ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿದ್ದು, ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಆಮ್ ಆದ್ಮಿ ಪಕ್ಷದ ಶಾಸಕ ಶೋಯಬ್ ಇಕ್ಬಾಲ್ ಶುಕ್ರವಾರ(ಏಪ್ರಿಲ್ 30) ಆಗ್ರಹಿಸಿದ್ದಾರೆ.
ಮಾಟಿಯಾ ಮಹಲ್ ಕ್ಷೇತ್ರದ ಶಾಸಕ ಇಕ್ಬಾಲ್ ಕಾಂಗ್ರೆಸ್ ಪಕ್ಷವನ್ನು ತೊರೆದು ಕಳೆದ ವರ್ಷ ಆಪ್ ಟಿಕೆಟ್ ನಿಂದ ದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಎರಡನೇ ಕೋವಿಡ್ ಅಲೆಯಲ್ಲಿ ತಾನಾಗಲಿ ಅಥವಾ ಸರ್ಕಾರವಾಗಲಿ ಜನರಿಗೆ ಯಾವುದೇ ನೆರವು ನೀಡಲು ಸಾಧ್ಯವಿಲ್ಲ ಎಂದು ಇಕ್ಬಾಲ್ ತಿಳಿಸಿರುವುದಾಗಿ ವರದಿ ಹೇಳಿದೆ.
ಇಕ್ಬಾಲ್ ಬೇಡಿಕೆ ಬಗ್ಗೆ ಆಮ್ ಆದ್ಮಿ ಪಕ್ಷ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ಲಭ್ಯವಾಗಿಲ್ಲ. ಈ ಸಂದರ್ಭದಲ್ಲಿ ನಮ್ಮ ಸರ್ಕಾರ ಜನರಿಗೆ ಸಾಥ್ ನೀಡುವಲ್ಲಿ ವಿಫಲವಾಗಿದೆ. ಆರು ಬಾರಿ ಶಾಸಕನಾಗಿರುವ ನನ್ನ ಮಾತನ್ನು ಯಾರು ಕೇಳಿಸಿಕೊಳ್ಳುತ್ತಿಲ್ಲ, ಅಲ್ಲದೇ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇಕ್ಬಾಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಕೋವಿಡ್ ನಿಭಾಯಿಸುವಲ್ಲಿ ವಿಫಲವಾಗಿದೆ. ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ. ಇಲ್ಲದಿದ್ದರೆ ದೆಹಲಿ ನಗರಗಳಲ್ಲಿ ಕೇವಲ ಹೆಣದ ರಾಶಿಗಳು ಕಾಣಸಿಗಬಹುದು ಎಂದು ಇಕ್ಬಾಲ್
ಕಳವಳವ್ಯಕ್ತಪಡಿಸಿದ್ದಾರೆ.