ಬೆಂಗಳೂರು: ಕನ್ನಡದ ವೀರ ವನಿತೆ ರಾಣಿ ಅಬ್ಬಕ್ಕ ದೇವಿಯ ಜೀವನಾಧಾರಿತ ಸಿನಿಮಾ ಒಂದು ಬಹುಕೋಟಿ ವೆಚ್ಚದಲ್ಲಿ ತೆರೆ ಮೇಲೆ ಬರಲು ತಯಾರಿ ನಡೆಸುತ್ತಿದೆ. ಆ್ಯಕ್ಟ್ 1978 ಚಿತ್ರದ ಬಿಡುಗಡೆಯ ನಂತರ ನಿರ್ದೇಶಕ ಮಂಸೋರೆ ಸ್ಯಾಂಡಲ್ ವುಡ್ ನಲ್ಲಿ ಈ ಹೊಸ ಪ್ರಯತ್ನ ವೊಂದಕ್ಕೆ ಕೈ ಹಾಕಿದ್ದಾರೆ.
ಯಾರವಳು ರಾಣಿ ಅಬ್ಬಕ್ಕ
ಅಬ್ಬಕ್ಕ ರಾಣಿ ಅಲಿಯಾಸ್ ಉಳ್ಳಾಲದ ರಾಣಿ ಎಂದೇ ಹೆಸರು ವಾಸಿಯಾಗಿರುವ ವೀರ ವನಿತೆ ಈಕೆ. 16ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ಜೀವಿಸಿದ್ದ ವೀರ ಸೇನಾನಿ. ಸಮುದ್ರ ಯುದ್ಧನೀತಿಯಲ್ಲಿ ನೈಪುಣ್ಯತೆಯನ್ನು ಹೊಂದಿದ ಏಕೈಕ ರಾಣಿ ಎಂಬ ಕೀರ್ತಿಗೆ ಪಾತ್ರಳಾಗಿರುವ ಈಕೆ ಸತತ 25 ವರ್ಷಗಳ ಕಾಲ ಯುದ್ದಗಳನ್ನು ಮಾಡುತ್ತಲೇ ತನ್ನ ಸಾಮ್ರಾಜ್ಯ ಕಟ್ಟಿದವಳು.
ಈಕೆಯ ಕುರಿತಾಗಿ ಮಾಡಲಾಗುತ್ತಿರುವ ಚಿತ್ರಕ್ಕೆ ಅಬ್ಬಕ್ಕ ಎಂಬ ಹೆಸರಿಡಲಾಗಿದ್ದು, ‘ಅರಬ್ಬಿ ಸಮುದ್ರದ ಅಭಯದ ರಾಣಿ’ ಎಂಬ ಟ್ಯಾಗ್ ಲೈನ್ ನೀಡಲಾಗಿದೆ. ಬಾಲಿವುಡ್ ನಲ್ಲಿ ಮಣಿಕರ್ಣಿಕಾ ತೆಲುಗಿನಲ್ಲಿ ರುದ್ರಮ್ಮದೇವಿ ಸೇರಿದಂತೆ ಹಲವಾರು ವೀರ ಸೇನಾನಿಗಳ ಕಥೆ ಈಗಾಗಲೆ ತೆರೆ ಮೇಲೆ ಬಂದಿದ್ದು ಸ್ಯಾಂಡಲ್ ವುಡ್ ನಲ್ಲಿ ಇದೊಂದು ಹೊಸ ಪ್ರಯತ್ನವಾಗಿದೆ.
ಇದನ್ನೂ ಓದಿ:ಲಸಿಕೆ ನೀಡಲು ಆರೋಗ್ಯ ಇಲಾಖೆ ಸಜ್ಜು
ಅಬ್ಬಕ್ಕನ ಕುರಿತಾಗಿ ಸಿನಿಮಾ ಮಾಡಲು ನನಗೆ ಪ್ರೇರಣೆಯಾಗಿರುವುದೆ ಆಕೆಯ ಜಲಮಾರ್ಗದ ಯುದ್ಧ ಪರಿಣಿತಿ. ಕಳೆದ ಮೂರು ವರ್ಷಗಳಿಂದ ನಾನು ಈ ಕುರಿತು ಅಧ್ಯಯನ ಮಾಡುತ್ತಿದ್ದೆ . ಈಗ ಈಕೆಯ ಕುರಿತು ಸಿನಿಮಾ ಮಾಡಲು ಕಾಲ ಕೂಡಿ ಬಂದಿದೆ ಎಂದು ನಿರ್ದೇಶಕ ಮಂಸೋರೆ ಹೇಳಿದ್ದಾರೆ.
ಚಿತ್ರ ಕನ್ನಡ, ತುಳು , ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಮೂಡಿಬರಲಿದೆ. ಹೀಗಾಗಿ ಎಲ್ಲಾ ಭಾಷೆಯ ಜನರಿಗೂ ಪರಿಚಿತವಾಗಿರುವ ನಟಿಯನ್ನೆ ಅಬ್ಬಕ್ಕನ ಪಾತ್ರಕ್ಕೆ ಆಯ್ಕೆ ಮಾಡಲಾಗುವುದು ಎಂದು ನಿರ್ದೇಶಕ ಮಂಸೋರೆ ತಿಳಿಸಿದ್ದಾರೆ.
ಈ ಮಂಸೋರೆ ಜೊತೆಗೆ ಕೆಲಸ ಮಾಡಿರುವ ಆ್ಯಕ್ಟ್ 1978 ತಾಂತ್ರಿಕ ತಂಡ ಅಬ್ಬಕ್ಕ ಚಿತ್ರದಲ್ಲೂ ಮುಂದುವರೆಯಲಿದ್ದು, ಛಾಯಾಗ್ರಹಣದಲ್ಲಿ ಸತ್ಯ ಹೆಗಡೆ ಕಾರ್ಯನಿರ್ವಹಿಸಲಿದ್ದಾರೆ. ಸಂಗೀತ ನಿರ್ದೇಶನದಲ್ಲಿ ಅಜನೀಶ್ ಲೋಕ್ ನಾಥ್ ಹೊಸದಾಗಿ ತಂಡಕ್ಕೆ ಸೇರಿಕೊಳ್ಳಲಿದ್ದಾರೆ.