Advertisement

ಕೃಷ್ಣೆಯ ಒಡಲಲ್ಲಿ ಮೊದಲ ಬಾರಿಗೆ ಆರತಿ- ಹಿಪ್ಪರಗಿಯಲ್ಲಿ ಹಿರಿ ಹಿರಿ ಹಿಗ್ಗಿದ ಕೃಷ್ಣೆ

05:07 PM Aug 27, 2024 | Team Udayavani |

■ ಉದಯವಾಣಿ ಸಮಾಚಾರ
ಬಾಗಲಕೋಟೆ: ಉತ್ತರ ಭಾರತದ ಗಂಗಾ ನದಿಗೆ ನಡೆಯುವ ಗಂಗಾರತಿ ಮಾದರಿಯಲ್ಲಿ ಕೃಷ್ಣಾ ನದಿಗೆ ಇದೇ ಮೊದಲ ಬಾರಿಗೆ ಕೃಷ್ಣಾರತಿ ಸಂಭ್ರಮದಿಂದ ನೆರವೇರಿತು. ವಾರಣಾಸಿಯ ಗಂಗಾರತಿ ತಂಡ ಹಾಗೂ ಮೈಸೂರು-ನಂಜನಗೂಡಿನಲ್ಲಿ ಕಾವೇರಿ ಆರತಿ ನಡೆಸುವ ಯುವಾ ಬ್ರಿಗೇಡ್‌ನ‌ ತಂಡದ ಸದಸ್ಯರು ಸುಮಾರು ಒಂದು ಗಂಟೆಗಳ ಕಾಲ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಮೈದುಂಬಿ ಹರಿಯುತ್ತಿರುವ ಕೃಷ್ಣೆಯ ಒಡಲಿಗೆ ಆರತಿ ಬೆಳಗಿದರು.

Advertisement

ವಾರಣಾಸಿಯಿಂದ ಆಗಮಿಸಿದ್ದ ಆಚಾರ್ಯ ರಣಧೀರ, ಅಮೀತ ಪಾಂಡೆ, ಸತ್ಯಂ ಮಿಶ್ರಾ, ಗೋವಿಂದ ತಿವಾರಿ, ಪ್ರಿನ್ಸ್‌ ಮಿಶ್ರಾ, ಹನುಮಾನಜಿ ಹಾಗೂ ನಂಜನಗೂಡಿನ ಯುವಾ ಬ್ರಿಗೇಡ್‌ನ‌ ಗಂಗಾರತಿ ತಂಡದ ಚಂದ್ರು, ನಿತಿನ್‌ ಮುಂತಾದವರನ್ನು ಒಳಗೊಂಡ ತಂಡ ಕೃಷ್ಣಾರತಿ ನೆರವೇರಿಸಿತು.

ಕಣ್ತುಂಬಿಕೊಂಡ ರೈತರು: ಈ ಭಾಗದ ರೈತರ ಜೀವನಾಡಿ ಕೃಷ್ಣೆಗೆ ಇದೇ ಮೊದಲ ಬಾರಿಗೆ ಸಂಭ್ರಮದಿಂದ ನಡೆದ ಕೃಷ್ಣಾರತಿ ವೀಕ್ಷಿಸಲು ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯ ನದಿತೀರದ ವಿವಿಧ ಗ್ರಾಮಗಳ ರೈತರು ಕುಟುಂಬ ಸಮೇತ ಆಗಮಿಸಿದ್ದರು. ರೈತ ಮಹಿಳೆಯರು, ಕೃಷ್ಣೆಯ ಒಡಲಿಗೆ ಪೂಜೆ ಸಲ್ಲಿಸಿದರು. ಬಳಿಕ ಪರಸ್ಪರ ಉಡಿ ತುಂಬಿದರು. ಇದಾದ ಬಳಿಕ ನದಿಯ ಒಡಲಿಗೆ ಹೋಳಿಗೆ ಸಹಿತ ತರಹೇವಾರಿ ಸಿಹಿ ಪದಾರ್ಥಗಳನ್ನು ಅರ್ಪಿಸಿದರು.

ಪ್ರತಿ ವರ್ಷ ಕೃಷ್ಣಾರತಿ: ಇದಕ್ಕೂ ಮುನ್ನ ಹಿಪ್ಪರಗಿಯ ಸಂಗಮನಾಥ ದೇವಾಲಯದ ಆವರಣದಲ್ಲಿ ಕೃಷ್ಣೆಯ ನೀರಾವರಿ ಯೋಜನೆಗಳು, ಕೃಷ್ಣೆಗೆ ಸಾಂಸ್ಕೃತಿಕ ವೈಭವದ ಕೊರಗು ಕುರಿತ ಚಿಂತನ-ಮಂಥನ ನಡೆಯಿತು. ಈ ವೇಳೆ, ಉತ್ತರಭಾರತದ ಗಂಗಾ ನದಿಗೆ ನಡೆಯುವ ಗಂಗಾರತಿ ಮಾದರಿಯಲ್ಲಿ ಕೃಷ್ಣಾರತಿಯೂ ನಿರಂತರವಾಗಿ ನಡೆಯಬೇಕು.  ಅದಕ್ಕಾಗಿ ಕೃಷ್ಣಾರತಿ ಸೇವಾ ಸಮಿತಿಯನ್ನು ಅಧಿಕೃತವಾಗಿ ರಚಿಸಿ, ಅದಕ್ಕೆ ರೈತರೇ ದೇಣಿಗೆ ನೀಡಲು ನಿರ್ಧರಿಸಿದರು. ಇದೇ ವೇಳೆ ಹಿಪ್ಪರಗಿಯ ರೈತ ಸೋಮನಾಥಗೌಡ ಪಾಟೀಲ 50 ಸಾವಿರ ರೂ. ದೇಣಿಗೆ ನೀಡಿದರು.

ಗಣ್ಯರು ಭಾಗಿ: ಕೃಷ್ಣ ಜನ್ಮಾಷ್ಟಮಿ ಹಾಗೂ ಮಾಜಿ ಸಚಿವ ಮುರಗೇಶ ನಿರಾಣಿ ಅವರ 59ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕೃಷ್ಣಾರತಿಯ ವೀಕ್ಷಣೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಬಿ. ತಿಮ್ಮಾಪುರ ತೇರದಾಳ ಶಾಸಕ ಸಿದ್ದು ಸವದಿ, ಹಿಪ್ಪರಗಿಯ ಪ್ರಭು ಮಹಾರಾಜರು, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ನಿಡಸೋಸಿಯ ನಿಜಲಿಂಗೇಶ್ವರ ಸ್ವಾಮೀಜಿ, ಆಲಗೂರಿನ ಪಂಚಮಸಾಲಿ ಪೀಠದ ಡಾ|ಮಹಾದೇವ ಶಿವಾಚಾರ್ಯ ಸ್ವಾಮೀಜಿ, ಹುಲ್ಯಾಳದ ಹರ್ಷಾನಂದ ಸ್ವಾಮೀಜಿ, ಕುಂಚನೂರು ಕಮರಿ ಮಠದ ಶ್ರೀಗಳು ಸೇರಿದಂತೆ ಸಹಸ್ರಾರು ಜನರು ಪಾಲ್ಗೊಂಡಿದ್ದರು.

Advertisement

ಕೃಷ್ಣೆಗೆ ಕಲ್ಪನೆಗೂ ಮೀರಿ ಅನ್ಯಾಯವಾಗಿದೆ. ನಮ್ಮ ಜೀವನದಿ ಕೃಷ್ಣೆಗೆ ಎಲ್ಲ ರೀತಿಯ ಗೌರವ ದೊರೆಯಬೇಕು. ಸರ್ಕಾರ ಕೃಷ್ಣಾರತಿ ನಡೆಸಬೇಕು. ಇಲ್ಲದಿದ್ದರೆ ರೈತರೊಂದಿಗೆ ನಾವೇ ಈ ಸಂಭ್ರಮ ನಡೆಸುತ್ತೇವೆ. ಅಲ್ಲದೇ ನೀರಾವರಿ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಬೇಕು. ಈ ಭಾಗದ ಕಾಳಿ ನದಿ ಸಹಿತ ಮೂರು ನದಿ ಜೋಡಣೆ ಯೋಜನೆಗಳನ್ನು ಜಾರಿಗೊಳಿಸಬೇಕು.
*ಸಂಗಮೇಶ ನಿರಾಣಿ, ಅಧ್ಯಕ್ಷರು,
ಉತ್ತರಕರ್ನಾಟಕ ನೀರಾವರಿ ಹೋರಾಟ ಸಮಿತಿ

Advertisement

Udayavani is now on Telegram. Click here to join our channel and stay updated with the latest news.

Next