ನವದೆಹಲಿ:2022ರಲ್ಲಿ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಪಕ್ಷದ ವರಿಷ್ಠ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಂಗಳವಾರ(ಡಿಸೆಂಬರ್ 15, 2020) ಘೋಷಿಸಿದ್ದಾರೆ.
ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕೇಜ್ರಿವಾಲ್, ಒಂದು ವೇಳೆ ಆಪ್ ಗೆ ಅಧಿಕಾರ ಸಿಕ್ಕಿದರೆ ನೆರೆಯ ರಾಜ್ಯದಲ್ಲಿ ಭ್ರಷ್ಟಾಚಾರ ರಹಿತ ಸರ್ಕಾರವನ್ನು ರಚಿಸುವುದಾಗಿ ಹೇಳಿದರು. ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಈಗಾಗಲೇ ಪಕ್ಷ ನೀಡಿರುವ ಭರವಸೆಯಂತೆ ಸರ್ಕಾರ ನಡೆಸುತ್ತಿರುವುದಾಗಿ ತಿಳಿಸಿದರು.
ಆಮ್ ಆದ್ಮಿ ಪಕ್ಷದ ರಾಜಕೀಯ ಹಾದಿಯನ್ನು ಇನ್ನಷ್ಟು ವಿಸ್ತರಿಸಲು ಶ್ರಮವಹಿಸುತ್ತಿರುವುದಾಗಿ ಕೇಜ್ರಿವಾಲ್ ತಿಳಿಸಿದ್ದು, ಕಳೆದ ಎಂಟು ವರ್ಷಗಳಿಂದ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ಸರ್ಕಾರ ನಡೆಸುತ್ತಿದೆ. ಪಂಜಾಬ್ ನಲ್ಲಿ ಆಪ್ ಮುಖ್ಯ ವಿಪಕ್ಷವಾಗಿದೆ.ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ ಎಂಬುದಾಗಿ ಇಂದು ಮತ್ತೊಂದು ಘೋಷಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ಪರಿಷತ್ ನಲ್ಲಿ ಸದಸ್ಯರ ಹೊಯ್ ಕೈ: ಹಿರಿಯ ಸಚಿವರೊಂದಿಗೆ ಸಿಎಂ ಯಡಿಯೂರಪ್ಪ ಸಭೆ
ಉತ್ತರಪ್ರದೇಶದ ಜನರು ಆರೋಗ್ಯ, ಶಿಕ್ಷಣದಂತಹ ಮೂಲಭೂತ ವ್ಯವಸ್ಥೆಗಾಗಿ ದೆಹಲಿಗೆ ಬರಬೇಕಾದ ಅನಿವಾರ್ಯತೆ ಇದೆ. ಭಾರತದ ಅತೀ ದೊಡ್ಡ ರಾಜ್ಯ, ಇನ್ನೂ ಅಭಿವೃದ್ದಿ ಹೊಂದಿಲ್ಲವೇ? ಎಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
ಉತ್ತರಪ್ರದೇಶದ ಕೊಳಕು ರಾಜಕೀಯ ಮತ್ತು ಭ್ರಷ್ಟ ರಾಜಕೀಯ ಮುಖಂಡರಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಯುಪಿ ಜನರು ಎಲ್ಲಾ ಪಕ್ಷಗಳಿಗೂ ಅಧಿಕಾರ ನಡೆಸುವ ಅವಕಾಶ ಕೊಟ್ಟಿದ್ದಾರೆ. ಆದರೆ ಎಲ್ಲಾ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಹೊಸ ದಾಖಲೆಯನ್ನೇ ಬರೆದಿರುವುದಾಗಿ ಕೇಜ್ರಿವಾಲ್ ದೂರಿದರು.