ಅತ್ಯಂತ ಜನಪ್ರಿಯ ಕ್ರೀಡಾ ಲೀಗ್‌ಗಳಲ್ಲಿ ಒಂದಾದ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 11ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಹಲವು ರೀತಿಯ ದಾಖಲೆಗಳು ನಿರ್ಮಾಣವಾಗಿವೆ. ಬೌಲರ್‌ಗಳನ್ನು ಬೆಂಡೆತ್ತಿ ಬ್ಯಾಟ್ಸ್‌ಮನ್‌ಗಳು ಮಿಂಚಿದರೆ, ಮಹತ್ವದ ಘಟ್ಟದಲ್ಲಿ ಬ್ಯಾಟ್ಸ್‌ಮನ್ ಗಳನ್ನು ಪೆವಿಲಿಯನ್‌ಗೆ ಕಳಿಸುವ ಮೂಲಕ ಬೌಲರ್‌ಗಳು ಮುಗುಳು ನಗೆ ಚೆಲ್ಲಿದ್ದಾರೆ. ಈ ನಡುವೆ ಕ್ಷೇತ್ರರಕ್ಷಣೆಯಲ್ಲಾದ ಕೆಲವು ಮ್ಯಾಜಿಕ್ ಕ್ಯಾಚ್ ಗಳು ಕ್ರೀಡಾಭಿಮಾನಿಗಳು ಮೂಗಿನ ಮೇಲೆ ಬೆರಳಿಡುವಂತೆ ಮಾಡಿವೆ. ಅದರಲ್ಲಿಯೂ ಎಬಿಡಿ ಹಿಡಿದ ಸೈಡರ್‌ಮ್ಯಾನ್ ಕ್ಯಾಚ್ ಪ್ರೇಕ್ಷಕರನ್ನು ಅಷ್ಟೇ ಅಲ್ಲ, ಸ್ವತಃ ಕ್ರಿಕೆಟ್ ಆಟಗಾರರನ್ನೂ ಅಚ್ಚರಿಗೊಳಿಸಿದೆ. ಸ್ಪೈಡರ್ ಮ್ಯಾನ್ ಕ್ಯಾಚ್ ಎಂದೇ ಖ್ಯಾತಿ ಪಡೆದ ಈ ಕ್ಯಾಚ್ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗಿದೆ. ಅಭಿಮಾನಿಗಳು ಆ ರೋಚಕ ಕ್ಷಣವನ್ನು ಪುನಃ ಪುನಃ ನೋಡುತ್ತಿದ್ದಾರೆ.
ಅದು, ರಾಯಲ್ ಚಾಲೆಂಜರ್ ಬೆಂಗಳೂರು(ಆರ್‌ಸಿಬಿ) ಮತ್ತು ಸನ್ ರೈಸರ್ ಹೈದರಾಬಾದ್ ನಡುವಿನ ಲೀಗ್‌ನ ಪಂದ್ಯ.ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 218 ರನ್ ಬಾರಿಸಿ ಸುಭದ್ರವಾಗಿತ್ತು. ನಂತರ ಹೈದರಾಬಾದ್ ಚೇಸಿಂಗ್ ಆರಂಭಿಸಿತು. ಈ ಹಂತದಲ್ಲಿ ಮೊಯಿನ್ ಅಲಿ ಅವರ ಓವರ್‌ನಲ್ಲಿ ಅಲೆಕ್ಸ್ ಹೇಲ್ಸ್ ಭರ್ಜರಿಯಾಗಿ ಬಾರಿಸಿದರು. ಹೇಗಿದ್ದರೂ ಸಿಕ್ಸರ್ ಹೋಯಿತು ಎಂದೇ ಕ್ರೀಡಾಭಿಮಾನಿಗಳು, ಅಷ್ಟೇ ಏಕೆ ಕ್ರೀಡಾಂಗಣದಲ್ಲಿದ್ದ ಕ್ರೀಡಾಪಟುಗಳೂ ಎಣಿಸಿದ್ದರು. ಆದರೆ, ಆಗಿದ್ದೇ ಬೇರೆ. ಅದುವರೆಗೂ ಸ್ಪೈಡರ್‌ಮ್ಯಾನ್ ಕಥೆ ಕೇಳಿದ್ದವರಿಗೆ, ಅವತ್ತು ಸ್ಪೈಡರ್‌ಮ್ಯಾನ್‌ನ ಸಾಹಸವನ್ನು ಪ್ರತ್ಯಕ್ಷ ನೋಡುವಂತಾಯಿತು.
ಇನ್ನೇನು ಚೆಂಡು ಸಿಕ್ಸರ್ ಹೋಯ್ತು ಎನ್ನುವ ಹಂತದಲ್ಲಿ ಬೌಂಡರಿ ಲೈನ್‌ನಲ್ಲಿ ಕ್ಷೇತ್ರರಕ್ಷಣೆಯಲ್ಲಿದ್ದ ಎಬಿಡಿ 1.3 ಮೀಟರ್ ಮೇಲಕ್ಕೆ ಜಂಪ್ ಮಾಡುವ ಮೂಲಕ ಒಂದೇ ಕೈನಲ್ಲಿ ಚೆಂಡನ್ನು ಹಿಡಿತಕ್ಕೆ ಪಡೆದರು. ಇದು ಇಡೀ ಕ್ರೀಡಾ ಜಗತ್ತನ್ನೇ ನಿಬ್ಬೆರಗಾಗಿಸಿತು. ಎಬಿಡಿ ಅವರ ಮೂಲಕ ನಾವು ಸ್ವತಃ ಸ್ಪೈಡರ್‌ಮ್ಯಾನ್‌ನನ್ನೇ ನೋಡಿದಂತಾಯಿತು ಎಂದೇ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟರು.
ಕ್ರಿಕೆಟ್‌ನಲ್ಲಿ ಬ್ಯಾಟಿಂಗ್, ಬೌಲಿಂಗ್ ಪ್ರದರ್ಶನ ಎಷ್ಟು ಮುಖ್ಯವೋ ಅಷ್ಟೇ ಪ್ರಮಾಣದಲ್ಲಿ ಕ್ಷೇತ್ರರಕ್ಷಣೆ ಕೂಡ ಮಹತ್ವದಾಗಿದೆ. ದಕ್ಷಿಣ ಆಫ್ರಿ ಕಾ ತಂಡದ ಮಾಜಿ ಆಟಗಾರ ಜಾಂಟಿ ರೋಡ್ಸ್ ಫಿಲ್ಡಿಂಗ್‌ನಲ್ಲಿ ಖ್ಯಾತಿ ಪಡೆದವರು. ಬ್ಯಾಟ್ಸ್‌ಮನ್ ಬಾರಿಸಿದ ಚೆಂಡು ಸ್ವಲ್ಪ ಕ್ಯಾಚ್ ಆಗುವ ಲಕ್ಷಣ ಕಂಡರೂ ಸಾಕು, ಚಿಂಕೆಯಂತೆ ಚಂಗನೆ ಚಿಗಿದು ಕ್ಯಾಚ್ ಪಡೆಯುತ್ತಿದ್ದರು. ಈ ಮೂಲಕ ಎದುರಾಳಿ ತಂಡಕ್ಕೆ ಹೋಗಬೇಕಾದ ರನ್‌ಗಳಿಗೆ ಕಡಿವಾಣ ಹಾಕುತ್ತಿದ್ದರು. ಈ ಐಪಿಎಲ್‌ನಲ್ಲಿ ಅನೇಕ ಆಕರ್ಷಕ ಕ್ಯಾಚ್‌ಗಳು ಬಂದಿವೆ. ಆದರೆ, ಸ್ಪೈಡರ್‌ಮ್ಯಾನ್ ಕ್ಯಾಚ್ ಅಭಿಮಾನಿಗಳಲ್ಲಿ ವಿಶೇಷ ಸ್ಥಾನ ಪಡೆದಿದೆ ಅನ್ನುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಅದು ಪಡೆದಿರುವ ಜನಪ್ರಿಯತೆಯೇ ಸಾಕ್ಷಿಯಾಗಿದೆ.
ನಿವೃತ್ತಿ ಆದರೂ ಐಪಿಎಲ್ ಆಡ್ತಾರೆ
360 ಡಿಗ್ರಿಯಲ್ಲಿಯೂ ಆಟವನ್ನು ಪ್ರದರ್ಶಿಸುತ್ತಿದ್ದ ದಕ್ಷಿಣ ಆಫ್ರಿಕಾದ ಎಬಿಡಿ ಅಂದರೆ, ಕ್ರಿಕೆಟ್ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಎಬಿಡಿ ಯಾವುದೇ ತಂಡದಲ್ಲಿದ್ದರೂ ಆ ತಂಡವನ್ನು ಬೆಂಬಲಿಸುವ ಅಭಿಮಾನಿಗಳ ವರ್ಗವಿದೆ. ವೈಯಕ್ತಿಕವಾಗಿ ತಂಡವನ್ನು ಗೆಲ್ಲಿಸಬಲ್ಲ ಸಾಮರ್ಥ್ಯ ಅವರಲ್ಲಿದೆ. ಇಂತಹ ಎಂಬಿಡಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದಾರೆ. ಇಂದು ದಕ್ಷಿಣ ಆಫ್ರಿಕಾ ತಂಡಕ್ಕೆ ದೊಡ್ಡ ಆತಂಕ ಎಂದೇ ಹೇಳಬಹುದು. ಆದರೆ, ಐಪಿಎಲ್ ಅಭಿಮಾನಿಗಳು ಅಂತಕ ಪಡುವ ಅಗತ್ಯ ಇಲ್ಲ. ಯಾಕೆಂದರೆ ದೇಶಿಯ ಮಟ್ಟದ ಕ್ರಿಕೆಟ್‌ನಲ್ಲಿ ಆಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಇನ್ನು ಮುಂದೆ ಎಬಿಡಿ ಅಬ್ಬರ ಅಂತಾರಾಷ್ಟ್ರೀಯ ಪಂದ್ಯದಲ್ಲಿ ನೋಡಲಾಗದಿದ್ದರೂ ಐಪಿಎಲ್‌ನಲ್ಲಿ ನೋಡಬಹುದು.