೆಯವರೆಗೆ ಕೊಡಲಾಗಿದೆ ಎಂದು ಸಿಬ್ಬಂದಿ ಹೇಳಿದರು. ಆದರೆ, ಮಗು ಎಲ್ಲಿಯೂ ಇರಲಿಲ್ಲ. ಆಸ್ಪತ್ರೆಯ ಎಲ್ಲ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಅಂತಿಮವಾಗಿ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.

ಮಗುವಿನ ಪತ್ತೆಗಾಗಿ ಇನ್ನಿಲ್ಲದ ಯತ್ನ ನಡೆಯುತ್ತಿರುವ ಮಧ್ಯೆಯೇ ಅಚ್ಚರಿ ಎಂಬಂತೆ ಅಪಹರಣಕ್ಕೆ ಒಳಗಾಗಿದ್ದ ಮಗು ದಾವಣಗೆರೆಯ ಹರಿಹರದ ಕಡೆಗೆ ತೆರಳುವ ಬಸ್ ನಿಲ್ದಾಣ ಬಳಿ  ಪತ್ತೆಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

ಬುರ್ಖಾಧಾರಿ ಮಹಿಳೆಯೊಬ್ಬರು ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ವೃದ್ಧೆಯೊಬ್ಬ ಕೈಗೆ ಮಗು ಕೊಟ್ಟು ಹೋದವರು ಎರಡು ಗಂಟೆಯಾದರೂ ಬರದೇ ಹೋದಾಗ ಅನುಮಾನಗೊಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಗುವನ್ನು ಪಡೆದು ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿದ್ದರು.

ಮಗು ಕಳೆದುಕೊಂಡಿರುವ ಇಸ್ಮಾಯಿಲ್ ಜಬೀವುಲ್ಲಾ ಅವರ ಪತ್ನಿ ಉಮ್ಮೆಸಲ್ಮಾ ಆಸ್ಪತ್ರೆಗೆ ತೆರಳಿ ಸಿಕ್ಕಿರುವ ಮಗು ತಮ್ಮದೇ ಎಂದು ಗುರುತಿಸಿದ್ದಾರೆ. ಆದರೆ, ಡಿಎನ್‌ಎ ಪರೀಕ್ಷೆಯ ನಂತರವೇ ಮಗುವನ್ನು ಪೋಷಕರ ವಶಕ್ಕೆ ನೀಡುವುದಾಗಿ ಪೊಲೀಸರು ತಿಳಿಸಿದ್ದರು.

Advertisement

ಈ ನಡುವೆ ದಾವಣಗೆರೆಯ ಆಜಾದ್ ನಗರದ ಮಹಿಳೆಯೊಬ್ಬರನ್ನ ಸಂಘಟನೆಯವರು ಅನುಮಾನದಿಂದ ವಿಚಾರಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಂಗಳವಾರ ಸಂಜೆ ಠಾಣೆಗೆ ಕರೆಸಿ, ಪೊಲೀಸರು ವಿಚಾರಣೆ ನಡೆಸಿದ್ದರು. ಬುಧವಾರ ಮತ್ತೊಮ್ಮೆ ವಿಚಾರಣೆಗೆ ಒಳಪಡಿಸಿದಾಗ ಮಗುವನ್ನು ಕದ್ದಿದ್ದು ತಾನೇ ಎಂದು ಮಹಿಳೆ ಒಪ್ಪಿಕೊಂಡಿದ್ದಾರೆ.

ಮಗುವನ್ನು ಕಳವು ಮಾಡಿರುವುದಾಗಿ ಆರೋಪಿತ ಮಹಿಳೆ ಒಪ್ಪಿಕೊಂಡಿದ್ದರಿಂದ ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸದೆ ಬುಧವಾರ ಸಂಜೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಇಸ್ಮಾಯಿಲ್ ಜಬೀವುಲ್ಲಾ ಅವರ ಪತ್ನಿ ಉಮ್ಮೆಸಲ್ಮಾ ಅವರಿಗೆ ಮಗುವನ್ನು ಹಸ್ತಾಂತರಿಸಿದರು.ಜನಿಸಿದ ಕೆಲವೇ ಹೊತ್ತಿನಲ್ಲಿ ಕಾಣೆಯಾಗಿದ್ದ ಮಗು ಮತ್ತೆ ಮಡಿಲು ಸೇರಿದಾಗ ತಾಯಿ ಉಮ್ಮೆಸಲ್ಮಾ ಅವರ ಸಂತೋಷ ಹೇಳ ತೀರದ್ದಾಗಿತ್ತು. ಕೊನೆಗೂ ನವಜಾತ ಶಿಶುವಿನ ಅಪಹರಣ ಪ್ರಕರಣ ಸುಖಾಂತ್ಯಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next