Advertisement

ಆತ್ಮ ನಿರ್ಭರ ಭಾರತ ಕನಸನ್ನು ನನಸಾಗಿಸಿ: ರಾಜ್ಯಪಾಲ ಕೋಶ್ಯಾರಿ

04:14 PM Mar 14, 2021 | Team Udayavani |

ಮುಂಬಯಿ: ಮಹಾರಾಷ್ಟ್ರದ ಜನರು ರಾಷ್ಟ್ರದ ವೈಭವಯುತ ಇತಿಹಾಸವನ್ನು ನೆನಪಿಸಿಕೊಳ್ಳಬೇಕು ಮತ್ತು ಮಹಾತ್ಮಾ ಗಾಂಧಿಯವರ ಆತ್ಮ ನಿರ್ಭರ ಭಾರತದ ಕನಸನ್ನು ನನಸಾಗಿಸಲು ಶ್ರಮಿಸುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಬೇಕು ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್‌ ಸಿಂಗ್‌ ಕೋಶ್ಯಾರಿ ಅವರು ಆಗ್ರಹಿಸಿದರು.

Advertisement

ಶುಕ್ರವಾರ ರಾತ್ರಿ ಮುಂಬಯಿಯ ಸ್ವಾತಂತ್ರ್ಯ ವೀರ ಸಾವರ್ಕರ್‌ ಸಭಾಗೃಹದಲ್ಲಿ ನಡೆದ ಆಜಾದಿ ಕಾ ಅಮೃತ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಮಹಾರಾಷ್ಟ್ರ ಸರಕಾರ ಆಯೋಜಿಸಿದ್ದ  ಸಾಂಸ್ಕೃತಿಕ ಕಾರ್ಯಕ್ರಮದ  ಅಮೃತ್‌ ಭಾರತ್‌ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಅಭಿವೃದ್ಧಿ ಹೊಂದುತ್ತಿರುವ ಸಮೃದ್ಧ ರಾಷ್ಟ್ರವಾಗಿದೆ. ದೇಶದ ಇತಿಹಾಸದಲ್ಲಿ ಸುವರ್ಣ ನೆನಪುಗಳಿವೆ. ಇನ್ನೊಂದೆಡೆ ವಸಾಹತುಶಾಹಿಯ ಕರಾಳ ಅವಧಿಯೂ ಇದೆ ಎಂದರು. ಉಪ್ಪಿಗೆ ತೆರಿಗೆ ವಿಧಿಸುವುದನ್ನು ವಿರೋಧಿಸಲು ಉಪ್ಪಿನ ಸತ್ಯಾಗ್ರಹವನ್ನು ನಡೆಸುವ ಮೂಲಕ ಗಾಂಧೀಜಿಯವರು ಸ್ವಾತಂತ್ರ್ಯ ಚಳವಳಿ ನಡೆಸಿದರು. ಮಹಾರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರ ಸೈನ್ಯವು ಭಾರತದ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದೆ ಎಂದು ಹೇಳಿದ ರಾಜ್ಯಪಾಲರು, 75 ವರ್ಷಗಳ ಭಾರತೀಯ ಸ್ವಾತಂತ್ರ್ಯದ ವರ್ಷಾಚರಣೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳ ಕಲಾವಿದರನ್ನು ರಾಜ್ಯದಲ್ಲಿ ಪ್ರದರ್ಶನಕ್ಕೆ ಆಹ್ವಾನಿಸಬೇಕು ಎಂದು ಹೇಳಿದರು.

ಸಾಂಸ್ಕೃತಿಕ ವ್ಯವಹಾರ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಅಮಿತ್‌ ದೇಶು¾ಖ್‌ ಅವರು ಮಾತನಾಡಿ, ಭಾರತ ಸ್ವಾತಂತ್ರ್ಯದ 75ನೇ ವರ್ಷಾಚರಣೆಯಂದು ದೇಶಾದ್ಯಂತ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯಲ್ಲಿ ಮಹಾರಾಷ್ಟ್ರವು ಮುನ್ನಡೆ ಸಾಧಿಸುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ ಅವಧಿಯಲ್ಲಿ ಮಹಾರಾಷ್ಟ್ರವೂ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಮಹಾಪುರುಷರನ್ನು ಈ ಉಪಕ್ರಮದ ಮೂಲಕ ಗೌರವಿಸಲಾಗುತ್ತಿರುವುದು ಸಂತೋಷದ ಸಂಗತಿ. ಸ್ವಾತಂತ್ರ್ಯ ಅಮೃತ್‌ ಮಹೋತ್ಸವವನ್ನು ಆಚರಿಸುವಾಗ ಕೊರೊನಾ ಸಾಂಕ್ರಾಮಿಕ ಮಾರ್ಗಸೂಚಿಗಳನ್ನು ನೋಡಿಕೊಳ್ಳಬೇಕು ಎಂದು ನುಡಿದರು.

ಈ ಸಂದರ್ಭ ಸಾಂಸ್ಕೃತಿಕ ವ್ಯವಹಾರಗಳ ಕಾರ್ಯದರ್ಶಿ ಸೌರವ್‌ ವಿಜಯ್‌ ಮತ್ತು ಸಾಂಸ್ಕೃತಿಕ ವ್ಯವಹಾರಗಳ ನಿರ್ದೇಶಕ ಬಿಭಿಶನ್‌ ಚಾರ್ವೆ ಉಪಸ್ಥಿತರಿದ್ದರು. ಕೋವಿಡ್ ಹಿನ್ನೆಲೆ ರಾಜ್ಯ ಸರಕಾರದ ಮಾರ್ಗಸೂಚಿಗಳ ಅನುಸಾರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next