Advertisement

ಜಮೀನು ಗುತ್ತಿಗೆ ಕೊಡುವ ನಿರ್ಧಾರ ಕೈಬಿಡಿ

05:51 PM Oct 20, 2022 | Team Udayavani |

ಬಳ್ಳಾರಿ: ಜಮೀನನ್ನು ಗುತ್ತಿಗೆ ಆಧಾರದಲ್ಲಿ ಕೊಡುವ ಸರ್ಕಾರದ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಅಖೀಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

Advertisement

ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಜನರು ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ವಿವಿಧ ಘೋಷಣೆಗಳನ್ನು ಕೂಗಿದರು. ಕೂಡಲೇ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದರು. ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ, ಖಾತೆ ಮಾಡಿಕೊಡುವುದು, ರೈತರ ಮೇಲಿನ ಭೂಕಬಳಿಕೆ ಕೇಸುಗಳನ್ನು ವಾಪಸ್‌ ತೆಗೆದುಕೊಳ್ಳುವುದು ಹಾಗೂ ಇನ್ನಿತರೆ ಹಕ್ಕೊತ್ತಾಯಗಳನ್ನು ಸಂಬಂಧಪಟ್ಟ ಮಂತ್ರಿಗಳು ಹಾಗೂ ಅಧಿ ಕಾರಿಗಳೊಂದಿಗೆ ಮಾತನಾಡಿ ಬಗೆಹರಿಸಿಕೊಡಲಾಗುವುದು ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎಐಕೆಕೆಎಂಎಸ್‌ ನಿಯೋಗಕ್ಕೆ ಭರವಸೆ ನೀಡಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಬಗರ್‌ ಹುಕುಂ ಸಾಗುವಳಿಯು ಭೂ ಕಬಳಿಕೆಯಲ್ಲ. ಬಂಡವಾಳಶಾಹಿಗಳು ಹಾಗೂ ಕಂಪನಿಗಳು ಭೂಮಿಯನ್ನು ಆಕ್ರಮಿಸಿಕೊಳ್ಳುವುದು ಭೂಕಬಳಿಕೆ. ಬಡ ರೈತರು ಭೂಮಿ ಕೇಳುವುದು ನೈತಿಕ ಹಕ್ಕು. ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ.ಬಡ ರೈತರ ಪರವಾಗಿ ನಿಲ್ಲಬೇಕಾದುದು ಸರ್ಕಾರದ ಕರ್ತವ್ಯ. ಇಂದು ಸಣ್ಣ ರೈತರು ಕಾರ್ಮಿಕರಾಗುತ್ತಿದ್ದಾರೆ.

ಅವರು ಹರಿವ ನೀರಿನಂತೆ ಕೆಲಸ ಹುಡುಕಿಕೊಂಡು ವಲಸೆ ಹೋಗುತ್ತಿದ್ದಾರೆ. ಅಂಥ ರೈತರ ಪರವಾಗಿ ನಿಲ್ಲಬೇಕಾದುದು ಸರ್ಕಾರದ ಕರ್ತವ್ಯ. ಆದ್ದರಿಂದ ರೈತರಿಗೆ ಭೂಮಿಯನ್ನು ಗುತ್ತಿಗೆ ಕೊಡುವ ಬದಲು ಹಕ್ಕುಪತ್ರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಎಸ್‌ಯುಸಿಐ (ಕಮ್ಯುನಿಸ್ಟ್‌) ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಉಮಾ ಮಾತನಾಡಿ, ರೈತರು ಯಾವುದೇ ಲಾಭದಾಸೆಗಳಿಲ್ಲದೆ, ಹೊಟ್ಟೆಪಾಡಿಗಾಗಿ ಭೂಮಿ ಹಾಗೂ ಪ್ರಕೃತಿಯನ್ನು ನಂಬಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ. ಅವರು ಆಧುನಿಕ ಉಪಕರಣಗಳಿಲ್ಲದೆ, ಸರ್ಕಾರದ ಬೆಂಬಲವಿಲ್ಲದೆ ಕೃಷಿ ಮಾಡುತ್ತಿರುವುದರಿಂದ ಮತ್ತು ಅತಿವೃಷ್ಟಿ, ಅನಾವೃಷ್ಟಿಗಳಿಂದ ನಿರ್ಗತಿಕರಾಗುತ್ತಿದ್ದಾರೆ.ಆದರೆ ಸರ್ಕಾರ ಅವರಿಗೆ ಬೆಂಬಲ ನೀಡುತ್ತಿಲ್ಲ.

Advertisement

ಜಾಗತೀಕರಣದ ನೀತಿಗಳನ್ನು ಅನುಸರಿಸಿ ಸಬ್ಸಿಡಿಯನ್ನು ತೆಗೆಯುತ್ತಿದ್ದಾರೆ. ಕೃಷಿಗೆ ಸಬ್ಸಡಿ ಕೊಟ್ಟರೆ ನಷ್ಟವೆನ್ನುವ ವಾದವಿದೆ. ಆದರೆ ಮಂತ್ರಿ ಮಹೋದಯರ ಸಂಬಳವನ್ನು ದುಪ್ಪಟ್ಟು ಹೆಚ್ಚಳ ಮಾಡಿದ್ದಾರೆ. ಇದು ನಷ್ಟವಲ್ಲವೇ? ರೈತರ ಸಾಲ ಮನ್ನಾ ಮಾಡದ ಸರ್ಕಾರ ಕಾರ್ಪೊರೇಟ್‌ ಕಂಪನಿಗಳ ಲಕ್ಷಾಂತರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಇದು ನಷ್ಟವಲ್ಲವೇ? ರೈತರು ದುಡಿದ ನಾಡಿಗೆ ಅನ್ನ ನೀಡುವವರು. ಅವರು ದಶಕಗಳಿಂದ ಉಳುಮೆ ಮಾಡಿಕೊಂಡು ಬಂದಿರುವ ಅವರ ಭೂಮಿಗೆ ಹಕ್ಕಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು. ಸಂಘಟನೆಯ ರಾಜ್ಯಾಧ್ಯಕ್ಷ ಎಚ್‌.ವಿ. ದಿವಾಕರ್‌, ಅಖೀಲ ಭಾರತ ಸಮಿತಿ ಉಪಾಧ್ಯಕ್ಷ ಡಾ| ಟ.ಎಸ್‌. ಸುನೀತ್‌ ಕುಮಾರ್‌, ರಾಜ್ಯ ಕಾರ್ಯದರ್ಶಿ ಎಂ.ಶಶಿಧರ್‌ ಮಾತನಾಡಿದರು. ಜಿಲ್ಲಾಧ್ಯಕ್ಷ ಗೋವಿಂದ್‌, ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next