ದೇವನಹಳ್ಳಿ:ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿದಿನ ತಂಡೋಪತಂಡವಾಗಿ ಜನರು ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗುತ್ತಿದ್ದು, 2023ರಲ್ಲಿ ನಡೆಯುವ ಚುನಾವಣೆಯಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷದ ಗೆಲುವು ಖಚಿತ ಎಂದು ಆಮ್ ಆದ್ಮಿ ಪಕ್ಷದ ಬೆಂ.ಗ್ರಾ.ಜಿಲ್ಲಾ ಉಸ್ತುವಾರಿ ಬಿ.ಕೆ.ಶಿವಪ್ಪ ತಿಳಿಸಿದರು.
ಪಟ್ಟಣದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಪಕ್ಷದ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಕ್ಷ, ಪ್ರಾಮಾಣಿಕ ಹಾಗೂ ಭ್ರಷ್ಟಾಚಾರ ಮುಕ್ತ ಜನ ಸಾಮಾನ್ಯರ ಪರವಾದ ದೆಹಲಿ ಮಾದರಿ ಆಡಳಿತ ಕರ್ನಾಟಕ ರಾಜ್ಯಕ್ಕೂ ಬೇಕೆಂದು ಈಗಾಗಲೇ ಜನ ತೀರ್ಮಾನಿಸಿದ್ದಾರೆ. ಮುಂಬರುವ 2023ರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನೊಂದಿಗೆ ಪಕ್ಷದ ಸರ್ಕಾರ ರಚನೆ ಆಗಲಿದೆ ಎಂದರು.
ದೇಶದಲ್ಲಿ ಭ್ರಷ್ಟಾಚಾರ ತಾಂಡವ: ಆಮ್ ಆದ್ಮಿ ಪಕ್ಷದ ದೇವನಹಳ್ಳಿ ಟೌನ್ ಘಟಕದ ಅಧ್ಯಕ್ಷ ಬಿ.ಕೆ.ಲೋಕೇಶ್ ಕುಮಾರ್ ಮಾತನಾಡಿ, ದೇಶದಲ್ಲಿ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜನ ಸಾಮಾನ್ಯರು ನೆಮ್ಮದಿಯಿಂದ ಬದುಕಬೇಕಾದರೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.
ಶ್ರೀನಾಥ್, ವೆಂಕಟೇಶ್, ಮಹಬೂಬ್ ಪಾಷ ಅವರ ನೇತೃತ್ವದಲ್ಲಿ ಅನೇಕರು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು. ಆಮ್ ಆದ್ಮಿ ಪಕ್ಷದ ವಿಜಯಪುರ ಹೋಬಳಿ ಅಧ್ಯಕ್ಷ ದೇವರಾಜ್, ವಿಜಯಪುರ ಟೌನ್ ಅಧ್ಯಕ್ಷ ಮಂಜುನಾಥ್, ಚನ್ನರಾಯಪಟ್ಟಣ ಹೋಬಳಿ ಅಧ್ಯಕ್ಷ ಬಿ.ಕೆ.ದೇವರಾಜ್, ದೇವನಹಳ್ಳಿ ಟೌನ್ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ದೇವನಹಳ್ಳಿ ಟೌನ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶಾಯಿದ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷೆ ರೂಪಾ, ವಿಜಯಪುರ ಟೌನ್ ಅಲ್ಪ ಸಂಖ್ಯಾತರ ಮಹಿಳಾ ಘಟಕದ ಅಧ್ಯಕ್ಷೆ ನಗೀನಾ, ಕ್ರೀಡಾ ವಿಭಾಗದ ಅಧ್ಯಕ್ಷ ಇಮ್ರಾನ್ ಹಾಗೂ ಮತ್ತಿತರರು ಇದ್ದರು.