Advertisement

ವೀರ ರಾಣಿ ಅಬ್ಬಕ್ಕ  ಮಹಿಳೆಯರ ಸ್ವಾಭಿಮಾನದ ಸಂಕೇತ: ಖಾದರ್‌

12:38 PM Aug 06, 2018 | |

ಮಹಾನಗರ : ವೀರ ರಾಣಿ ಅಬ್ಬಕ್ಕ ಮಹಿಳೆಯರ ಸ್ವಾಭಿಮಾನದ ಸಂಕೇತವಾಗಿದ್ದು, ಅಬ್ಬಕ್ಕಳ ವ್ಯಕ್ತಿತ್ವ ಪರಿಚಯ ಸಮಾಜಕ್ಕೆ ಆಗಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು. ವೀರ ರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ನಡೆದ ‘ನಮ್ಮ ಅಬ್ಬಕ್ಕ-ಆಷಾಢ ವೈಭವ’ ಕಾರ್ಯಕ್ರಮ, ‘ಅಬ್ಬಕ್ಕ ಸೇವಾ ಪುರಸ್ಕಾರ’ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಅಬ್ಬಕ್ಕ ವಿಚಾರದಲ್ಲಿ ಎಲ್ಲ ಜಾತಿ, ಮತ ಬಾಂಧವರು ಏಕತೆ, ಸಹೋದರತೆಯನ್ನು ಪ್ರದರ್ಶಿಸಬೇಕು. ಅಬ್ಬಕ್ಕನ ಹೆಸರಿನಿಂದ ಒಗ್ಗಟ್ಟಾಗಬೇಕೇ ಹೊರತು ಬಿಕ್ಕಟ್ಟಾಗಬಾರದು. ಮುಂದಿನ ದಿನಗಳಲ್ಲಿ ಉಳ್ಳಾಲದಲ್ಲಿ ಅಬ್ಬಕ್ಕ ಸರ್ಕಲ್‌ ಸೌಂದರ್ಯಕ್ಕೆ 10 ಲಕ್ಷ ರೂ. ಮೀಸಲಿಟ್ಟಿದ್ದೇವೆ. ಅದೇ ರೀತಿ ಉಳ್ಳಾಲ ಬಸ್‌ ನಿಲ್ದಾಣದ ಪಕ್ಕ ಅಬ್ಬಕ್ಕ ಭವನಕ್ಕೆ ಜಾಗ ಗುರುತಿಸಲಾಗಿದ್ದು, ಹಣ ಬಿಡುಗಡೆಯಾಗಿದೆ. ಕೂಡಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಲೇಡಿಗೋಶನ್‌ ಆಸ್ಪತ್ರೆಗೆ ಅಬ್ಬಕ್ಕ ಹೆಸರು
ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಮಾತನಾಡಿ, ಅಬ್ಬಕ್ಕ ಪರಾಕ್ರಮ ಮಹಿಳೆಯಾಗಿ ತನ್ನ ಆಸ್ಥಾನದಲ್ಲಿ ಕತ್ತಿ ವರಸೆಯಲ್ಲಿ ಪ್ರಮುಖಳಾಗಿ ಜನರ ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಮುಂದಿನ ದಿನಗಳಲ್ಲಿ ನಗರದ ಲೇಡಿಗೋಶನ್‌ ಆಸ್ಪತ್ರೆಗೆ ರಾಣಿ ಅಬ್ಬಕ್ಕ ಅವರ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದು ಹೇಳಿದರು.

ಹಂಪಿ ವಿವಿಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ| ಎ.ವಿ. ನಾವಡ ಅವರು ಆಶಯ ಭಾಷಣ ಮಾಡಿದರು. ಹಿರಿಯ ಸಮಾಜ ಸೇವಕಿ ಸುವಾಸಿನಿ ಬಬ್ಬುಕಟ್ಟೆ ಅವರಿಗೆ ರಾಣಿ ಅಬ್ಬಕ್ಕ ಸೇವಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮ ದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿದ್ದರು.

ಹಿರಿಯ ಸಾಹಿತಿ ಡಾ| ಬಿ.ಎ. ವಿವೇಕ್‌ ರೈ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ಶ್ರೀದೇವಿ ಎಜುಕೇಶನ್‌ ಟ್ರಸ್ಟ್‌ ಆಡಳಿತ ನಿರ್ದೇಶಕಿ ಮೈನಾ ಎಸ್‌. ಶೆಟ್ಟಿ, ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕುಕ್ಕುವಳ್ಳಿ, ಪ್ರ.ಸಂಚಾಲಕ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕೋಶಾಧಿಕಾರಿ ಪಿ.ಡಿ. ಶೆಟ್ಟಿ, ಉಪಾಧ್ಯಕ್ಷ ಕೆ. ತಾರಾನಾಥ ರೈ, ನಮಿತಾ ಶ್ಯಾಮ್‌, ಎಸ್‌.ಎಸ್‌. ನಾಯಕ್‌, ರತ್ನಾಕರ ಜೈನ್‌, ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್‌, ಕೋಶಾಧಿಕಾರಿ ನಿರ್ಮಲ್‌ ಕುಮಾರ್‌ ವೈ., ಸಂಚಾಲಕ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸದಸ್ಯ ಸತೀಶ್‌ ಸುರತ್ಕಲ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಸರಕಾರಿ ಕಟ್ಟಡಕ್ಕೆ  ರಾಣಿ ಅಬಕ್ಕ ಹೆಸರು
ಶಾಸಕ ಯು.ಟಿ. ಖಾದರ್‌ ಅವರು ಇದೇ ವೇಳೆ ಮಾತನಾಡಿ, ಲೇಡಿಗೋಶನ್‌ ಆಸ್ಪತ್ರೆಗೆ ರಾಣಿ ಅಬ್ಬಕ್ಕ ಹೆಸರು ನಾಮಕರಣ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ, ಈಗಿರುವ ಹೆಸರನ್ನು ತೆಗೆದು ಬೇರೆ ಹೆಸರಿಡುವುದು ಸರಿಯಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಸರಕಾರದಿಂದ ಸ್ಥಾಪಿತವಾಗುವ ಕಟ್ಟಡಕ್ಕೆ ರಾಣಿ ಅಬ್ಬಕ್ಕ ಹೆಸರು ಇಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next