Advertisement

ಹಾಸ್ಯದ ಗಣಿ ಕಿನ್ನಿಗೋಳಿಗೆ ಅರಾಟೆ ಪ್ರಶಸ್ತಿ 

12:30 AM Jan 25, 2019 | |

ಯಕ್ಷಗಾನ ಕ್ಷೇತ್ರದಲ್ಲೇ ಅಪರೂಪವೆಂಬಂತೆ 78ರ ಇಳಿವಯಸ್ಸಿನಲ್ಲೂ ಕಲೆಯನ್ನು ತಪಸ್ಸಿನಂತೆ ವೃತ್ತಿಯಾಗಿ ಅನುಸರಿಸುತ್ತಾ ಸೇವೆ ಸಲ್ಲಿಸುತ್ತಿರುವ ಹಿರಿಯ ಹಾಸ್ಯ ಕಲಾವಿದ, ಬಡಗುತಿಟ್ಟಿನಲ್ಲಿ ಕೈರವ ಎಂದೇ ಖ್ಯಾತಿ ಪಡೆದಿರುವ ಕಿನ್ನಿಗೋಳಿ ಮುಖ್ಯಪ್ರಾಣ ಅವರು 2019ನೇ ಸಾಲಿನ ದಿ|ಅರಾಟೆ ಮಂಜುನಾಥ ಸಂಸ್ಮರಣೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

Advertisement

ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾವಿದ ದಿ| ಅರಾಟೆ ಮಂಜುನಾಥ ಅವರ ಹೆಸರಿನಲ್ಲಿ ಕುಟುಂಬ ವರ್ಗದ ಸಂಯೋಜನೆಯಲ್ಲಿ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಈ ಬಾರಿ ಜ. 30ರಂದು ಬಿದ್ಕಲ್‌ಕಟ್ಟೆ ಸಮೀಪದ ಗಾವಳಿಯಲ್ಲಿರುವ ಅರಾಟೆಯವರ ಮನೆ ಯಕ್ಷಕುಟೀರದ ಸಮೀಪ ನಡೆಯಲಿದೆ. 

ಯಕ್ಷಗಾನ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಮುಖ್ಯಪ್ರಾಣ ಕಿನ್ನಿಗೋಳಿ ಅವರು ಕವಿ ಡಾ| ಎನ್‌.ನಾರಾಯಣ ಶೆಟ್ಟಿಯವರನ್ನು ಯಕ್ಷ ಗುರುಗಳಾಗಿ ಸ್ವೀಕರಿಸಿ, ಸುರತ್ಕಲ್‌ ಸೂರಪ್ಪ ಶೆಟ್ಟಿಗಾರ್‌ ಅವರಿಂದ ತೆಂಕಿನ ಹೆಜ್ಜೆಗಾರಿಕೆಯನ್ನು ಕಲಿತು ಯಕ್ಷಪಯಣವನ್ನು ಆರಂಭಿಸಿದರು. ಅನಂತರ ಮಿಜಾರು ಆಣ್ಣಪ್ಪ ಅವರಿಂದ ಹಾಸ್ಯದ ತರಬೇತಿ, ಕವತ್ತಾರು ದಿ| ಸೀತಾರಾಮ್‌ ಶೆಟ್ಟಿಗಾರ್‌ ಅವರಿಂದ ಅರ್ಥಗಾರಿಕೆಯ ತರಬೇತಿ ಪಡೆದು ಪ್ರಬುದ್ಧ ಕಲಾವಿದರಾಗಿ ರೂಪುಗೊಂಡರು. ತೆಂಕು ತಿಟ್ಟಿನ ಕುರಿತು ಸಂಪೂರ್ಣ ಒಲವು ಹೊಂದಿದ್ದ ಇವರಿಗೆ ಬಡಗಿನ ಹೆಜ್ಜೆಗಾರಿಕೆಯನ್ನು ಪರಿಚಯಿಸಿದವರು ದಿ|ಬ್ರಹ್ಮಾವರ ರಾಮ ನಾೖರಿಯವರು. ಹೀಗೆ ಹಂತ-ಹಂತವಾಗಿ ಬೆಳೆದು ತೆಂಕು-ಬಡಗು ಎರಡು ತಿಟ್ಟಿನ ಸಮರ್ಥ ಕಲಾವಿದರಾಗಿ ಇವರು ರೂಪುಗೊಂಡರು. ಆರಂಭದಲ್ಲಿ 4 ವರ್ಷ ಹವ್ಯಾಸಿ ಕಲಾವಿದರಾಗಿ ಸೇವೆಸಲ್ಲಿಸಿ ಅನಂತರ ಕಟೀಲು ಮೇಳದ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದರು. 

ಇರಾ ಸೋಮನಾಥೇಶ್ವರ ಮೇಳ, ಸುಬ್ರಹ್ಮಣ್ಯ ಮೇಳ, ಮಂತ್ರಾಲಯ ಮೇಳ, ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ, ಕುಮುಟ ಮೇಳ, ಕದ್ರಿ ಮೇಳ, ಮಂದಾರ್ತಿ ಮೇಳ ಹಾಗೂ ಇದೀಗ ಮತ್ತೆ ಕಟೀಲು ಮೇಳದಲ್ಲಿ 78ರ ಇಳಿವಯಸ್ಸಿನಲ್ಲೂ ಯಕ್ಷಪಯಣವನ್ನು ಮುಂದುವರಿಸಿದ್ದಾರೆ. ಸುಮಾರು ಮೂರ್‍ನಾಲ್ಕು ತಲೆಮಾರುಗಳ ಪ್ರಸಿದ್ಧ ಕಲಾವಿದರ ಒಡನಾಟ ಇವರಿಗಿದ್ದು, ಅವರಿಗೆಲ್ಲ ಗುರುವಾಗಿ, ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ ಹಾಗೂ ಹಿರಿಯರಾದ ನರಸಿಂಹ ಭಾಗವತರು, ಕಾಳಿಂಗ ನಾವಡರು, ಕಡತೋಕ ಮಂಜುನಾಥ ಭಾಗವತ, ಸುಬ್ರಹ್ಮಣ್ಯ ಧಾರೇಶ್ವರ, ಶಿರಿಯಾರ ಮಂಜುನಾಯ್ಕ, ಮುರೂರು ದೇವರು ಹೆಗ್ಡೆ, ಜಳವಳ್ಳಿ ವೆಂಕಟೇಶ್‌ ರಾವ್‌, ಕುಂಜಾಲು ರಾಮಕೃಷ್ಣ ಇವರ ಮೆಚ್ಚಿನ ಕಲಾವಿದರು. 

ಇದರ ಜತೆಗೆ ಆರು ದಶಕಗಳ ಕಾಲ ಯಕ್ಷಗಾನ ರಂಗದಲ್ಲಿ ಸೇವೆ ಸಲ್ಲಿಸಿದ ಕೆಲವೇ ಕೆಲವು ಕಲಾವಿದರಲ್ಲಿ ಇವರೊಬ್ಬರು ಎನ್ನುವ ಹೆಗ್ಗಳಿಕೆ ಇವರಿಗಿದ್ದು, ಈ ಯಕ್ಷ ಪಯಾಣದಲ್ಲಿ ಸಾವಿರಾರು ಪಾತ್ರಗಳಿಗೆ ಇವರು ಜೀವ ತುಂಬಿದ್ದಾರೆ. ಆದರೆ ನಾಗಶ್ರೀಯ ಕೈರವನ ಪಾತ್ರ ಇವರಿಗೆ ಅತ್ಯಂತ ತೃಪ್ತಿ ತಂದ ಪಾತ್ರವಾಗಿದೆ. ಜತೆಗೆ ನಳದ ಮಯಂತಿಯ ಬಾವುಕ, ವಿಜಯ, ರಜಕ, ಶನೀಶ್ವರ ಮಹಾತ್ಮೆಯ ಶನಿಪೀಡಿತ ವಿಕ್ರಮ, ಚೆಲುವೆ ಚಿತ್ರಾವತಿಯ ಅಡುಗೋಲಜ್ಜಿ ಹೀಗೆ ಹಲವಾರು ಪಾತ್ರಗಳ ಮೂಲಕ ಜನಮನ್ನಣೆ ಗಳಿಸಿದ್ದಾರೆ.

Advertisement

ರಾಜೇಶ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next