ನವದೆಹಲಿ: ಕೊಳಗೇರಿ ಪ್ರದೇಶದಲ್ಲಿರುವ ಮನೆಗಳನ್ನು ನೆಲಸಮಗೊಳಿಸಿದ್ದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ ಶಾಸಕರು ಮತ್ತು ಕೊಳಗೇರಿ ನಿವಾಸಿಗಳು ಶನಿವಾರ (ಜನವರಿ 21)ನವದೆಹಲಿಯ ಲೋಧಿ ರಸ್ತೆಯಲ್ಲಿರುವ ಬಿಜೆಪಿ ಸಂಸದ ರಮೇಶ್ ಬಿಧುರಿ ನಿವಾಸದ ಹೊರಭಾಗದಲ್ಲಿ ಧರಣಿ ನಡೆಸಿರುವ ಘಟನೆ ನಡೆದಿದೆ.
ಇದನ್ನೂ ಓದಿ:ರಾಯ್ಪುರದಲ್ಲಿ ಬೌಲರ್ ಗಳ ಮೇಲಾಟ; ವೇಗಿಗಳ ದಾಳಿಗೆ ಕಂಗಾಲಾದ ಕಿವೀಸ್
ದಕ್ಷಿಣ ದೆಹಲಿಯಲ್ಲಿನ ತುಘಲಕ್ ಬಾದ್ ನ ಕೊಳಗೇರಿಯಲ್ಲಿರುವ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಶಾಸಕರಾದ ಅತಿಶಿ, ಮದನ್ ಲಾಲ್, ಕಟಾರ್ ಸಿಂಗ್ ತನ್ವರ್ ಮತ್ತು ಸಾಹಿರಾಮ್ ಪಹಲ್ವಾನ್ ಪ್ರತಿಭಟನೆ ನಡೆಸಿದರು.
ಬಿಜೆಪಿ ಸಂಸದರ ನಿವಾಸದ ಹೊರಭಾಗದಲ್ಲಿ “ಬಿಜೆಪಿಯವರಿಗೆ ನಾಚಿಕೆಯಾಗಬೇಕು, ಕೊಳಗೇರಿ ನಿವಾಸ ಧ್ವಂಸಗೊಳಿಸುವುದನ್ನು ನಿಲ್ಲಿಸಿ” ಎಂಬ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿರುವುದಾಗಿ ವರದಿ ತಿಳಿಸಿದೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಉಚಿತವಾಗಿ ಫ್ಲ್ಯಾಟ್ ನೀಡುವುದಾಗಿ ಭರವಸೆ ನೀಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕೊಳಗೇರಿ ನಿವಾಸಿಗಳಿಗೆ ನೋಟಿಸ್ ಕಳುಹಿಸುತ್ತಿದೆ ಎಂದು ಆಪ್ ಹಿರಿಯ ನಾಯಕಿ ಅತಿಶಿ ಪಿಟಿಐ ಜತೆ ಮಾತನಾಡುತ್ತ ತಿಳಿಸಿದ್ದಾರೆ.